ಚಿಕ್ಕಮಗಳೂರುಬದಲಾದ ಹವಾಮಾನದಿಂದ ಜಿಲ್ಲೆಯ ಪ್ರಸಿದ್ಧ ಗಿರಿ ಶ್ರೇಣಿ ಮುಳ್ಳಯ್ಯನಗಿರಿಯಲ್ಲಿ ಮಿನಿ ಹಿಮಾಲಯ ಸೃಷ್ಟಿಯಾಗಿ ಪ್ರಕೃತಿ ಪ್ರಿಯರ ಕಣ್ಣಿಗೆ ಹಬ್ಬ ಉಂಟುಮಾಡುತ್ತಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಬದಲಾದ ಹವಾಮಾನದಿಂದ ಜಿಲ್ಲೆಯ ಪ್ರಸಿದ್ಧ ಗಿರಿ ಶ್ರೇಣಿ ಮುಳ್ಳಯ್ಯನಗಿರಿಯಲ್ಲಿ ಮಿನಿ ಹಿಮಾಲಯ ಸೃಷ್ಟಿಯಾಗಿ ಪ್ರಕೃತಿ ಪ್ರಿಯರ ಕಣ್ಣಿಗೆ ಹಬ್ಬ ಉಂಟುಮಾಡುತ್ತಿದೆ.

ಮುಂಗಾರು ಪೂರ್ವ ಮಳೆ ಸಿಂಚನವಾದ ಬೆನ್ನಲ್ಲೇ ಗಿರಿ ಪ್ರದೇಶದ ಪ್ರವಾಸಿಗರಿಗೆ ಸ್ವರ್ಗವೇ ಧರೆಗಿಳಿದಂತೆ ಮಂಜಿನ ಪರ್ವತವನ್ನೆ ಕಡೆದು ನಿಲ್ಲಿಸಿದಂತ ಸುಂದರ ದೃಶ್ಯ ಕಣ್ತುಂಬುತ್ತಿದೆ. ಚಂದ್ರದ್ರೋಣ ಪರ್ವತ ಶ್ರೇಣಿಯ ಬೆಟ್ಟಗಳು ಸದ್ಯ ಸಂಪೂರ್ಣವಾಗಿ ಮಂಜಿನಿಂದ ಆವರಿಸಿ ಹಿಮ ನಗರಿಯಾಗಿ ಮಾರ್ಪಟ್ಟಿವೆ. ಮುಳ್ಳಯ್ಯನಗಿರಿಯ ತುತ್ತ ತುದಿಯಿಂದ ಹಿಡಿದು ಅದರ ಕೆಳಗಿನ ತಪ್ಪಲಿನವರೆಗೂ ದಟ್ಟವಾದ ಬಿಳಿ ಮಂಜಿನ ರಾಶಿ ಆವರಿಸಿಕೊಂಡು ಮುಂಜಾನೆ ಮತ್ತು ಸಂಜೆ ವೇಳೆ ಇಡೀ ಗಿರಿ ಸಾಲಿನ ಹಸಿರು ಹೊದಿಕೆಯ ಮೇಲೆ ಬಿಳಿ ಮಂಜಿನ ಮುಸುಕು ಹೊದ್ದಂತೆ ಕಂಗೊಳಿಸುತ್ತಿದೆ. ಕ್ಷಣಾರ್ಧದಲ್ಲಿ ಮೋಡಗಳು ಬೆಟ್ಟವನ್ನು ಮರೆಮಾಡುವುದು, ಮತ್ತೊಂದು ಕ್ಷಣದಲ್ಲಿ ತಂಗಾಳಿಗೆ ಮಂಜು ಕರಗಿ ಹಸಿರು ಕಾಡು ಅನಾವರಣಗೊಳ್ಳುವ ಈ ‘ಮಂಜು-ಮೋಡಗಳ’ ಆಟ ಪ್ರವಾಸಿಗರನ್ನು ಮಂತ್ರ ಮುಗ್ಧರನ್ನಾಗಿಸುತ್ತಿದೆ.

ಗಿರಿಗೆ ಹರಿದುಬಂದ ಜನಸಾಗರ: ವಾರಾಂತ್ಯದ ರಜಾದಿನಗಳ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಕಾಫಿ ನಾಡಿಗೆ ಲಗ್ಗೆ ಇಡುತ್ತಿದ್ದಾರೆ. ಬೇಸಿಗೆಯ ಧಗೆಯಿಂದ ಬೇಸತ್ತಿದ್ದ ಜನರಿಗೆ ಮುಳ್ಳಯ್ಯನಗಿರಿಯ ಕೂಲ್ ಕೂಲ್ ವಾತಾವರಣ ಮತ್ತು ತಣ್ಣನೆಯ ಕುಳಿರ್ಗಾಳಿ ಅದ್ಭುತ ನೆಮ್ಮದಿ ನೀಡುತ್ತಿದೆ. ಪ್ರವಾಸಿಗರು ಈ ವಿಹಂಗಮ ನೋಟವನ್ನು ತಮ್ಮ ಮೊಬೈಲ್ ಹಾಗೂ ಕ್ಯಾಮೆರಾಗಳಲ್ಲಿ ಸೆರೆಹಿಡಿಯುತ್ತಾ, ರೀಲ್ಸ್ ಹಾಗೂ ಸೆಲ್ಫಿ ತೆಗೆದುಕೊಳ್ಳುತ್ತಾ ಸಂಭ್ರಮಿಸುತ್ತಿದ್ದಾರೆ.

ಹಿಮಾಲಯಕ್ಕೆ ಹೋಗಲು ಸಾಧ್ಯವಾಗದವರು ಒಮ್ಮೆ ಈ ಸಮಯದಲ್ಲಿ ಮುಳ್ಳಯ್ಯನಗಿರಿಗೆ ಬಂದರೆ ಆ ಫೀಲ್ ಇಲ್ಲೇ ಸಿಗುತ್ತದೆ. ಮಂಜಿನ ಹನಿಗಳು ಮುಖಕ್ಕೆ ಮುತ್ತಿಕ್ಕುವ ಅನುಭವ ಅತ್ಯಂತ ರೋಮಾಂಚನಕಾರಿ'''''''' ಎಂದು ಬೆಂಗಳೂರಿನಿಂದ ಬಂದಿದ್ದ ಪ್ರವಾಸಿಗರೊಬ್ಬರು ತಮ್ಮ ಆನಂದ ಹಂಚಿಕೊಂಡರು.

ಪ್ರವಾಸಿಗರಿಗೆ ಭದ್ರತಾ ಎಚ್ಚರಿಕೆ

ಗಿರಿ ಪ್ರದೇಶದಲ್ಲಿ ಮಂಜಿನ ಸಾಂದ್ರತೆ ಹೆಚ್ಚಾಗಿರುವುದರಿಂದ ರಸ್ತೆಗಳಲ್ಲಿ ವಾಹನ ಸವಾರರಿಗೆ ಕಣ್ಣು ಹಾಯಿಸಿದಷ್ಟೂ ದಾರಿ ಕಾಣದ ಪರಿಸ್ಥಿತಿ ಇದೆ. ಹೀಗಾಗಿ ಕಡಿದಾದ ತಿರುವುಗಳಲ್ಲಿ ಚಲಿಸುವಾಗ ಹೆಡ್‌ಲೈಟ್‌ಗಳನ್ನು ಆನ್ ಮಾಡಿಕೊಂಡು, ಅತ್ಯಂತ ನಿಧಾನವಾಗಿ ಮತ್ತು ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಸ್ಥಳೀಯ ಪೊಲೀಸರು ಹಾಗೂ ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರಲ್ಲಿ ಮನವಿ ಮಾಡಿದೆ.

ಮುಂಗಾರು ಆರಂಭಕ್ಕೆ ಮುನ್ನವೇ ಇಷ್ಟೊಂದು ಸುಂದರವಾಗಿ ಕಾಣುತ್ತಿರುವ ಕಾಫಿ ನಾಡಿನ ಗಿರಿಶಿಖರಗಳು, ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮಕ್ಕೆ ಮತ್ತಷ್ಟು ಕಳೆ ತರುವುದನ್ನು ಅಲ್ಲಗಳೆಯುವಂತಿಲ್ಲ.