ಸಾರಾಂಶ
ಕನ್ನಡಪ್ರಭ ವಾರ್ತೆ ಕಲಾದಗಿ
ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮಹತ್ತರ ಸಾಧನೆ ಮಾಡಬೇಕೆಂದು ಉಪನ್ಯಾಸಕ ಬೈಲಪ್ಪ ಮುಳ್ಳೂರ ಹೇಳಿದರು.ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಹಾಗೂ ಎನ್‌ಎಸ್‌ಎಸ್ ಘಟಕಗಳ ಆಶ್ರಯದಲ್ಲಿ ಶುಕ್ರವಾರ ನಡೆದ ಸ್ವಾಮಿ ವಿವೇಕಾನಂದರ 161ನೇ ಜಯಂತಿಯ ಪ್ರಯುಕ್ತ ಯುವ ಸಪ್ತಾಹ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಸ್ವಾಮಿ ವಿವೇಕಾನಂದರು ದೇಶದಲ್ಲಿದ್ದ ಮೂಢನಂಬಿಕೆ, ಯುವಕರಲ್ಲಿದ್ದ ಆಲಸ್ಯ ಹೊಡೆದೊಡಿಸಲು ಪ್ರಯತ್ನಿಸಿದರು. ನಸುಗಳು ಇಲ್ಲದವನು ಬಡವನೆಂದು ಗುರುತಿಸಲಾಗುತ್ತದೆ. ಕಂಡ ಕನಸನ್ನು ಈಡೇರಿಸುವತ್ತ ನಡೆಯುವವನೇ ಶ್ರೀಮಂತ ವ್ಯಕ್ತಿಯಾಗುತ್ತಾನೆ. ಕೇವಲ 39 ವರ್ಷಗಳ ಕಾಲ ಬದುಕಿದ್ದ ಸ್ವಾಮಿ ವಿವೇಕಾನಂದರು ತಮ್ಮ ಬದುಕಿನುದ್ದಕ್ಕೂ ಯುವಕರಿಗೆ ಮಾರ್ಗದರ್ಶನ ಮಾಡುತ್ತಲೇ ಸಾಗಿದರು. ಅವರ ತತ್ವ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು. ಐಕ್ಯೂಎಸಿ ಸಂಯೋಜಕರಾದ ಪ್ರೊ.ಸರೋಜಿನಿ ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಾಚಾರ್ಯ ಡಾ.ಎಚ್.ಬಿ.ಮಹಾಂತೇಶ ಮಾತನಾಡಿ, ಯುವಕರ ಜೀವನದಲ್ಲಿ ಕಾಲೇಜು ಜೀವನ ಮಹತ್ವದ್ದಾಗಿದೆ, ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಭಾವಿಸುವುದೇ ದೊಡ್ಡ ತಪ್ಪು ಎಂದು ವಿವೇಕಾನಂದರು ನಂಬಿದ್ದರು, ಯುವಕರು ವಿನಾಕಾರಣ ಕಾಲಹರಣ ಮಾಡದೆ ಜೀವನದಲ್ಲಿ ಏನನ್ನಾದರೂ ಸಾಧಿಸಿಯೇ ಸಾಧಿಸುತ್ತೇನೆ ಎಂದು ಪಣತೊಟ್ಟು ಸ್ವಾಮಿ ವಿವೇಕಾನಂದರ ತತ್ವಗಳನ್ನು ಅರಿತು ಮುನ್ನೆಡೆಯಬೇಕೆಂದರು.ಚೈತ್ರಾ ಭಜಂತ್ರಿ ಸ್ವಾಮಿ ವಿವೇಕಾನಂದರ ಕುರಿತು ಭಾಷಣ ಮಾಡಿದಳು. ಕಲಾದಗಿ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ದುಶ್ಚಟಗಳನ್ನು ತ್ಯಜಿಸುವ ಕುರಿತು ಜಾಥಾ ನಡೆಯಿತು.
ದೈಹಿಕ ಶಿಕ್ಷಣ ನಿರ್ದೆಶಕ ದುಂಡಪ್ಪ ದೊಡಮನಿ, ಪ್ರಾಧ್ಯಾಪಕ ಸಂಪತ್ ಲಮಾಣಿ, ಶ್ರೀಶೈಲ ಬಳವಾಡ, ಉಪನ್ಯಾಸಕರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಉಪನ್ಯಾಸಕ ಮೌಲಾಸಾಬ ಮುಲ್ಲಾ ಸ್ವಾಗತಿಸಿ, ನಿರೂಪಿಸಿದರು. ಶೋಭಾ ಪೂಜಾರಿ ವಂದಿಸಿದರು.