ಸಾರಾಂಶ
ಐಕಳ ಪೊಂಪೈ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಓದುವ ಸೊಬಗು, ಕೇಳುವ ಸೊಗಸು’ ವಿಚಾರಗೋಷ್ಠಿ ನೆರವೇರಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಜ್ಞಾನಾರ್ಜನೆಯ ಆಸಕ್ತಿ ಇರುವವರಿಗೆ ಓದುವ ಆಸಕ್ತಿ ಸಹಜ. ಇಂದಿನ ಆಧುನಿಕ ತಂತ್ರಜ್ಞಾನದ ಧಾವಂತದಲ್ಲಿ ಪುಸ್ತಕ ಓದುವುದು ಅಸಾಧ್ಯವಾಗಿದ್ದು ಅಂತಹವರಿಗೆ ಕೇಳುವ ಅವಕಾಶಕ್ಕಾಗಿ ಆಡಿಬಲ್, ಯೂಟ್ಯೂಬ್, ಫೋಡ್ ಕಾಸ್ಟ್, ಆಡಿಯೋ ಬುಕ್, ವಾಚ್, ಮೊಬೈಲ್ ಫೋನ್ ಹೀಗೆ ತಂತ್ರಜ್ಞಾನದಿಂದ ಜ್ಞಾನವನ್ನು ಕೇಳಿಯೂ ಹೆಚ್ಚಿಸಿಕೊಳ್ಳುವ ವ್ಯವಸ್ಥೆಗಳು ಬಂದಿವೆ ಎಂದು ಡಾ. ರುಡಾಲ್ಫ್ ನೊರೊನ್ಹ ಹೇಳಿದ್ದಾರೆ.ಐಕಳ ಪೊಂಪೈ ಕಾಲೇಜಿನಲ್ಲಿ ನಡೆದ ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಓದುವ ಸೊಬಗು, ಕೇಳುವ ಸೊಗಸು’ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ಓದುವಾಗ ಗಮನ ಸಂಪೂರ್ಣ ಪುಸ್ತಕದಲ್ಲಿರಬೇಕು. ಸಾಹಿತ್ಯ ಕೇಳುವಾಗ ಹಾಗಲ್ಲ. ಕೆಲಸ ಮಾಡುತ್ತ ಮಾಡುತ್ತ ಕೇಳಬಹುದು. ವಾಹನ ಚಲಾಯಿಸುವಾಗಲೂ ಭಾಷಣ, ಉಪನ್ಯಾಸಗಳನ್ನು ಕೇಳುವ ಸುಖ ಚೆನ್ನಾಗಿರುತ್ತದೆ ಎಂದರು.ವಿಶ್ವನಾಥ ಕೆ. ಕವತ್ತಾರು ಮಾತನಾಡಿ, ಓದುವ ಪ್ರವೃತ್ತಿ ನಮ್ಮ ಜ್ಞಾನವನ್ನು, ಬೌದ್ಧಿಕ ಸಂವೇದನಾಶೀಲತೆಯನ್ನು ಹೆಚ್ಚಿಸುತ್ತದೆ ಎಂದರು.
ಪಾಂಡುರಂಗ ಭಟ್ ಮಾತನಾಡಿ ಹೈಸ್ಕೂಲಿನಲ್ಲಿ ಪತ್ತೇದಾರಿಕೆ ಕಥೆಗಳನ್ನು ಓದುವ ಮೂಲಕ ಓದುವುದನ್ನು ಆರಂಭಿಸಿದೆ. ಆನಂದಕ್ಕೆ ಓದು ನಿಜ. ನಿದ್ದೆಗೂ ಓದುವಿಕೆ ಬೇಕು. ಭೈರಪ್ಪರ ಎಲ್ಲ ಪುಸ್ತಕಗಳನ್ನೂ ಓದಿದೆ. ಇತ್ತೀಚಿಗೆ ಅವರನ್ನು ಕಂಡು ಸಂಭ್ರಮಿಸಿದ್ದೇನೆ. ಓದುವ ಸುಖ ಓದಿದವರಿಗೇ ಗೊತ್ತು ಎಂದರು.ಡಾ. ಸೋಂದಾ ಭಾಸ್ಕರ ಭಟ್ ಸಮನ್ವಯದ ಮಾತುಗಳನ್ನಾಡಿದರು. ಕೆ.ಎ. ಅಬ್ದುಲ್ಲ, ಡೇನಿಯಲ್ ದೇವರಾಜ್, ಸಮ್ಮೇಳನಾಧ್ಯಕ್ಷ ಶ್ರೀಧರ ಡಿ.ಎಸ್. ಇದ್ದರು. ಧನಲಕ್ಷ್ಮೀ ಡಿ. ಶೆಟ್ಟಿಗಾರ್ ನಿರೂಪಿಸಿದರು.
ಸಾಹಿತಿ ಶ್ರೀಧರ ಡಿ.ಎಸ್. ಅವರ ನೂತನ ‘ಪುರಾಣ ಲೋಕದ ವಿಶಿಷ್ಟ ಪಾತ್ರಗಳು’ ಕೃತಿಯನ್ನು ಖ್ಯಾತ ಬರಹಗಾರ ಅಬ್ದುಲ್ ರಶೀದ್ ಪುಸ್ತಕದ ಕಪಾಟಿನಿಂದ ಕೃತಿಯನ್ನು ಆರಿಸುವ ಮೂಲಕ ಬಿಡುಗಡೆಗೊಳಿಸಿದರು. ಡಾ. ಎಂ.ಪಿ. ಶ್ರೀನಾಥ್, ಪ್ರದೀಪ ಕುಮಾರ ಕಲ್ಕೂರ, ಗಣೇಶ ಅಮೀನ್ ಸಂಕಮಾರ್, ಪೃಥ್ವಿರಾಜ್ ಆಚಾರ್ಯ, ಶ್ರೀನಿವಾಸ ಆಚಾರ್ಯ, ವಿನಯಾಚಾರ್, ಮಾಧವ ಎಂ.ಕೆ. ರೆ.ಫಾ. ಓಸ್ವಾಲ್ಡ್ ಮೊಂತೆರೋ, ಮಿಥುನ ಕೊಡೆತ್ತೂರು ಮತ್ತಿತರರಿದ್ದರು.