ಮುಳ್ಳೂರು: ಶ್ರೀ ಮಾರಿಯಮ್ಮ ತಾಯಿ ಪ್ರತಿಷ್ಠಾಪನಾ ಮಹೋತ್ಸವ ಸಂಪನ್ನ

| Published : Jun 19 2025, 11:49 PM IST / Updated: Jun 19 2025, 11:50 PM IST

ಮುಳ್ಳೂರು: ಶ್ರೀ ಮಾರಿಯಮ್ಮ ತಾಯಿ ಪ್ರತಿಷ್ಠಾಪನಾ ಮಹೋತ್ಸವ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಪುನಃ ಪ್ರತಿಷ್ಠಾಪನಾ ಮಹೋತ್ಸವದ ಪ್ರಯುಕ್ತ ಬುಧವಾರ ಸಂಜೆ 6 ಗಂಟೆಗೆ ಗ್ರಾಮಸ್ಥರಿಂದ ಮತ್ತು ಭಕ್ತರಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಪೂಜಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ನಂತರ ದೇವಸ್ಥಾನದಲ್ಲಿ ದೀಪ ಮಹಾಪೂಜೆ, ಗಣಪತಿ ಪೂಜೆ, ಕಳಸ ಸ್ಥಾಪನೆ, ಪಂಚಗವ್ಯಶುದ್ಧಿ, ಕಂಕಣಧಾರಣೆ, ವಾಸ್ತು ಹೋಮ, ವಾಸ್ತು ಬಲಿ, ಅಧಿವಾಸಗಳು ಮುಂತಾದ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ ಬಳಿಕ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಿತು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಇಲ್ಲಿಗೆ ಸಮೀಪದ ಮುಳ್ಳೂರು ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಸ್ಥಾಪಿಸಿರುವ ಶ್ರೀ ಮಾರಿಕಾಂಬಾ ದೇವಿ ದೇವಸ್ಥಾನದ ಪುನಃ ಪ್ರತಿಷ್ಠಾಪನಾ ಮಹೋತ್ಸವ ಗುರುವಾರ ಸಂಪನ್ನಗೊಂಡಿತು.

ಪುನಃ ಪ್ರತಿಷ್ಠಾಪನಾ ಮಹೋತ್ಸವದ ಪ್ರಯುಕ್ತ ಬುಧವಾರ ಸಂಜೆ 6 ಗಂಟೆಗೆ ಗ್ರಾಮಸ್ಥರಿಂದ ಮತ್ತು ಭಕ್ತರಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಪೂಜಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ನಂತರ ದೇವಸ್ಥಾನದಲ್ಲಿ ದೀಪ ಮಹಾಪೂಜೆ, ಗಣಪತಿ ಪೂಜೆ, ಕಳಸ ಸ್ಥಾಪನೆ, ಪಂಚಗವ್ಯಶುದ್ಧಿ, ಕಂಕಣಧಾರಣೆ, ವಾಸ್ತು ಹೋಮ, ವಾಸ್ತು ಬಲಿ, ಅಧಿವಾಸಗಳು ಮುಂತಾದ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ ಬಳಿಕ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಿತು.

ಗುರುವಾರ ಮುಂಜಾನೆ 6 ಗಂಟೆಗೆ ಗಂಗಾ ಪೂಜೆ, ಗೋಪೂಜೆ, ಮಹಿಳೆಯರಿಂದ ಕುಂಭ ಮೆರವಣಿಗೆ ನಂತರ ದೇವಸ್ಥಾನದಲ್ಲಿ ದ್ವಾರಲಕ್ಷ್ಮೀ ಪೂಜೆ, ಕಳಸ ಸ್ಥಾಪನೆ, ದೇವರ ಪ್ರತಿಷ್ಠೆ, ದುರ್ಗಾಹೋಮ, ಕಳಾಹೋಮ, ಮಹಾ ಪೂರ್ಣಾಹುತಿ, ಕದಳಿ ಛೇದನ, ಮಹಾಬಲಿ, ಅಲಂಕಾರ, ಮಹಾಪೂಜೆ ಮುಂತಾದ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು. ಬೆಳಗ್ಗೆ 11.30ಕ್ಕೆ ಮಹಾಮಂಗಳಾರತಿ ಮತ್ತು ಭಕ್ತರಿಗೆ ತೀರ್ಥಪ್ರಸಾದ ವಿನಿಯೋಗದೊಂದಿಗೆ ಪೂಜಾ ಮಹೋತ್ಸವ ಕಾರ್ಯವು ಸಂಪನ್ನಗೊಂಡಿತು. ಪ್ರತಿಷ್ಠಾಪನಾ ಮಹೋತ್ಸವ ಅಂಗವಾಗಿ ದೇವಸ್ಥಾನ ಸಮಿತಿಯಿಂದ ಗುರುವಾರ ಮಧ್ಯಾಹ್ನ ಭಕ್ತರಿಗೆ, ಗ್ರಾಮಸ್ಥರಿಗೆ ಅನ್ನಸಂತರ್ಪಣೆ ನಡೆಯಿತು.

ಪುರೋಹಿತರಾದ ಶೇಷಾಚಲ ಮತ್ತು ಶಾಂತರಾಜ್ ನೇತೃತ್ವದಲ್ಲಿ ಅರ್ಚಕರು ಪೂಜಾ ವಿಧಿ ವಿಧಾನ ನೆರವೇರಿಸಿದರು. ಪೂಜಾ ಮಹೋತ್ಸವದಲ್ಲಿ ದೇವಸ್ಥಾನ ಸೇವಾ ಸಮಿತಿ ಪದಾಧಿಕಾರಿಗಳು, ಸದಸ್ಯರು, ಪ್ರಮುಖರು, ಗ್ರಾಮಸ್ಥರು ಪಾಲ್ಗೊಂಡಿದ್ದರು.