ಸಾರಾಂಶ
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ವಿಶ್ವ ಪರಿಸರ ದಿನ ಪ್ರಯುಕ್ತ ಶನಿವಾರಸಂತೆ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಅರಣ್ಯ ಇಲಾಖೆ, ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಗಿಡಗಳನ್ನು ನೆಡಲಾಯಿತು.ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ವೃಕ್ಷಕ್ರಾಂತಿ ಘಟಕದ ವತಿಯಿಂದ ಬೀಜದುಂಡೆ ಬಿತ್ತನೆ ಮಾಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು.ಶಾಲೆಯಲ್ಲಿ ವಿದ್ಯಾರ್ಥಿಗಳು ವಿವಿಧ ಹಣ್ಣುಗಳ ಬೀಜಗಳನ್ನು ಬೀಜ ಭಂಡಾರದಲ್ಲಿ ಸಂಗ್ರಹಿಸಿಡುತ್ತಾರೆ. ಮೂರು ತಿಂಗಳ ಹಿಂದೆಯೇ ವಿದ್ಯಾರ್ಥಿಗಳು ಬೀಜಗಳನ್ನು ಮಣ್ಣಿನುಂಡೆ ಮಾಡಿಕೊಂಡಿರುತ್ತಾರೆ. ಮಂಗಳವಾರ ನಡೆದ ಪರಿಸರ ದಿನದ ಪ್ರಯುಕ್ತ ಪಕ್ಕದ ಅರಣ್ಯಕ್ಕೆ ಹೋಗಿ ಕ್ಯಾಟರ್ ಬಿಲ್ಲು ಮೂಲಕ ಬೀಜದುಂಡೆಯನ್ನು ಕಾಡಿನೊಳಗೆ ಎರೆಚಿದರು. ದಿನದ ಮಹತ್ವ ಕುರಿತು ಶಾಲಾ ಮುಖ್ಯ ಶಿಕ್ಷಕ ಸಿ.ಎಸ್.ಸತೀಶ್ ಮಾತನಾಡಿದರು, ಶಾಲಾ ಸಹ ಶಿಕ್ಷಕ ಮಂಜುನಾಥ್ ಹಾಜರಿದ್ದರು.
ಗಿಡಗಳ ಕುರಿತು ಮಾಹಿತಿ:ಶನಿವಾರಸಂತೆ ವಲಯ ಅರಣ್ಯ ಇಲಾಖೆ ಕಚೇರಿಯಲ್ಲಿ ಅರಣ್ಯ ಇಲಾಖೆ, ಶನಿವಾರಸಂತೆ ರೋಟರಿ ಕ್ಲಬ್ ಮತ್ತು ಭಾರತಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ದಿನದ ಮಹತ್ವ ಬಗ್ಗೆ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಕಾಂತ್, ಆರ್‌ಎಫ್‍ಒ ಗಾನಶ್ರೀ ಮಾತನಾಡಿದರು.
ಅರಣ್ಯ ಇಲಾಖೆ ಕಚೇರಿ ಪಕ್ಕದಲ್ಲಿರುವ ಸಸ್ಯಕ್ಷೇತ್ರದಲ್ಲಿರುವ ವಿವಿಧ ಗಿಡಗಳಿಗೆ ಗಿಡದ ಹೆಸರು ಮತ್ತು ಅದರ ಮಹತ್ವ ಕುರಿತಾದ ಮಾಹಿತಿ ಬರೆದ ಚೀಟಿ ಅಂಟಿಸಲಾಯಿತು. ಮಾಹಿತಿ ಬರೆದ ಪ್ರತಿಯೊಂದು ಗಿಡದ ಮಹತ್ವದ ಬಗ್ಗೆ ಆರ್‌ಎಫ್‍ಒ ಗಾನಶ್ರೀ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ವಿವರಣೆ ನೀಡಿ ಈ ತರಹದ ಗಿಡಗಳನ್ನು ಬೆಳೆಯುವಂತೆ ತಿಳಿಸಿದರು. ರೋಟರಿ ಸದಸ್ಯರಾದ ಕೆ.ಪಿ.ಜಯಕುಮಾರ್, ಎ.ಡಿ.ಮೋಹನ್ ಮತ್ತಿತರರು ಹಾಜರಿದ್ದರು.ಸ್ಥಳೀಯ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಮಕ್ಕಳು ಪರಿಸರ ಜಾಗೃತಿ ಮೂಡಿಸುವ ಕಿರು ನಾಟಕದ ಅಭಿನಯ ಮೂಲಕ ವಿಶ್ವ ಪರಿಸರ ದಿನ ಆಚರಿಸಿದರು.
ಕಾರ್ಯಕ್ರಮದಲ್ಲಿ ದಿನದ ಮಹತ್ವ ಕುರಿತು ಪರಿಸರ ಪ್ರೇಮಿ ಡಾ.ರಾಮಚಂದ್ರ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವಿದ್ಯಾಸಂಸ್ಥೆ ಪ್ರಾಂಶುಪಾಲೆ ಡಿ.ಸುಜಲಾದೇವಿ, ಮುಖ್ಯ ಶಿಕ್ಷಕಿಯರಾದ ಕೆಂಚಮ್ಮ, ಆಶಾ, ಶಾಲೆಯ ಶಿಕ್ಷಕರು ಹಾಜರಿದ್ದರು.ನಂತರ ಶಾಲಾ ವಿದ್ಯಾರ್ಥಿಗಳು ಶಾಲೆಗೆ ಸೇರಿದ ಜಾಗದಲ್ಲಿ ತೆಂಗು, ಅಡಕೆ, ಕಾಫಿಗಿಡ, ಮಾವು, ಹಲಸು, ಸೀಬೆ ಮುಂತಾದ ಹಣ್ಣುಗಳ ಗಿಡಗಳು ಸೇರಿದಂತೆ ವಿವಿಧ ಬಗೆಯ ಹೂವಿನ ಗಿಡಗಳನ್ನು ನೆಟ್ಟರು.