ಮೂಲ್ಕಿ ನಗರ ಪಂಚಾಯಿತಿಯ 2026-27ನೇ ಸಾಲಿನ ಆಯವ್ಯಯ, ನೀರಿನ ಸಮಸ್ಯೆ ಬಗ್ಗೆ ಮೂಲ್ಕಿ ನಗರ ಪಂಚಾಯಿತಿ ಸಮುದಾಯ ಭವನದಲ್ಲಿ ನಡೆದ ಬಜೆಟ್‌ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಚರ್ಚೆ ನಡೆಯಿತು. ಮುಖ್ಯಾಧಿಕಾರಿ ಮಧುಕರ್ ಕೆ. ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅನುದಾನಗಳ ಸಮರ್ಪಕ ಜೋಡಣೆಯ ಮೂಲಕ ಸಮಸ್ಯೆಗಳಿಗೆ ಪರಿಹಾರ

ಮೂಲ್ಕಿ: ಮೂಲ್ಕಿ ನಗರ ಪಂಚಾಯಿತಿಯ 2026-27ನೇ ಸಾಲಿನ ಆಯವ್ಯಯ, ನೀರಿನ ಸಮಸ್ಯೆ ಬಗ್ಗೆ ಮೂಲ್ಕಿ ನಗರ ಪಂಚಾಯಿತಿ ಸಮುದಾಯ ಭವನದಲ್ಲಿ ನಡೆದ ಬಜೆಟ್‌ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಚರ್ಚೆ ನಡೆಯಿತು. ಮುಖ್ಯಾಧಿಕಾರಿ ಮಧುಕರ್ ಕೆ. ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅನುದಾನಗಳ ಸಮರ್ಪಕ ಜೋಡಣೆಯ ಮೂಲಕ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದೆಂದು ಮುಖ್ಯಾಧಿಕಾರಿ ತಿಳಿಸಿದರು.

ಲೆಕ್ಕಾಧಿಕಾರಿ ಸ್ವಾತಿ ಪೈ ಆಯವ್ಯಯದ ಲೆಕ್ಕಾಚಾರಗಳನ್ನು ಮಂಡಿಸಿ ಸಮಾಲೋಚನೆಗೆ ಮನವಿ ಮಾಡಿದಾಗ, ಹಲವು ಸದಸ್ಯರು ಹಾಗೂ ಸಾರ್ವಜನಿಕರು ತಮ್ಮ ಪ್ರದೇಶಗಳ ಸಮಸ್ಯೆಗಳ ಕುರಿತು ಧ್ವನಿ ಎತ್ತಿ ಪರಿಹಾರಕ್ಕೆ ಆಗ್ರಹಿಸಿದರು.

ಪ್ಲಾಸ್ಟಿಕ್‌ ನಿಷೇಧದ ಕುರಿತು ಮಾಜಿ ಸದಸ್ಯ ಬಾಲಚಂದ್ರ ಕಾಮತ್ ಪ್ರಶ್ನೆಗೆ ಉತ್ತರಿಸಿದ ಮುಖ್ಯಾಧಿಕಾರಿ, ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾರ್ಚ್ 15ರ ನಂತರ ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಜಾರಿಯಾಗಲಿದ್ದು ವ್ಯಾಪಾರಸ್ಥರು ತಮ್ಮಲ್ಲಿರುವ ಪ್ಲಾಸ್ಟಿಕ್ ದಾಸ್ತಾನುಗಳನ್ನು ಅಷ್ಟರೊಳಗೆ ವಿಲೇವಾರಿ ಮಾಡಲು ಸೂಚಿಸಲಾಗಿದೆ, ನಂತರ ನಗರದಾದ್ಯಂತ ಏಕಬಳಕೆಯ ಪ್ಲಾಸ್ಟಿಕ್ ನಿಷೇಧ ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ. ಕುಡಿಯುವ ನೀರಿನ ಸಮಸ್ಯೆ ಬಗ್ಗೆ . ಮಾಜಿ ಸದಸ್ಯ ಭೀಮಾಶಂಕ‌ರ್ ಆ‌ರ್.ಕೆ. ಮಾತನಾಡಿ ಲಿಂಗಪ್ಪಯ್ಯಕಾಡು ಪ್ರದೇಶಕ್ಕೆ ನೀರು ವಿತರಣೆಯಲ್ಲಿ ತಾರತಮ್ಯ ನಡೆಯುತ್ತಿದ್ದು , ಪ್ರತಿದಿನ ನೀರು ಪೂರೈಸುವಂತೆ ಒತ್ತಾಯಿಸಿದರು. ಮಾಜಿ ಸದಸ್ಯ ಸುಭಾಷ್ ಶೆಟ್ಟಿ, ಟ್ಯಾಂಕರ್ ಮೂಲಕ ಕುಡಿಯುವ ನೀರು ವಿತರಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಕೇಳಿದರು. ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಇದೀಗ ಎರಡು ದಿನಕ್ಕೊಮ್ಮೆ ನೀರು ನೀಡುವ ಪ್ರದೇಶದಲ್ಲಿ ಇನ್ನು ಮೂರು ದಿನಕ್ಕೊಮ್ಮೆ, ಪ್ರತಿದಿನದ ಬದಲಿಗೆ ಎರಡು ದಿನಕ್ಕೊಮ್ಮೆ ನೀರು ವಿತರಿಸಲಾಗುವುದೆಂದು ತಿಳಿಸಿದರು. ನಗರ ಪಂಚಾಯಿತಿಯ ವಿವಿಧ ಇಲಾಖೆಯ ಅಧಿಕಾರಿಗಳು,ಸಾರ್ವಜನಿಕರು ಭಾಗವಹಿಸಿದ್ದರು.