ಸಾರಾಂಶ
ಬಿ.ರಾಮಪ್ರಸಾದ್ ಗಾಂಧಿ
ಹರಪನಹಳ್ಳಿ : ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದ್ದು, ಒಂದು ಕಡೆ ಲೋಕಸಭಾ ಚುನಾವಣೆಯ ಕಾವು ಹೆಚ್ಚಾಗಿದ್ದರೆ, ಇನ್ನೊಂದು ಕಡೆ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸುತ್ತಾ ಸಾಗಿದೆ.
ಹುಣಸಿಕಟ್ಟೆ, ಅಣಜಿಗೇರಿ, ಗಡಿಗುಡಾಳ, ಶ್ರೀನಿವಾಸಪುರ, ಬೂದಿಹಾಳ, ಜೋಷಿಲಿಂಗಾಪುರ, ಕಂಚಿಕೇರಿ, ಪುಣಭಗಟ್ಟ, ಹಾರಕನಾಳು, ಉಚ್ಚಂಗಿದುರ್ಗ, ಚೆನ್ನಹಳ್ಳಿ, ಚೆನ್ನಹಳ್ಳಿ ತಾಂಡಾ, ನಂದಿಬೇವೂರು ಸೇರಿದಂತೆ 42 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ.
ಹುಣಸಿಕಟ್ಟೆ ಹಾಗೂ ಅಣಜಿಗೇರಿ ಗ್ರಾಮಗಳಲ್ಲಿ ಖಾಸಗಿ ಟ್ಯಾಂಕರ್‌ಗಳಿಂದ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ. ಉಳಿದ ಕಡೆ 70 ಖಾಸಗಿ ಕೊಳವೆಬಾವಿಗಳಿಂದ ಬಾಡಿಗೆ ಆಧಾರದಲ್ಲಿ ನೀರನ್ನು ಪೂರೈಕೆ ಮಾಡಲಾಗುತ್ತದೆ.
ಇವುಗಳಲ್ಲದೆ ಇನ್ನೂ ಅನೇಕ ಕಡೆ ಕುಡಿಯುವ ನೀರಿನ ಸಮಸ್ಯೆ ವಿವಿಧ ಕಾರಣಗಳಿಂದ ಉದ್ಬವವಾಗಿದೆ. ತುಂಗಭದ್ರಾ ನದಿ ಬರಿದಾಗಿರುವುದರಿಂದ ಕಣವಿಹಳ್ಳಿ ಹಾಗೂ 21 ಹಳ್ಳಿಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಬಂದ್ ಮಾಡಲಾಗಿದೆ.
ಹಾರಕನಾಳು ಹಾಗೂ ತೆಲಿಗಿ ಸೇರಿ 86 ಹಳ್ಳಿಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ 2-3 ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತದೆ.
ಎಲ್ಲ ಕಡೆ ಅಂತರ್ಜಲ ತೀವ್ರವಾಗಿ ಕುಸಿಯುತ್ತಲಿದೆ, 200 -300 ಅಡಿ ಆಳದಲ್ಲಿದ್ದ ನೀರು ಇದೀಗ 600 -700 ಕೆಳಕ್ಕೆ ಹೋಗಿದೆ. ನೀರು ಬೀಳದಿರುವ ಅನುಮಾನದಿಂದ ಹೊಸ ಬೋರ್ ಕೊರೆಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.
ಹರಪನಹಳ್ಳಿ ಪಟ್ಟಣಕ್ಕೆ ಮಾತ್ರ ಪುರಸಭೆಯ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿಯವರು ನದಿಯಲ್ಲಿ ಇರುವ ಗುಂಡಿಗೆ ಪೈಪ್‌ಗಳ ಮೂಲಕ 5 ಎಚ್‌ಪಿ ಮೋಟಾರ ಕೂಡಿಸಿ ಜಾಕ್‌ವೆಲ್ ನೀರು ಸಿಗುವಂತೆ ಮಾಡಿದ ಹಿನ್ನೆಲೆಯಲ್ಲಿ 2-3 ದಿನಕ್ಕಾದರೂ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಆದರೆ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೇಳತೀರದಾಗಿದೆ.
ಭದ್ರ ಡ್ಯಾಂನಿಂದ ತುಂಗಭದ್ರ ನದಿಗೆ ಕಳೆದ ಮಾ. 29ರಂದು ನೀರು ಬಿಡಲಾಗಿದೆ. ಪ್ರತಿ ದಿನ 3 ಸಾವಿರ ಕ್ಯೂಸೆಕ್ಸ್ ನಂತೆ ಒಟ್ಟು 2 ಟಿಎಂಸಿ ನೀರು ಬಿಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಹರಪನಹಳ್ಳಿ ಬಳಿ ನದಿಗೆ ನೀರು ಬರಬೇಕಾದರೆ ಇನ್ನೂ 2-3 ದಿವಸ ಬೇಕು ಎಂದು ಅಂದಾಜಿಸಲಾಗಿದೆ.
ನದಿಗೆ ಭದ್ರ ಡ್ಯಾಂ ನೀರು ಬಂದರೂ ಹರಪನಹಳ್ಳಿ ಪಟ್ಟಣ ಹಾಗೂ ಬಹುಗ್ರಾಮ ಕುಡಿಯುವ ನೀರು ಯೋಜನೆ ಇರುವ ಕಡೆ ತಕ್ಕ ಮಟ್ಟಿಗೆ ತೊಂದರೆ ತಪ್ಪಬಹುದು. ಆದರೆ, ಉಳಿದ ಕಡೆ ನೀರಿನ ಸಮಸ್ಯೆ ಹೆಚ್ಚಾಗುತ್ತದೆ.
ಈಚೆಗೆ ಅಣಜಿಗೇರಿ ಸೇರಿದಂತೆ ವಿವಿಧೆಡೆ ನೀರಿಗಾಗಿ ಪ್ರತಿಭಟನೆಗಳು ನಡೆದಿವೆ. ಆದ್ದರಿಂದ ಗ್ರಾಮ ಪಂಚಾಯ್ತಿ ಪಿಡಿಒಗಳು ಇತರ ಸಂಬಂಧಿಸಿದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಮಳೆ ಬರುವ ವರೆಗೂ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಶ್ರಮಿಸಬೇಕು ಎಂಬುದು ಜನತೆಯ ಆಶಯವಾಗಿದೆ.
ಸರಿಯಾಗಿ ನಿರ್ವಹಿಸುತ್ತಿಲ್ಲ
ಜಲಜೀವನಮಿಷನ್ ಯೋಜನೆ ಬೇಗ ಪೂರ್ಣಗೊಳಿಸಿ ಸಮರ್ಪಕ ಕುಡಿಯುವ ನೀರು ಪೂರೈಸಬೇಕು. ಪಿಡಿಒಗಳು ನೀರಿನ ಸಮಸ್ಯೆ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ, ಮಳೆ ಬರುವ ವರೆಗೆ ಕೇಂದ್ರ ಸ್ಥಾನದಲ್ಲಿದ್ದು, ಜನತೆಗೆ ಸ್ಪಂದಿಸಬೇಕು, ಇಲ್ಲದಿದ್ದರೆ ಹೋರಾಟ ಅನಿವಾರ್ಯವಾಗುತ್ತದೆ.
ಗುಡಿಹಳ್ಳಿ ಹಾಲೇಶ, ಕಿಸಾನ್ ಸಭಾ ಜಿಲ್ಲಾದ್ಯಕ್ಷ, ಹರಪನಹಳ್ಳಿ
ಸಮಸ್ಯೆ ನೀಗಿಸುತ್ತಿದ್ದೇವೆ
ಟಾಸ್ಕ್ ಪೋರ್ಸ್‌ನಿಂದ ಈಗಾಗಲೇ ಹಂತ ಹಂತವಾಗಿ ₹45 ಲಕ್ಷ ಬಿಡುಗಡೆಯಾಗಿದೆ. ಇನ್ನೂ 40 ಲಕ್ಷ ಹರಪನಹಳ್ಳಿ ತಾಲೂಕಿಗೆ ನಿಗದಿಯಾಗಿದೆ. ಖಾಸಗಿ ಬೋರ್‌ಗಳನ್ನು ಬಾಡಿಗೆ ಪಡೆದು ಹಾಗೂ ಟ್ಯಾಂಕರ್ ಗಳಿಂದ ನೀರಿನ ಸಮಸ್ಯೆ ನೀಗಿಸುತ್ತಿದ್ದೇವೆ.
-ಕಿರಣ್ ಕುಮಾರನಾಯ್ಕ, ಎಇಇ ನೈರ್ಮಲ್ಯ ಹಾಗೂ ಕುಡಿಯುವ ನೀರು ಸರಬರಾಜು ಇಲಾಖೆ