ಬ್ಯಾಡಗಿಯಲ್ಲಿ ಶೀಘ್ರವೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ: ಶಾಸಕ ಬಸವರಾಜ ಶಿವಣ್ಣನವರ

| Published : Mar 04 2025, 12:32 AM IST

ಬ್ಯಾಡಗಿಯಲ್ಲಿ ಶೀಘ್ರವೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ: ಶಾಸಕ ಬಸವರಾಜ ಶಿವಣ್ಣನವರ
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕರಿಗೆ ಕಡ್ಡಾಯವಾಗಿ ಆರೋಗ್ಯ ಸೇವೆ ತಲುಪಿಸಬೇಕಾಗಿದೆ. ಇದಕ್ಕಾಗಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಬದ್ಧವಾಗಿದ್ದು, ಹೀಗಾಗಿ ಈಗಾಗಲೇ 10 ಎಕರೆ ನಿವೇಶನ ಮೀಸಲಿಟ್ಟಿದ್ದು, ಶೀಘ್ರದಲ್ಲೇ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.

ಬ್ಯಾಡಗಿ: ಪಟ್ಟಣದ ಹೊರವಲಯದಲ್ಲಿ 10 ಎಕರೆ ಪ್ರದೇಶದಲ್ಲಿ ಸುಸಜ್ಜಿತವಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವುದಾಗಿ ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಕ್ತ ಪರೀಕ್ಷಾ ಘಟಕದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಆರೋಗ್ಯ ಕೇಂದ್ರದಲ್ಲಿ 1.50 ಲಕ್ಷಕ್ಕೂ ಅಧಿಕ ಅಂದರೆ ನಿತ್ಯ ಸರಾಸರಿ 600ಕ್ಕೂ ಹೆಚ್ಚು ಹೊರರೋಗಿಗಳು(ಒಪಿಡಿ) ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ಈ ಆಸ್ಪತ್ರೆ ಕಿಷ್ಕಿಂಧೆಯಂತಾಗಿದ್ದು, ವೈದ್ಯರಿಗೆ ಅನುಕೂಲತೆಗಳು ಇಲ್ಲದಂತಾಗಿದೆ ಎಂದರು.

ಜನರಿಗೆ ಆರೋಗ್ಯ ತಲುಪಿಸಬೇಕಾಗಿದೆ: ಸಾರ್ವಜನಿಕರಿಗೆ ಕಡ್ಡಾಯವಾಗಿ ಆರೋಗ್ಯ ಸೇವೆ ತಲುಪಿಸಬೇಕಾಗಿದೆ. ಇದಕ್ಕಾಗಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಬದ್ಧವಾಗಿದ್ದು, ಹೀಗಾಗಿ ಈಗಾಗಲೇ 10 ಎಕರೆ ನಿವೇಶನ ಮೀಸಲಿಟ್ಟಿದ್ದು, ಶೀಘ್ರದಲ್ಲೇ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗುವುದಾಗಿ ತಿಳಿಸಿದರು.ರಕ್ತ ಸಂಗ್ರಹ ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಿ: ರಕ್ತ ಸಂಗ್ರಹ ಶಿಬಿರಗಳನ್ನು ಪಟ್ಟಣಗಳ ಜತೆಗೆ ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸುವ ಮೂಲಕ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸುವಂತೆ ಸಲಹೆ ನೀಡಿದ ಅವರು, ಗ್ರಾಮೀಣ ಪ್ರದೇಶದ ರೋಗಿಗಳಿಗೆ ಆರೋಗ್ಯ ಸೌಲಭ್ಯವನ್ನು ನೀಡುವಂತೆ ಸಲಹೆ ನೀಡಿದರು.ವಸತಿಗೃಹಗಳ ಕೊರತೆ: ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ಸ್ಥಳೀಯ ಆಸ್ಪತ್ರೆಯಲ್ಲಿ ಒಟ್ಟು 89 ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಅದರೆ ಯಾರೊಬ್ಬರಿಗೂ ಸುಸಜ್ಜಿತವಾದ ವಸತಿಗೃಹಗಳಿಲ್ಲ. ಹೀಗಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ದುಬಾರಿ ಹಣ ಕೊಟ್ಟು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಇನ್ನೂ ಕೆಲ ತಜ್ಞ ವೈದ್ಯರು ಇದೇ ನೆಪವೊಡ್ಡಿ ಬ್ಯಾಡಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಲು ನಿರಾಕರಿಸುತ್ತಿದ್ದಾರೆ ಎಂದರು.ಇದೇ ಸಂದರ್ಭದಲ್ಲಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪುಟ್ಟರಾಜ ಕೊರತೆ ಇರುವ ಸಿಬ್ಬಂದಿಯನ್ನು ನಿಯೋಜನೆ ಸೇರಿದಂತೆ ಥೈರಾಯಡ್ ಟೆಸ್ಟ್ ಮಿಷನ್, ಹೊಸ ಆ್ಯಂಬುಲೆನ್ಸ್‌, ತುರ್ತು ಚಿಕಿತ್ಸೆಗೆ ವೈದ್ಯರು, ಖಾಲಿ ಇರುವ 42 ಗ್ರೂಪ್ ಡಿ ಹುದ್ದೆಗಳನ್ನು ಭರ್ತಿ, ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ತುರ್ತು ಅವಶ್ಯವಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಮೇಲುಸ್ತುವಾರಿ ಸದಸ್ಯರಾದ ಡಾ. ಎ.ಎಂ. ಸೌದಾಗರ, ಲಕ್ಷ್ಮೀ ಜಿಂಗಾಡೆ, ಮಂಜುನಾಥ್ ಹಾವೇರಿ, ಕರಬಸಪ್ಪ ಹಾದರಗೇರಿ, ಮುಖಂಡರಾದ ದಾನಪ್ಪ ಚೂರಿ, ಫಕ್ಕೀರಮ್ಮ ಛಲವಾದಿ, ಬೀರಣ್ಣ ಬಣಕಾರ, ಡಿಎಚ್. ಬುಡ್ಡನಗೌಡ್ರ, ಭಾಷಾಸಾಬ್ ದೊಡ್ಮನಿ, ರಮೇಶ ಸುತ್ಕೋಟಿ, ನಜೀರ ಅಹ್ಮದ್ ಶೇಖ, ತಾಲೂಕು ಆರೋಗ್ಯಾಧಿಕಾರಿ ಡಾ. ಕಾಂತೇಶ ಭಜಂತ್ರಿ, ತಜ್ಞ ವೈದ್ಯರಾದ ಸುರೇಶ ಗುಂಡಪಲ್ಲಿ, ಮಹೇಶ, ಚೇತನ್, ವೀರೇಶ ಹೊಸ್ಮನಿ, ನಾಗರಾಜ, ಬಸವರಾಜ ಗೊಂದಿ, ಅಮಿತ್, ಚಂದ್ರಶೇಕರ, ಸಂತೋಷ ಸೇರಿದಂತೆ ಇತರರಿದ್ದರು.