ದೇಶ ನಿರ್ಮಾಣದಲ್ಲಿ ವಿಜ್ಞಾನಿಗಳಷ್ಟೇ ಅಲ್ಲದೆ ಸಾಹಿತಿಗಳು, ಇತಿಹಾಸಕಾರರು ಹಾಗೂ ಅರ್ಥಶಾಸ್ತ್ರಜ್ಞರ ಪಾತ್ರವೂ ಪ್ರಮುಖವಾಗಿದೆ
ಗದಗ: ವಸ್ತುಪ್ರದರ್ಶನಗಳು ಕೇವಲ ವಿಜ್ಞಾನ ವಿಷಯಕ್ಕೆ ಸೀಮಿತವಾಗಿರದೆ ಕಲೆ, ಸಮಾಜ ವಿಜ್ಞಾನ ಹಾಗೂ ವಾಣಿಜ್ಯ ವಿಷಯಗಳಿಗೂ ವಿಸ್ತರಿಸಿದಾಗ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಮತ್ತು ಸಂವಹನ ಕೌಶಲ್ಯಗಳು ಗರಿಗೆದರುತ್ತವೆ ಎಂದು ಡಾ. ರಾಜಶೇಖರ ಪವಾಡಶೆಟ್ಟರ ಹೇಳಿದರು.
ಗದಗ ನಗರದ ಕೆ.ಎಲ್.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಬಹುಶಿಸ್ತೀಯ ವಸ್ತು ಪ್ರದರ್ಶನ ದರ್ಶನ-2.0 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಿವೃತ್ತ ಪ್ರಾಚಾರ್ಯ ಡಾ. ಸಿ.ಎಸ್. ಹಸಬಿ ಮಾತನಾಡಿ, ಕಲಾ ವಿಭಾಗದ ವಿದ್ಯಾರ್ಥಿಗಳು ಕೀಳರಿಮೆ ಮತ್ತು ಹಿಂಜರಿಕೆಯಿಂದ ಹೊರಬರಲು ಇಂತಹ ಪ್ರದರ್ಶನಗಳು ಸೂಕ್ತ ವೇದಿಕೆಯಾಗಿವೆ. ತಾವು ತಯಾರಿಸಿದ ಮಾದರಿಗಳನ್ನು ಪ್ರಸ್ತುತಪಡಿಸುವ ಮೂಲಕ ಅವರಲ್ಲಿ ನಿಜವಾದ ಜ್ಞಾನದ ಅನ್ವಯಿಕತೆ ಮೂಡುತ್ತದೆ ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎ.ಕೆ. ಮಠ ಮಾತನಾಡಿ, ದೇಶ ನಿರ್ಮಾಣದಲ್ಲಿ ವಿಜ್ಞಾನಿಗಳಷ್ಟೇ ಅಲ್ಲದೆ ಸಾಹಿತಿಗಳು, ಇತಿಹಾಸಕಾರರು ಹಾಗೂ ಅರ್ಥಶಾಸ್ತ್ರಜ್ಞರ ಪಾತ್ರವೂ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲೂ ಇಂತಹ ವಿನೂತನ ಪ್ರಯೋಗ ನಡೆಸಿರುವುದು ಶ್ಲಾಘನೀಯ ಎಂದು ತಿಳಿಸಿದರು.ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 28 ತಂಡಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ಗದಗಿನ ಎ.ಎಸ್.ಎಸ್ ವಾಣಿಜ್ಯ ಮಹಾವಿದ್ಯಾಲಯ ಪ್ರಥಮ ಸ್ಥಾನ, ಗದಗಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದ್ವಿತೀಯ ಸ್ಥಾನ, ವಿವಿಧ ಕಾಲೇಜುಗಳ ಮೂರು ತಂಡಗಳಿಗೆ ಸಮಾಧಾನಕರ ಬಹುಮಾನ ಪಡೆದವು. ಡಾ. ಸಿ.ಎಸ್. ಹಸಬಿ, ಪ್ರೊ. ಹೊನಗನ್ನನವರ ಹಾಗೂ ಪ್ರೊ. ಚಂದ್ರಪ್ಪ ಬಾರಂಗಿ ಅವರು ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದೊಂದು ವಿಶೇಷ ಪ್ರತಿಭೆ ಅಡಗಿರುತ್ತದೆ. ಪುಸ್ತಕದ ಜ್ಞಾನಕ್ಕೆ ಪ್ರಾಯೋಗಿಕ ರೂಪ ನೀಡಿ, ವೀಕ್ಷಕರಿಗೆ ಆತ್ಮವಿಶ್ವಾಸದಿಂದ ವಿವರಿಸುವ ಇಂತಹ ಬಹುಶಿಸ್ತೀಯ ವೇದಿಕೆಗಳು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಅತ್ಯಗತ್ಯ ಎಂದು ವೈದ್ಯ ಡಾ. ರಾಜಶೇಖರ ಪವಾಡಶೆಟ್ಟರ ತಿಳಿಸಿದ್ದಾರೆ.