ಮೂಲ್ಕಿ: ಮುಕ್ಕ ಶ್ರೀನಿವಾಸ ವಿಶ್ವವಿದ್ಯಾಲಯ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಕ್ಯಾಂಪಸ್‌ನಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಸ್ವಯಂಚಾಲಿತ ವಿದ್ಯುತ್ ವಾಹನ ಮತ್ತು ಎಐ ರಿಸೆಪ್ಷನ್ ರೋಬೋಟ್‌ನ ಯಶಸ್ವಿ ಪ್ರದರ್ಶನ ಗುರುವಾರ ನಡೆಯಿತು. ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಆರ್ಥಿಕ ಸಹಕಾರದೊಂದಿಗೆ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅಧ್ಯಾಪಕರ ಮಾರ್ಗದರ್ಶನದಲ್ಲಿ ಈ ಎರಡು ನವೋದ್ಯಮ ಯೋಜನೆಗಳನ್ನು ಅಭಿವೃದ್ಧಿಪಡಿಸಿದ್ದು, ಕಾರ್ಯಕ್ರಮದಲ್ಲಿ ಶ್ರೀನಿವಾಸ ವಿವಿಯ ಕುಲಾಧಿಪತಿ ಡಾ. ಎ. ಶ್ರೀನಿವಾಸ ರಾವ್, ವಿಶ್ವಸ್ತ ಮಂಡಳಿ ಸದಸ್ಯೆ ಎ. ವಿಜಯಲಕ್ಷ್ಮಿ ಆರ್. ರಾವ್, ಉಪಕುಲಪತಿ ಡಾ. ಸತ್ಯನಾರಾಯಣ ರೆಡ್ಡಿ, ಕುಲಸಚಿವ ಡಾ. ಅನಿಲ್ ಕುಮಾರ್, ಅಭಿವೃದ್ಧಿ ವಿಭಾಗದ ಕುಲಸಚಿವ ಡಾ. ಅಜಯ್ ಕುಮಾರ್, ಸಹಾಯಕ ಕುಲಸಚಿವ ಡಾ. ಜಯಶ್ರೀ ಬೋಳಾರ್, ಎಸ್‌ಯುಐಇಟಿ ಮುಖ್ಯಸ್ಥ ಡಾ. ರಾಮಕೃಷ್ಣ ಎನ್. ಹೆಗಡೆ ಹಾಗೂ ಸಂಶೋಧನಾ ವಿಭಾಗದ ನಿರ್ದೇಶಕ ಡಾ. ಪ್ರವೀಣ್ ಬಿ.ಎಂ. ಉಪಸ್ಥಿತರಿದ್ದರು.
‘ಶ್ರೀ ವಾಹನ್’ ಎಐ ಆಧಾರಿತ ಸ್ವಯಂಚಾಲಿತ ವಿದ್ಯುತ್ ವಾಹನದಲ್ಲಿ ಲಿಡಾರ್, ಎಐ ವಿಷನ್ ಸಿಸ್ಟಮ್, ಜಿಪಿಎಸ್ ನ್ಯಾವಿಗೇಷನ್ ಮತ್ತು ಎಐ ಅಸಿಸ್ಟೆಂಟ್ ಅಳವಡಿಸಲಾಗಿದೆ. ಈ ವಾಹನವು ಪೂರ್ವನಿರ್ಧರಿತ ಮಾರ್ಗದಲ್ಲಿ ಸಂಪೂರ್ಣ ಸ್ವಯಂಚಾಲಿತವಾಗಿ ಸಂಚರಿಸುವ ಸಾಮರ್ಥ್ಯ ಹೊಂದಿದ್ದು, ಸುರಕ್ಷತೆಗಾಗಿ ರಿಮೋಟ್ ಕಂಟ್ರೋಲ್ ಓವರ್‌ರೈಡ್ ಸೌಲಭ್ಯವೂ ಇದೆ. ಈ ಯೋಜನೆಗೆ ಪ್ರೊ. ವಿಶ್ವಾಸ್ ಸಿ. ಶೆಟ್ಟಿ ಮಾರ್ಗದರ್ಶನ ನೀಡಿದ್ದು, ರಿಸರ್ಚ್ ಅಸೋಸಿಯೇಟ್ ವಿಶಾಕ್ ಮೆಂಡನ್ ಆರ್ ಆ್ಯಂಡ್ ಡಿ ಲೀಡ್ ಆಗಿ ಕಾರ್ಯನಿರ್ವಹಿಸಿದ್ದಾರೆ. ವಿದ್ಯಾರ್ಥಿಗಳಾದ ಶ್ರೇಯಸ್, ಅದ್ವಿತೀಯ, ಉಜ್ವಲ್, ಅಕ್ಷಯ್, ಮಂಜುನಾಥ್ ಮತ್ತು ಪ್ರಖ್ಯಾತ್ ಈ ಯೋಜನೆಯ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.ಇನ್ನೊಂದು ಪ್ರಮುಖ ಆವಿಷ್ಕಾರವಾದ ‘ಶ್ರೀನಿಬೋಟ್’ 5 ಅಡಿ ಎತ್ತರದ ಎಐ ಸ್ವಾಗತ ಮತ್ತು ಮಾಹಿತಿ ಸಹಾಯಕ ರೋಬೋಟ್ ಆಗಿದೆ. ಈ ರೋಬೋಟ್ ವಿಶ್ವವಿದ್ಯಾಲಯಕ್ಕೆ ಆಗಮಿಸುವ ವಿದ್ಯಾರ್ಥಿಗಳು, ಪೋಷಕರು ಮತ್ತು ಅತಿಥಿಗಳನ್ನು ಸೌಹಾರ್ದಯುತವಾಗಿ ಸ್ವಾಗತಿಸಿ, ನೈಸರ್ಗಿಕ ಧ್ವನಿ ಸಂವಾದದ ಮೂಲಕ ಪ್ರಶ್ನೆಗಳಿಗೆ ಉತ್ತರಿಸುತ್ತದೆ. 8ರಿಂದ 10 ಗಂಟೆಗಳ ಬ್ಯಾಟರಿ ಬ್ಯಾಕಪ್, 11.6 ಇಂಚಿನ ಸಂವಾದಾತ್ಮಕ ಟಚ್ ಡಿಸ್‌ಪ್ಲೇ, ಮುಖ ಪತ್ತೆ ಮತ್ತು ಗುರುತಿಸುವಿಕೆ ಹಾಗೂ ಬಹುಭಾಷಾ ಸಂವಾದದ ಸಾಮರ್ಥ್ಯ ಇದರ ಪ್ರಮುಖ ವೈಶಿಷ್ಟ್ಯಗಳಾಗಿವೆ. ಈ ಯೋಜನೆಗೆ ಅಖಿಲ್ ಕೆ.ಪಿ. ಮಾರ್ಗದರ್ಶನ ನೀಡಿದ್ದು, ರಿಸರ್ಚ್ ಅಸೋಸಿಯೇಟ್‌ಗಳಾದ ನಿಕೇತ್ ಜಾದವ್, ಜೋಯಲ್ ಜೋಸ್ ಮತ್ತು ಸಮರ್ಥ್ ನಾಗನೂರ್ ಸಮನ್ವಯಗೊಳಿಸಿದ್ದಾರೆ.