ಸಾರಾಂಶ
ಹಾವೇರಿ: ಕುಟುಂಬದಲ್ಲಿ ಪರಸ್ಪರ ತಿಳುವಳಿಕೆ ಮೂಡಿಸಿ, ಮಾತೆಯೇ ಮನೆಯ ನಿರ್ಮಾತೃ ಎಂಬ ಸಂದೇಶ ಕೊಡುವ ಚಲನ ಚಿತ್ರಗಳು ಈಗ ಬೇಕಾಗಿವೆ ಎಂದು ಇಲ್ಲಿಯ ಅಶ್ವಿನಿ ನಗರದಲ್ಲಿರುವ ನೂತನ ಸಾಯಿಬಾಬಾ ದೇವಸ್ಥಾನ ಸಮಿತಿಯ ಕಾರ್ಯದರ್ಶಿ, ಇಲೇಕ್ಟ್ರಾನಿಕ್ ಉದ್ಯಮಿ ವಿಜಯಕುಮಾರ ಗೊಡಚಿ ಹೇಳಿದರು. ಹೊಂಗನಸು ಚಿತ್ರಸಂಸ್ಥೆಯ ಎರಡನೆಯ ಚಿತ್ರವಾದ ವಿಜು ದಿ ಇನ್‌ಸ್ಪೀರಿಷನ್ ಎಂಬ ಚಿತ್ರಕ್ಕೆ ಬಸವ ಜಯಂತಿ ದಿನದಂದು ಚಾಲನೆ ನೀಡಿ ಅವರು ಮಾತನಾಡಿದರು. ರಾಜೇಶ್ವರಿ ರವಿ ಸಾರಂಗಮಠ ಅವರ ವಿಕಲಾಂಗ ಗ್ರಾಮೀಣ ಚೇತನೆ ವಿಜೂ ಎಂಬ ಕಾದಂಬರಿ ಆಧಾರಿತ ಚಿತ್ರದ ಶುಭಾರಂಭವಾಯಿತು. ಯುವ ನಿರ್ದೇಶಕ ಗುರು ಹಿರೇಮಠ ಅವರು ಸ್ಥಳೀಯ ಪ್ರತಿಭೆಗಳನ್ನು ಗುರುತಿಸುವ ಮತ್ತು ಉತ್ತರ ಕರ್ನಾಟಕದ ಬೀಸು ಭಾಷೆಯನ್ನು ಬಳಸಿ ಚಿತ್ರ ಕಥೆಯನ್ನು ಹೆಣದಿದ್ದು, ಇದೊಂದು ಕುಟುಂಬ ಸಾಮರಸ್ಯ ಸಂದೇಶದ ಚಿತ್ರವಾಗಿದೆ ಎಂದರು.ಈ ವೇಳೆ ಸಮಾರಂಭದಲ್ಲಿ ಸಾಯಿ ಮಂದಿರದ ಗುಡ್ಡನಗೌಡ ಪಾಟೀಲ, ಸಾಹಿತಿ ಸತೀಶ ಕುಲಕರ್ಣಿ, ದಲಿತ ಸಂಘರ್ಷ ಸಮಿತಿಯ ಸಂಜೀವಗಾಂಧಿ ಸಂಜೀವಣ್ಣನವರ, ಲೇಖಕಿ ರಾಜೇಶ್ವರಿ, ಚಂದ್ರಶೇಖರ ಮಾಳಗಿ, ರವಿ ಸಾರಂಗಮಠ, ಕಾರ್ತಿಕ್, ಚಿತ್ರದ ನಿರ್ಮಾಪಕ ಅಭಿಲಾಷ ಜೋಶಿ, ಕ್ಯಾಮರಾಮನ್ ವಿದ್ಯಾಧರ ಕೊಳ್ಳಿ, ಅನಿತಾ ಮಂಜುನಾಥ ಪಾಲ್ಗೊಂಡಿದ್ದರು. ಚಿತ್ರದ ಕಲಾವಿದರಾದ ಲತಾ ಪಾಟೀಲ, ಶಂಕರ ತುಮ್ಮಣ್ಣನವರ, ಪಲ್ಲವಿ ಪ್ರಕಾಶ ಮುಂತಾದವರು ಹಾಜರಿದ್ದರು.