ಸಾರಾಂಶ
ಮೂಲ್ಕಿಯ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್‌ಫಯರ್, ಸೈಂಟ್ ಆನ್ಸ್ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ, ಶ್ರೀನಿವಾಸ ವೈದ್ಯಕೀಯ ವಿದ್ಯಾಲಯ ರಕ್ತದಾನ ವಿಭಾಗ ಸಹಯೋಗದೊಂದಿಗೆ ಮೂಲ್ಕಿಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಯಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ರಕ್ತದಾನದ ಮೂಲಕ ಪ್ರಾಣ ಕಾಪಾಡಲು ಸಾಧ್ಯವಿದ್ದು, ವಿದ್ಯಾರ್ಥಿಗಳು ರಕ್ತದಾನ ಮಾಡಿ ಜೀವ ಉಳಿಸಬೇಕೆಂದು ಲಯನ್ಸ್ ಕ್ಲಬ್ ಬಪ್ಪನಾಡು ಇನ್‌ಸ್ಪೈರ್ ಅಧ್ಯಕ್ಷ ಅನಿಲ್ ಕುಮಾರ್ ಹೇಳಿದರು.ಮೂಲ್ಕಿಯ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್‌ಫಯರ್, ಸೈಂಟ್ ಆನ್ಸ್ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ, ಶ್ರೀನಿವಾಸ ವೈದ್ಯಕೀಯ ವಿದ್ಯಾಲಯ ರಕ್ತದಾನ ವಿಭಾಗ ಸಹಯೋಗದೊಂದಿಗೆ ಮೂಲ್ಕಿಯಲ್ಲಿ ಆಯೋಜಿಸಲಾದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಲಯನ್ಸ್ ಕ್ಲಬ್ ಸ್ಥಾಪಕ ಅಧ್ಯಕ್ಷ ವೆಂಕಟೇಶ ಹೆಬ್ಬಾರ್ ಮಾತನಾಡಿ, ರಕ್ತದಾನಕ್ಕೆ ಯುವ ಜನತೆ ಹಿಂದೇಟು ಹಾಕುತ್ತಿದ್ದು, ಕಳೆದ ವರ್ಷ ನಮ್ಮ ಸಂಸ್ಥೆ 1289 ಯುನಿಟ್ ರಕ್ತ ಸಂಗ್ರಹಿಸಿ ಜಿಲ್ಲೆಯ ವಿವಿಧ ರಕ್ತ ಸಂಗ್ರಹಣ ಕೇಂದ್ರಕ್ಕೆ ನೀಡಿದೆ. ಅದರಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಕಾಲೇಜಿನ ಪಾಲು ಇದೆ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೈಂಟ್ ಆನ್ಸ್ ಶಿಕ್ಷಣ ಸಂಸ್ಥೆಯ ಮುಖ್ಯ ಸಂಚಾಲಕ ಡಾ.ಲೋಬೋ ವಹಿಸಿದ್ದರು. ಸಂಸ್ಥೆಯ ನಿರ್ದೇಶಕ ಸರಿತಾ ಡಿಸೋಜ, ಮುಖ್ಯ ಪ್ರಾಧ್ಯಾಪಕಿ ಪ್ರೊ.ಮರಿಯ ಬರೆಟೊ, ಶ್ರೀನಿವಾಸ್ ಕಾಲೇಜಿನ ವೈದ್ಯಾಧಿಕಾರಿ ಡಾ. ಮಧುಕರ, ಲಯನ್ಸ್ ಸಂಸ್ಥೆಯ ಪ್ರತಿಭಾ ಹೆಬ್ಬಾರ್, ಡಾ.ಉದಯ್ ನಾಯಕ್, ಬ್ಲಡ್ ಬ್ಯಾಂಕ್ ಸಂಚಾಲಕಿ ಸವಿತಾ, ವಿದ್ಯಾ ಸಂಸ್ಥೆಯ ಶಿಕ್ಷಕಿ ಸೋನಿಯಾ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ರಕ್ತದಾನ ಶಿಬಿರ ನಡೆದು 51 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.