ಸಾರಾಂಶ
ಕನ್ನಡಪ್ರಭ ವಾರ್ತೆ ಕುಂದಾಪುರ
ಇತಿಹಾಸ ಪ್ರಸಿದ್ಧ ಕ್ಷೇತ್ರ ಇಲ್ಲಿನ ಮಾರಣಕಟ್ಟೆಯ ಶ್ರೀ ಬ್ರಹ್ಮಲಿಂಗೇಶ್ವರ ದೇವಾಲಯಕ್ಕೆ ಭಾನುವಾರ ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಭೇಟಿ ದೇವರ ದರ್ಶನ ಪಡೆದರು, ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.ಸಚಿವರನ್ನು ದೇವಾಲಯಕ್ಕೆ ಸಂಪ್ರದಾಯದಂತೆ ಪಂಚವಾದ್ಯ ಸಹಿತವಾಗಿ ಪೂರ್ಣಕುಂಭ ಕಲಶದೊಂದಿಗೆ ಬರಮಾಡಿಕೊಳ್ಳಲಾಯಿತು. ಶ್ರೀ ದೇವರಿಗೆ ಮಂಗಳಾರತಿ ಸಲ್ಲಿಸಿದ ಸಚಿವರನ್ನು ಕ್ಷೇತ್ರದ ಪರವಾಗಿ ಆಡಳಿತ ಧರ್ಮದರ್ಶಿ ಸದಾಶಿವ ಶೆಟ್ಟಿ ಅವರು ಗೌರವಿಸಿದರು.
ಸಚಿವರೊಂದಿಗೆ ಜಿ.ಪಂ. ಮಾಜಿ ಅಧ್ಯಕ್ಷ ರಾಜು ಎಸ್. ಪೂಜಾರಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಮಲ್ಲಿಕಾ ಶೆಟ್ಟಿ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್‌ಕುಮಾರ ಶೆಟ್ಟಿ ಗುಡಿಬೆಟ್ಟು, ದೇವಸ್ಥಾನದ ಆಡಳಿತ ಧರ್ಮದರ್ಶಿ ಸದಾಶಿವ ಶೆಟ್ಟಿ, ಅಧೀಕ್ಷಕ ನಾರಾಯಣ ಶೆಟ್ಟಿ, ಅರ್ಚಕರಾದ ನಾಗೇಶ ಮಂಜರು, ನರಸಿಂಹ ಮಂಜರು, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್‌ಕುಮಾರ ಶೆಟ್ಟಿ ಮುಂತಾದವರಿದ್ದರು.ಹೆಚ್ಚೆಚ್ಚು ಭಕ್ತರು ಆಗಮಿಸುವ ಮೈಸೂರಿನ ಚಾಮುಂಡೇಶ್ವರಿ, ಬಳ್ಳಾರಿಯ ಹುಲಿಯಮ್ಮ ಹಾಗೂ ಘಾಟಿ ಸುಬ್ರಮಣ್ಯ ದೇವಸ್ಥಾನಗಳ ಉಸ್ತುವಾರಿಗೆ ಪ್ರಾಧಿಕಾರ ರಚನೆಯ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ರಾಜ್ಯ ಮುಜರಾಯಿ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.ಅವರು ಭಾನುವಾರ ಇಲ್ಲಿನ ಮಾರಣಕಟ್ಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಜರಾಯಿ ಇಲಾಖೆಯ ದೇವಸ್ಥಾನಗಳ ಆಸ್ತಿಯನ್ನು ಸರ್ವೇ ಮಾಡಲು ಈಗಾಗಲೇ ಕಂದಾಯ ಇಲಾಖೆಯ ಜೊತೆ ಕ್ರಮ ವಹಿಸಲಾಗಿದೆ. ಇಲಾಖೆಗೆ ಆಸ್ತಿಗಳು ಪರಭಾರೆ ಅಥವಾ ಅತಿಕ್ರಮಣವಾಗಿದ್ದರೇ ಹಿಂದಕ್ಕೆ ಪಡೆಯಲು ಸ್ವಷ್ಟ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.ಮುಜರಾಯಿ ದೇವಸ್ಥಾನದ ಎ, ಬಿ ದರ್ಜೆಯ ನೌಕರರನ್ನು ಹೊರತುಪಡಿಸಿ ಉಳಿದವರನ್ನು ಇಲಾಖೆಯ ಇತರೇ ದೇವಾಲಯಗಳಿಗೆ ಅಂತರ್ ವರ್ಗಾವಣೆ ಮಾಡುವ ಪ್ರಾಸ್ತಾಪ ಇಲ್ಲ. ಆದರೆ ನೌಕರರ ಮೇಲೆ ನಿರ್ದಿಷ್ಟ ದೂರುಗಳು ಬಂದಲ್ಲಿ ತನಿಖೆ ನಡೆಸಿ ವರ್ಗಾವಣೆಯೂ ಸೇರಿದಂತೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.
ಕೊಲ್ಲೂರು ಸೇರಿದಂತೆ ಮುಜರಾಯಿ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗಳ ನೇಮಕಾತಿಯ ಕುರಿತಂತೆ ಸದ್ಯವೇ ತೀರ್ಮಾನ ಕೈಗೊಳ್ಳುವುದಾಗಿ ಸಚಿವರು ಹೇಳಿದರು.ಕೊಲ್ಲೂರು ಅವ್ಯವಸ್ಥೆ ತನಿಖೆ:ಕೊಲ್ಲೂರು ಪರಿಸರದಲ್ಲಿ ಒಳಚರಂಡಿ ಅವ್ಯವಸ್ಥೆಯಿಂದ ಇಲ್ಲಿನ ಧಾರ್ಮಿಕತೆ ಧಕ್ಕೆಯಾಗುತ್ತಿರುವ ದೂರಿದ್ದು, ಶೀಘ್ರ ವರದಿ ತರಿಸಿ, ಸಮಗ್ರ ತನಿಖೆ ನಡೆಸುವುದಾಗಿ ಸಚಿವರು ಹೇಳಿದರುಮುಜರಾಯಿ ಇಲಾಖೆಯ ಹಣವನ್ನು ಇಲಾಖೆಯ ಉದ್ದೇಶಗಳಿಗಲ್ಲದೆ ಬೇರೆ ಉದ್ದೇಶಗಳಿಗೆ ಬಳಕೆ ಮಾಡುವುದು ಸಾಧ್ಯವಿಲ್ಲ. ಮುಜರಾಯಿ ದೇವಸ್ಥಾನಗಳಿಂದ ಆಗಿರುವ ಕಾಮಗಾರಿಗಳ ನಿರ್ವಹಣೆ ಕೂಡ ದೇವಸ್ಥಾನದ್ದೆ ಆಗಿರುತ್ತದೆ. ಕೊಲ್ಲೂರಿನಲ್ಲಿ ಒಳಚರಂಡಿ ಯೋಜನೆಗೆ ಬಳಕೆಯಾಗಿರುವ ಇಲಾಖೆ ಅನುದಾನದ ಮಾಹಿತಿ ಪಡೆದುಕೊಳ್ಳುತ್ತೇನೆ. ಯೋಜನೆಯ ನಿರ್ವಹಣೆಯ ಬಗ್ಗೆಯೂ ಮಾಹಿತಿ ಪಡೆದುಕೊಳ್ಳುತ್ತೇನೆ. ತಪ್ಪಾಗಿದ್ದಲ್ಲಿ ಖಂಡಿತಾ ಕ್ರಮ ಕೈಗೊಳ್ಳುತ್ತೇನೆ ಎಂದರು.
ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾದ ವಂಡಬಳ್ಳಿ ಜಯರಾಮ್ ಶೆಟ್ಟಿ, ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಮುಖಂಡ ಶಂಕರ ಶೆಟ್ಟಿ, ಬೆಂಗಳೂರಿನ ಉದ್ಯಮಿ ರಾಮಚಂದ್ರ ರೆಡ್ಡಿ, ಮಾಜಿ ಕಾರ್ಪೋರೇಟರ್ ನಾಗರಾಜ್ ಇದ್ದರು.