ಪಡಿತರ ಚೀಟಿ ಸಮಸ್ಯೆ, ವಿದ್ಯುತ್ ಸಮಸ್ಯೆ, ರಸ್ತೆಯಲ್ಲಿ ತ್ಯಾಜ್ಯ ನೀರು ಹರಿಯುತ್ತಿರುವ ಬಗ್ಗೆ, ರಸ್ತೆ ಬದಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರ ತೆರವು ಮತ್ತಿತರ ವಿಷಯಗಳ ಬಗ್ಗೆ ಮೂಲ್ಕಿಯ ಗೇರುಕಟ್ಟೆಯ ಮೂಲ್ಕಿ ತಾಲೂಕಿನ ಪ್ರಜಾ ಸೌಧ ಆಡಳಿತ ಕಚೇರಿಯ ಸಭಾಂಗಣದಲ್ಲಿ ಜರುಗಿದ ಮೂಲ್ಕಿ ತಾಲೂಕು ಪ್ರಜಾ ಸೇವೆ, ಆಂದೋಲನ ಸಭೆಯಲ್ಲಿ ಚರ್ಚೆ ನಡೆಯಿತು.
ಮೂಲ್ಕಿ : ಪಡಿತರ ಚೀಟಿ ಸಮಸ್ಯೆ, ವಿದ್ಯುತ್ ಸಮಸ್ಯೆ, ರಸ್ತೆಯಲ್ಲಿ ತ್ಯಾಜ್ಯ ನೀರು ಹರಿಯುತ್ತಿರುವ ಬಗ್ಗೆ, ರಸ್ತೆ ಬದಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರ ತೆರವು ಮತ್ತಿತರ ವಿಷಯಗಳ ಬಗ್ಗೆ ಮೂಲ್ಕಿಯ ಗೇರುಕಟ್ಟೆಯ ಮೂಲ್ಕಿ ತಾಲೂಕಿನ ಪ್ರಜಾ ಸೌಧ ಆಡಳಿತ ಕಚೇರಿಯ ಸಭಾಂಗಣದಲ್ಲಿ ಜರುಗಿದ ಮೂಲ್ಕಿ ತಾಲೂಕು ಪ್ರಜಾ ಸೇವೆ, ಆಂದೋಲನ ಸಭೆಯಲ್ಲಿ ಚರ್ಚೆ ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ಮೂಲ್ಕಿ ತಾಲೂಕು ತಹಸೀಲ್ದಾರ್ ಪ್ರಥ್ವಿ ಸ್ಥಾನಿಕಂ ವಹಿಸಿದ್ದು ಪಡುಪಣಂಬೂರು ಗ್ರಾಪಂ ವ್ಯಾಪ್ತಿಯ ಬೆಳ್ಳಾಯರು ನಿವಾಸಿ ಪದ್ಮನಾಭ ಅವರು ಎರಡು ವರ್ಷಗಳಿಂದ ಹೊಸ ರೇಷನ್ ಕಾರ್ಡ್‌ಗಾಗಿ ಮನವಿ ಸಲ್ಲಿಸುತ್ತಿದ್ದರೂ ಕಾರ್ಡ್ ನೀಡಿಲ್ಲ. ರೇಷನ್ ಕಾರ್ಡ್ ಯಾವಾಗ ನೀಡುತ್ತೀರಿ ಎಂದು ಪ್ರಶ್ನಿಸಿದರು. ತಹಸೀಲ್ದಾರ್ ಪೃಥ್ವಿ ಸ್ಥಾನಿಕಂರವರು ಸರ್ಕಾರದ ನಿರ್ದೇಶನ ಬಂದ ತಕ್ಷಣ ರೇಷನ್ ಕಾರ್ಡ್ ನೀಡಲಾಗುವುದುದು ಎಂದು ತಿಳಿಸಿದರು.
ಕಾರ್ನಾಡಿನಿಂದ ಮೂಲ್ಕಿಯ ಮುಖ್ಯ ರಸ್ತೆಯ ಬದಿಯಲ್ಲಿನ ಸುಮಾರು 100 ವರ್ಷ ಹಳೆಯ ಬೃಹತ್ ಆಲದ ಮರವೊಂದು ರಸ್ತೆ ಸಂಚಾರಕ್ಕೆ ಮತ್ತು ಪಕ್ಕದ ಮನೆಯವರಿಗೆ ತೀವ್ರ ಸಮಸ್ಯೆಯಾಗುತ್ತಿದ್ದು, ಕಳೆದ ಹತ್ತು ವರ್ಷಗಳಿಂದ ತೆರವಿಗೆ ಬೇಡಿಕೆ ಮಂಡಿಸಿದ್ದರೂ ಸಮಸ್ಯೆ ಪರಿಹರಿಸಿಲ್ಲ ಎಂದು ಸ್ಥಳೀಯ ನಿವಾಸಿ ಹೈಜೀನಿಯಸ್ ಅರಾಹ್ನ ಪ್ರಜಾ ಸೇವಾ ಆಂದೋಲನ ಸಭೆಯಲ್ಲಿ ತಿಳಿಸಿದರು. ಮೂಲ್ಕಿ ತಾಲೂಕು ತಹಸೀಲ್ದಾರ್ ಪೃಥ್ವಿ ಸ್ಥಾನಿಕಂ ಮಾತನಾಡಿ, ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ಮರ ತೆರವು ಕಷ್ಟ ಸಾಧ್ಯವಾದ್ದರಿಂದ ಸಮಸ್ಯೆ ಉಂಟುಮಾಡುತ್ತಿರುವ ಗೆಲ್ಲುಗಳನ್ನು ತಕ್ಷಣ ತೆರವುಗೊಳಿಸುವಂತೆ ತಿಳಿಸಿದರು. ಈ ಪರಿಸರದಲ್ಲಿ ರಸ್ತೆ ಚರಂಡಿಯಲ್ಲಿ ದುರ್ವಾಸನೆಯುಕ್ತ ತ್ಯಾಜ್ಯ ನೀರು ಹರಿಯುತ್ತಿದ್ದು, ಹಲವು ಬಾರಿ ದೂರು ನೀಡಿದರೂ ಸಮಸ್ಯೆ ಬಗೆಹರಿದಿಲ್ಲ. ನಗರಾಡಳಿತ ಈ ಬಗ್ಗೆ ಕ್ರಮ ಕೈಗೊಂಡರೂ ಸಮಸ್ಯೆ ಪುನರಾವರ್ತನೆಯಾಗುತ್ತಿದೆ ಎಂದು ಅರಾಹ್ನ ದೂರಿದರು. ಮೂಲ್ಕಿ ನಪಂ ಮುಖ್ಯಾಧಿಕಾರಿ ಮಧುಕರ್ ಕೆ. ಯವರು ಈ ಬಗ್ಗೆ ಸರಿಪಡಿಸುವ ಭರವಸೆ ನೀಡಿದರು.ಅತಿಕಾರಿಬೆಟ್ಟು ಗ್ರಾಮದ ದಿನೇಶ್ಚಂದ್ರ ಅಜಿಲ ಅವರು ಮೆಸ್ಕಾಂ ವಿದ್ಯುತ್ ತಂತಿ ಮತ್ತು ಆರ್‌ಟಿಸಿ ಗೊಂದಲಗಳಿಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಅರ್ಜಿಗಳ ಬಗ್ಗೆ ಪ್ರಶ್ನಿಸಿದರು. ಈ ಬಗ್ಗೆ ಮೂರು ದಿನದೊಳಗೆ ಉತ್ತರಿಸುವುದಾಗಿ ತಿಳಿಸಲಾಯಿತು.ಮೂಲ್ಕಿ ತಾಲೂಕು ಇಒ ಅರ್ಚಿತ್ ಪರಾಗ್ ಡೋಂಗ್ರೆ, ಮೂಲ್ಕಿ ನ ಪಂಚಾಯತ್ ಮುಖ್ಯಾಧಿಕಾರಿ ಮಧುಕರ್ ಕೆ., ಮೂಲ್ಕಿ ಉಪತಹಸೀಲ್ದಾರ್ ದಿಲೀಪ್ ರೋಡ್ಕರ್, ಕಂದಾಯ ನಿರೀಕ್ಷಕ ಮೋಹನ್, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ತಹಸೀಲ್ದಾರ್ ಪೃಥ್ವಿ ಸ್ಥಾನಿಕಂ ಸ್ವಾಗತಿಸಿದರು. ವಿ ಎ ಆಶಾ ಮೆಹಂದಳೆ ಕಾರ್ಯಕ್ರಮ ನಿರೂಪಿಸಿದರು.