ಮುಕ್ತಾ ಶಂಕರ್ “ಉತ್ತಮ ಶಿಕ್ಷಕಿ” ಕ್ರಿಯಾಶೀಲತೆಗೆ ಸಂದ ಗೌರವ

| Published : Sep 05 2025, 01:00 AM IST

ಸಾರಾಂಶ

ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಶಿಕ್ಷಕಿಯಾಗುತ್ತಾರೆ. ಸಾಹಿತ್ಯಿಕ ವಲಯದಲ್ಲಿ ಸಾಹಿತಿಯೂ ಆಗುತ್ತಾರೆ.

ಕಾರವಾರ: ಇವರು ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಶಿಕ್ಷಕಿಯಾಗುತ್ತಾರೆ. ಸಾಹಿತ್ಯಿಕ ವಲಯದಲ್ಲಿ ಸಾಹಿತಿಯೂ ಆಗುತ್ತಾರೆ. ಸಂಘಟಕಿಯಾಗಿ, ನಿರೂಪಕಿಯಾಗಿ ಹೀಗೆ ಹತ್ತು ಹಲವೆಡೆ ಸಕ್ರಿಯವಾಗಿ ಕ್ರಿಯಾಶೀಲವಾಗಿ ತೊಡಗಿಕೊಂಡ ಮುಕ್ತಾಬಾಯಿ ಹೆಗಡೆ (ಮುಕ್ತಾ ಶಂಕರ) ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆ ಮುಖ್ಯಾಧ್ಯಾಪಕಿ. ಇವರಿಗೀಗ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಎಂಬ ಪ್ರಶಸ್ತಿಯ ಗರಿ.

ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಕಳೆದ 30 ವರ್ಷಗಳಿಂದ ಮುಖ್ಯಾಧ್ಯಾಪಕಿಯಾಗಿ ಮುಕ್ತಾ ಶಂಕರ ಕನ್ನಡ ಭಾಷಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಪಾಠಗಳ ಸಮಗ್ರ ಅಧ್ಯಯನ ಮಾಡಿಯೇ ಬೋಧನೆ ಮಾಡುತ್ತಾರೆ. ಕುಮಾರವ್ಯಾಸ ಭಾರತ, ಕುವೆಂಪು ರಾಮಾಯಣ ದರ್ಶನ, ಜೈಮಿನಿ ಭಾರತ ಸೇರಿದಂತೆ ಎಲ್ಲ ರೀತಿಯ ಹಳಗನ್ನಡ ಗದ್ಯ-ಪದ್ಯಗಳನ್ನು ಸುಂದರವಾಗಿ ಹಾಡಿ ವ್ಯಾಖ್ಯಾನಿಸುವ ಪರಿಪೂರ್ಣತೆ ಬೆಳೆಸಿಕೊಂಡಿರುವುದು ಇವರ ಅಧ್ಯಯನಕ್ಕೆ ಸಾಕ್ಷಿಯಾಗಿದೆ. ಈ ನಡುವೆ 5 ವರ್ಷಗಳ ಕಾಲ ವಿಶ್ವದರ್ಶನದ ಟಿ.ಸಿ.ಎಚ್ ಕಾಲೇಜಿನ ಪ್ರಾಂಶುಪಾಲರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಮೂಲತಃ ಹೊನ್ನಾವರದ ಯಲಗುಪ್ಪ ಸೀತಾ ಮತ್ತು ಶಿವರಾಮ ಹೆಗಡೆ ದಂಪತಿಯ ಪುತ್ರಿಯಾಗಿದ್ದು, ಪತ್ರಕರ್ತ ಶಂಕರ ಭಟ್ ತಾರೀಮಕ್ಕಿ ಅವರ ಪತ್ನಿಯಾಗಿದ್ದಾರೆ. ಎಂ.ಎ., ಎಂ.ಎಡ್, ಎಂ.ಫಿಲ್, ಹಿಂದಿ ವಿದ್ವಾನ್ ಅಲ್ಲದೇ ಯಕ್ಷಗಾನದಲ್ಲಿ ಪಿ.ಎಚ್.ಡಿ. ಅಧ್ಯಯನ ಮಾಡಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಕವಿಗಳಾಗಿ ತುಂಬೆಲರು, ನಟ್ಟಿರುವ, ಸೀತಾರಾಮಾಯಣ 3 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅದರಲ್ಲೂ ಶಾಲಾ ವಿದ್ಯಾರ್ಥಿಗಳಿಗೆ ರಾಮಾಯಣದ ಅರಿವು ಮೂಡಿಸಲು ಸರಳ ಭಾಷೆಯಲ್ಲಿ ಸೀತಾರಾಮಾಯಣ ಕೃತಿ ರಚಿಸಿದ್ದಾರೆ.

ಇವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಸದಸ್ಯೆಯಾಗಿ, ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಅನೇಕ ಸಂಘಟನೆಗಳು ಇವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಿರುವುದು ಕೂಡ ಉಲ್ಲೇಖನೀಯ. ಇಂತಹ ಶ್ರೇಷ್ಠ ಶಿಕ್ಷಕಿ ಮುಕ್ತಾ ಅವರಿಗೆ ಬೆಂಗಳೂರಿನ ಸ್ವಾಮಿ ವಿವೇಕಾನಂದ ವೇದಿಕೆ, ವಿವೇಕ ಚೇತನ ಚಾರಿಟೇಬಲ್ ಟ್ರಸ್ಟ್ ಹಾಗೂ ರಾಘವೇಂದ್ರ ಪ್ರಕಾಶನ ಇವರು ಪ್ರತಿವರ್ಷ ನೀಡುವ ರಾಜ್ಯಮಟ್ಟದ ಶಿಕ್ಷಕರ ಮತ್ತು ಅಭಿಯಂತರ ದಿನಾಚರಣೆಯ "ಗುರುಶ್ರೀ ಪ್ರಶಸ್ತಿ " ಕೂಡ ಇವರಿಗೆ ಲಭಿಸಿರುವುದು ಇವರ ಕರ್ತವ್ಯ ನಿಷ್ಠೆಗೆ ಸಂದ ಗೌರವ ಎನ್ನಬಹುದಾಗಿದೆ.