ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮಹಿಳೆಯರು ಸ್ವಾವಲಂಬಿ ಬದುಕು ಸಾಗಿಸಲು ನೀರು ವಿತರಣೆ ನಿರ್ವಾಹಕರ ಬಹು ಕೌಶಲ್ಯ ತರಬೇತಿ ಸಹಾಯವಾಗಲಿದೆ ಎಂದು ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಎಸ್.ಎನ್. ಕಾಂಬಳೆ ಹೇಳಿದರು.ನವನಗರದ ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆಯ ಸಭಾಭವನದಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮ, ಡೇ-ಎನ್.ಆರ್.ಎಲ್.ಎಂ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಯೋಗದಲ್ಲಿ ನಲ್ ಜಲ ಮಿತ್ರ ಯೋಜನೆಯಡಿ ಹಮ್ಮಿಕೊಂಡ 15 ದಿನಗಳ ಬಹು ಕೌಶಲ್ಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳಾ ಅಭಿವೃದ್ಧಿಗೆ ಪೂರಕವಾಗಿ ಸರಕಾರ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಮಹಿಳೆಯರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು. ಪಡಿಸಿಕೊಳ್ಳಬೇಕು. ತರಬೇತಿ ಪಡೆದ ನಂತರ ಗ್ರಾಮ ಪಂಚಾಯತ ಮಟ್ಟದಲ್ಲಿ ನೀರು ವಿತರಣಾ ನಿರ್ವಾಹಕರಾಗಿ ಕೆಲಸ ಮಾಡಬೇಕಾಗುತ್ತದೆ. ಆದ್ದರಿಂದ 15 ದಿನಗಳ ವರೆಗೆ ನಡೆಯುವ ಬಹು ಕೌಶಲ್ಯ ತರಬೇತಿಯ ಲಾಭವನ್ನು ಮಹಿಳೆಯರು ಪಡೆಯುವದರ ಜೊತೆಗೆ ಇತರೆ ಮಹಿಳೆಯರಿಗೆ ಸ್ಫೂರ್ತಿಯಾಗಬೇಕು ಎಂದರು.ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಗುರುಪಾದ ಹಿರೇಮಠ ಮಾತನಾಡಿ, ನಲ್ ಜಲ ಮಿತ್ರ ಯೋಜನೆಯಡಿ 15 ದಿನಗಳ ತರಬೇತಿ ನೀಡಿ ನಂತರ ಗ್ರಾಮ ಪಂಚಾಯತಿ ಮಟ್ಟದಲ್ಲಿ ತರಬೇತಿ ನೀಡಲಾಗುತ್ತಿದೆ. ಇದರ ನಂತರ ಪರೀಕ್ಷೆ ತೆಗೆದುಕೊಂಡು ಪ್ರಮಾಣ ಪತ್ರ ನೀಡಲಾಗುತ್ತದೆ. ಪ್ರಮಾಣ ಪತ್ರದೊಂದಿಗೆ ಟೂಲ್‌ಕಿಟ್ಸ್ ಹಾಗೂ ಸಮವಸ್ತ್ರ ಸಹ ನೀಡಲಾಗುತ್ತದೆ. ತರಬೇತಿ ಅವಧಿಯಲ್ಲಿ ಸ್ಟೈಫಂಡ್ ಸಹ ನೀಡಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಆಕಾಶ, ಸಹಾಯಕ ಯೋಜನಾ ನಿರ್ದೇಶಕ ಭೀಮಪ್ಪ ತಳವಾರ, ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ತರಬೇತಿ ಅಧಿಕಾರಿ ಎ.ಎ. ಅತ್ತಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.ಮಹಿಳೆಯರು ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದು, ಅವರಿಗೂ ಸಹ ನೀರು ವಿತರಣೆ ನಿರ್ವಾಹಕರ ಕಾರ್ಯವನ್ನು ಸ್ವಸಹಾಯ ಗುಂಪುಗಳಿಗೆ ತರಬೇತಿ ನೀಡಲು ಜಿಲ್ಲಾ ಪಂಚಾಯತ ಮುಂದಾಗಿದೆ. ಇದರಿಂದ ಗ್ರಾಮೀಣ ಮಟ್ಟದಲ್ಲಿ ನಲ್ಲಿ ನೀರಿನ ಪೈಪನೈನ್‌ಗಳ ರಿಪೇರಿ ಕಾರ್ಯ ಮಾಡಬಹುದಾಗಿದೆ. ಇದಕ್ಕಾಗಿ ತರಬೇತಿದಾರರು ಇದ್ದಾರೆ.- ವಿ.ಎಸ್.ಹಿರೇಮಠ ಪ್ರಾಚಾರ್ಯರು ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆ