ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ಸಂಪಾದನೆಯೆಂದರೆ ಹಣ ಮಾತ್ರವಲ್ಲ, ವ್ಯಕ್ತಿಯ ಕೌಶಲ್ಯ, ಗುಣ ನಡತೆ, ಸಂವಹನ ಶೀಲನೆ, ಶಿಸ್ತು ಎಲ್ಲವೂ ಒಟ್ಟಾಗಿ ಸಂಪಾದನೆಯಾಗಿದೆ. ಕಡಿಮೆಯಾಗುತ್ತಿರುವ ದುಡ್ಡಿನ ಮೌಲ್ಯವನ್ನು ಸರಿದೂಗಿಸುವ ಶಕ್ತಿ ಚಿನ್ನಕ್ಕಿದ್ದು, ಅದರಲ್ಲಿ ಹೂಡಿಕೆ ಮಾಡುವುದು ಉತ್ತಮ ಎಂದು ಖ್ಯಾತ ಚಲನ ಚಿತ್ರನಟ, ಮುಳಿಯ ಚಿನ್ನದ ಸಂಸ್ಥೆಯ ಬ್ರ್ಯಾಂಡ್ ರಾಯಭಾರಿ ಆಗಿರುವ ರಮೇಶ್ ಅರವಿಂದ್ ಅಭಿಪ್ರಾಯಪಟ್ಟಿದ್ದಾರೆ.ಭಾನುವಾರ ಪುತ್ತೂರು ನಗರದ ಕೋರ್ಟ್ ರಸ್ತೆಯಲ್ಲಿರುವ ಮುಳಿಯ ಗೋಲ್ಡ್ ಆಂಡ್ ಡೈಮಂಡ್ ಸಂಸ್ಥೆಯ ನವೀಕೃತ ಮಳಿಗೆಯ ಲೋಕಾರ್ಪಣೆ ಹಾಗೂ ಮುಳಿಯ ಆರಂಭೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಸಂತೋಷ ಸೃಷ್ಟಿಸುವ ಗುಣ ಬಹಳ ಮುಖ್ಯವಾಗಿದ್ದು, ನಮ್ಮೊಳಗೇ ಸಂತೋಷ ಸಿಗುವ ಕಾರ್ಯವಾಗಬೇಕಾಗಿದೆ. ಕರಾವಳಿ ಭಾಗದಲ್ಲಿ ಅತ್ಯಂತ ಹೆಸರುವಾಸಿಯಾಗಿರುವ ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆಯ ಸ್ಲೂಗನ್, ಫಿಲಾಸಫಿ ಹಾಗೂ ಈ ಸಂಸ್ಥೆಯನ್ನು ನಡೆಸುತ್ತಿರುವ ಸಹೋದರರ ಸಂಸ್ಕೃತಿಗೆ ಮಾರುಹೋಗಿ ಮುಳಿಯ ಸಂಸ್ಥೆಯ ರಾಯಭಾರಿಯಾಗಿದ್ದೇನೆ ಎಂದರು.
ನಮ್ಮ ಸಂಪಾದನೆಯ ಒಂದು ಭಾಗವನ್ನು ಚಿನ್ನದ ಮೂಲಕ ಉಳಿತಾಯ ಮಾಡುವುದು ಹೆಚ್ಚು ಶ್ರೇಯಸ್ಕರ ಎಂಬ ಚಿಂತನೆ ನಮ್ಮಲ್ಲಿ ಹೆಚ್ಚಾಗಬೇಕು ಎಂದು ರಮೇಶ್ ಕರೆ ನೀಡಿದರು.ಮುಳಿಯ ಸಂಸ್ಥೆಯ ಚೇರ್ಮೆನ್ ಕೇಶವ ಪ್ರಸಾದ್ ಮುಳಿಯ ಮಾತನಾಡಿ, 81 ವರ್ಷಗಳ ಹಿಂದೆ ಕಟ್ಟೆಯಲ್ಲಿ ಆರಂಭಗೊಂಡಿದ್ದ ಮುಳಿಯ ಸಂಸ್ಥೆ ಇದೀಗ ತನ್ನ ಪಾರಂಪರಿಕ ವ್ಯವಸ್ಥೆಯೊಂದಿಗೆ ಹೊಸತನಕ್ಕೆ ತೆರೆದುಕೊಂಡಿದೆ. ಮುಳಿಯ ಸಂಸ್ಥೆ ಎಂಬುವುದು ಗ್ರಾಹಕರ ದೇಗುಲವಾಗಿದ್ದು, ಈ ಸಂಸ್ಥೆಗೊಂದು ವ್ಯಕ್ತಿತ್ವದ ಬ್ರ್ಯಾಂಡ್ ಇದೆ. ಗ್ರಾಹಕರಿಗೆ ನಷ್ಟವಾಗಬಾರದು ಎಂಬುವುದೇ ಮುಳಿಯ ಸಂಸ್ಥೆಯ ಪ್ರಮುಖ ಗುರಿಯಾಗಿದೆ ಎಂದರು.
ಮುಳಿಯ ಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ಮಾತನಾಡಿ, ಹಿಂದೆ ಈ ಸಂಸ್ಥೆ ಮನೆಮನೆಗೆ ಹೋಗಿ ಚಿನ್ನ ಮಾರಾಟ ಮಾಡುತ್ತಿತ್ತು. ಈ ಸ್ಥಿತಿಯಿಂದ ಬೆಳೆದು ಇಂದು ಆಧುನಿಕ ನೆಲೆಯಲ್ಲಿ ಚಿನ್ನದ ಮಳಿಗೆಯ ತನಕ ಸ್ಥಿತ್ಯಂತರ ಹೊಂದಿದೆ. ನಮ್ಮ ಗ್ರಾಹಕರಿಗೆ ನಮ್ಮ ಚಿನ್ನದ ಮಳಿಗೆಗಳು ಪ್ರಯೋಜನವಾಗುವಂತಹ ಆಯ್ಕೆಯ ಸ್ಥಳವಾಗಬೇಕು ಹಾಗೂ ಅವರಿಗೆ ಸಂತೋಷ ದೊರಕಬೇಕು ಎಂಬುವುದು ನಮ್ಮ ಆಶಯ ಎಂದರು.ಮುಳಿಯ ಮಳಿಗೆಗಳಲ್ಲಿ ಗ್ರಾಹಕರಿಗೆ ಅನುಕೂಲವಾದ ವಾತಾವರಣಕ್ಕೆ ಬೇಕಾದ ಸೌಲಭ್ಯಗಳನ್ನು ಮಾಡಲಾಗಿದೆ ಎಂದರು.
ಪುತ್ತೂರಿನ ಮಹಾಲಿಂಗೇಶ್ವರ ದೇವಳಕ್ಕೆ ಆಗಮಿಸಿದ ಚಿತ್ರನಟ ರಮೇಶ್ ಅರವಿಂದ್ ಅವರು ಪ್ರಾರ್ಥನೆ ಸಲ್ಲಿಸಿದರು. ಬಳಿಕ ದೇವಳದಿಂದ ದೇವರ ದೀಪದೊಂದಿಗೆ ರಮೇಶ್ ಅರವಿಂದ್ ಅವರನ್ನು ತೆರೆದ ಜೀಪಿನಲ್ಲಿ ಮೆರವಣಿಗೆಯಲ್ಲಿ ಮುಳಿಯಕ್ಕೆ ಕರೆ ತರಲಾಯಿತು.ಮುಳಿಯ ಸಂಸ್ಥೆಯ ವಿಸ್ತೃತ ಕಟ್ಟಡವನ್ನು ತೆರೆ ಸರಿಸುವ ಮೂಲಕ ವಿಶೇಷ ರೀತಿಯಲ್ಲಿ ಉದ್ಘಾಟಿಸಲಾಯಿತು. ಬಲೂನು ಹಾರಿ ಬಿಡುವ ಮೂಲಕ ಕಟ್ಟಡ ಅನಾವರಣ ಮಾಡಲಾಯಿತು. ಮಳಿಗೆಯ ವಿವಿಧ ಕೆಲಸದಲ್ಲಿ ಶ್ರಮಿಸಿದವರನ್ನು ಗೌರವಿಸಲಾಯಿತು. ರಮೇಶ್ ಅರವಿಂದ್ ಅವರಿಗೆ ವಿಶೇಷ ಬ್ರಾಂಡ್‌ನ ಕಡಗ ಉಡುಗೊರೆಯಾಗಿ ತೊಡಿಸಲಾಯಿತು.
ವಿದುಷಿ ನಂದಿನಿ ನಾಯಕ್ ಪ್ರಾರ್ಥಿಸಿದರು. ಸಂಸ್ಥೆಯ ಬ್ರ್ಯಾಂಡ್ ಕನ್ಸಲ್ಟೆಂಟ್ ವೇಣು ಶರ್ಮ ಸ್ವಾಗತಿಸಿದರು. ಸಂಸ್ಥೆಯ ಸಿಬ್ಬಂದಿ ಶಿವಪ್ರಸಾದ್ ವಂದಿಸಿದರು. ಬಿಗ್‌ಬಾಸ್ ಖ್ಯಾತಿಯ ಕಲಾವಿದ ಪ್ರದೀಪ್ ಬಡೆಕ್ಕಿಲ ನಿರೂಪಿಸಿದರು.