ಮಾರ್ಚ್‌ 6 ರಿಂದ 11ರ ವರೆಗೆ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ

| Published : Mar 02 2024, 01:51 AM IST

ಮಾರ್ಚ್‌ 6 ರಿಂದ 11ರ ವರೆಗೆ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರಿನ ರಂಗಾಯಣದ ಬಿ.ವಿ. ಕಾರಂತ ರಂಗಚಾವಡಿಯಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಪೋಸ್ಟರ್‌, ನಾಟಕಗಳ ಟಿಕೆಟ್‌ ಬಿಡುಗಡೆ. ವಿಶ್ವಗುರು ಬಸವಣ್ಣನವರ ‘ಇವ ನಮ್ಮವ ಇವ ನಮ್ಮವ’ ಎಂಬ ವಚನದ ಸಾಲಿನ ಆಶಯ ಶೀರ್ಷಿಕೆ. ಈ ಬಾರಿ ಬಹುಭಾಷಾ ನಾಟಕೋತ್ಸವ, ರಾಷ್ಟ್ರೀಯ ವಿಚಾರಸಂಕಿರಣ, ಚಲನಚಿತ್ರೋತ್ಸವ, ಜನಪದ ಸಂಭ್ರಮ, ಪುಸ್ತಕ ಮೇಳ, ಕರಕುಶಲ ಮೇಳ ಮತ್ತು ಪ್ರಾತ್ಯಕ್ಷಿಕೆ, ದೇಸೀ ಆಹಾರ ಮೇಳ, ಚಿತ್ರಕಲಾ ಪ್ರದರ್ಶನ, ಚಾರಿತ್ರಿಕ ದಾಖಲೆಗಳ ಪ್ರದರ್ಶನ, ವಚನಾಂತರಂಗ ಆಯೋಜನೆ.

ಕನ್ನಡಪ್ರಭ ವಾರ್ತೆ ಮೈಸೂರುಮೈಸೂರಿನ ರಂಗಾಯಣ ವತಿಯಿಂದ ಮಾ.6 ರಿಂದ 11 ರವರೆಗೆ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ- 2024 ಅನ್ನು ವಿಶ್ವಗುರು ಬಸವಣ್ಣನವರ ‘ಇವ ನಮ್ಮವ ಇವ ನಮ್ಮವ’ ಎಂಬ ವಚನದ ಸಾಲಿನ ಆಶಯ ಶೀರ್ಷಿಕೆಯೊಂದಿಗೆ ಆಯೋಜಿಸಲಾಗಿದೆ ಎಂದು ನಾಟಕೋತ್ಸವ ಸಂಚಾಲಕ ಪ್ರೊ.ಎಚ್.ಎಸ್. ಉಮೇಶ್ ತಿಳಿಸಿದರು.

ನಗರದ ರಂಗಾಯಣದ ಬಿ.ವಿ. ಕಾರಂತ ರಂಗಚಾವಡಿಯಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ನಾಟಕಗಳ ಟಿಕೆಟ್ ಅನ್ನು ಶುಕ್ರವಾರ ಬಿಡುಗಡೆಗೊಳಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಬಹುಭಾಷಾ ನಾಟಕೋತ್ಸವ, ರಾಷ್ಟ್ರೀಯ ವಿಚಾರಸಂಕಿರಣ, ಚಲನಚಿತ್ರೋತ್ಸವ, ಜನಪದ ಸಂಭ್ರಮ, ಪುಸ್ತಕ ಮೇಳ, ಕರಕುಶಲ ಮೇಳ ಮತ್ತು ಪ್ರಾತ್ಯಕ್ಷಿಕೆ, ದೇಸೀ ಆಹಾರ ಮೇಳ, ಚಿತ್ರಕಲಾ ಪ್ರದರ್ಶನ, ಚಾರಿತ್ರಿಕ ದಾಖಲೆಗಳ ಪ್ರದರ್ಶನ, ವಚನಾಂತರಂಗ ಆಯೋಜಿಸಲಾಗಿದೆ ಎಂದರು.

ಮಾ.5ರ ಸಂಜೆ 5.30ಕ್ಕೆ ಜನಪದ ಸಂಭ್ರಮವನ್ನು ಕಿಂದರಿ ಜೋಗಿ ವೇದಿಕೆಯಲ್ಲಿ ಹಿರಿಯ ಜಾನಪದ ಗಾಯಕ ಡಾ. ಮಳವಳ್ಳಿ ಮಹದೇವಸ್ವಾಮಿ ಉದ್ಘಾಟಿಸುವರು. ಜಾನಪದ ವಿದ್ವಾಂಸರಾದ ಡಾ. ಜಯಲಕ್ಷ್ಮಿ ಸೀತಾಪುರೆ ಅತಿಥಿಯಾಗುವರು. ಬಹುರೂಪಿ ಚಲನಚಿತ್ರೋತ್ಸವವನ್ನು ಮಾ.7ರ ಬೆಳಗ್ಗೆ 10.30ಕ್ಕೆ ಶ್ರೀರಂಗದಲ್ಲಿ ವನ್ಯಜೀವಿ ಛಾಯಾಗ್ರಾಹಕ ಡಾ. ಲೋಕೇಶ್ ಮೊಸಳೆ ಉದ್ಘಾಟಿಸುವರು ಎಂದರು.

ಹಾಗೆಯೇ, ಬಹುರೂಪಿ ನಾಟಕೋತ್ಸವವನ್ನು ಮಾ.7ರ ಸಂಜೆ 4.30ಕ್ಕೆ ವನರಂಗದಲ್ಲಿ ಸಾಹಿತಿ ಜಯಂತ್ ಕಾಯ್ಕಿಣಿ ಉದ್ಘಾಟಿಸುವರು. ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಶಿವರಾಜ್ ಎಸ್. ತಂಗಡಗಿ, ಸಂಸದ ಪ್ರತಾಪ್ ಸಿಂಹ, ಶಾಸಕ ಕೆ. ಹರೀಶ್ ಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಡಾ. ಅಜಯ್ ನಾಗಭೂಷಣ್, ನಿರ್ದೇಶಕಿ ಡಾ. ಧರಣಿದೇವಿ ಮಾಲಗತ್ತಿ, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಭಾಗವಹಿಸುವರು ಎಂದರು.

ವಿಚಾರ ಸಂಕಿರಣ:

ಇವ ನಮ್ಮವ ಇವ ನಮ್ಮವ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣವನ್ನು ಮಾ.9 ಮತ್ತು 10 ರಂದು ಆಯೋಜಿಸಿದ್ದು, ಮಾ.9ರ ಬೆಳಗ್ಗೆ 10ಕ್ಕೆ ಬಿ.ವಿ. ಕಾರಂತ ರಂಗಚಾವಡಿಯಲ್ಲಿ ಚಿಂತಕ ಪ್ರೊ.ಎಚ್.ಎಸ್. ಶಿವಪ್ರಕಾಶ್ ಉದ್ಘಾಟಿಸುವರು. ಲೇಖಕ ಪ್ರೊ.ಓ.ಎಲ್. ನಾಗಭೂಷಣಸ್ವಾಮಿ ಅಧ್ಯಕ್ಷತೆ ವಹಿಸುವರು. ವಚನ ಸಾಹಿತ್ಯ ಹಾಗೂ ರಂಗಭೂಮಿ ಕುರಿತು ಎರಡೂ ದಿನಗಳ ಗೋಷ್ಠಿಗಳಲ್ಲಿ ನಾಡಿನ ಹೆಸರಾಂತ ವಿದ್ವಾಂಸರು ತಮ್ಮ ವಿಚಾರ ಮಂಡಿಸಲಿದ್ದಾರೆ. ಮಾ.10ರ ಸಂಜೆ 4ಕ್ಕೆ ಚಿಂತಕ ಪ್ರೊ.ಎಸ್.ಜಿ. ಸಿದ್ಧರಾಮಯ್ಯ ಸಮಾರೋಪ ನುಡಿಗಳನ್ನಾಡುವರು ಎಂದು ಅವರು ವಿವರಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ರಂಗಾಯಣದ ಉಪ ನಿರ್ದೇಶಕಿ ನಿರ್ಮಲಾ ಮಠಪತಿ, ರಂಗಕರ್ಮಿಗಳಾದ ನಂದಾ ಹಳೆಮನೆ, ಕೃಷ್ಣಪ್ರಸಾದ್ ಇದ್ದರು.

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ 100 ರು. ಟಿಕೆಟ್ ಬಿಡುಗಡೆ ಮಾಡಲಾಗಿದ್ದು, ಬುಕ್ ಮೈ ಶೋ ನಲ್ಲಿ ಆನ್ ಲೈನ್ ಮೂಲಕ ಬುಕ್ ಮಾಡಬಹುದಾಗಿದೆ. ಶೇ.40 ಟಿಕೆಟ್ ಗಳನ್ನು ಆನ್ ಲೈನ್, ಶೇ.40 ರಂಗಾಯಣ ಆವರಣದಲ್ಲಿ ಆಫ್ ಲೈನ್ ನಲ್ಲಿ ಮಾರಾಟ ಮಾಡಲಾಗುತ್ತದೆ. ಉಳಿದ ಶೇ.20 ಟಿಕೆಟ್ ಗಳನ್ನು ನಾಟಕ ಪ್ರದರ್ಶನ ದಿನದಂದ ರಂಗಾಯಣದಲ್ಲಿ ಲಭ್ಯವಿರುತ್ತದೆ.

- ನಿರ್ಮಲಾ ಮಠಪತಿ, ಉಪ ನಿರ್ದೇಶಕಿ, ರಂಗಾಯಣ

ಬಹುರೂಪಿ ನಾಟಕಗಳ ಪ್ರದರ್ಶನ

ಬಹುರೂಪಿ ನಾಟಕೋತ್ಸವದಲ್ಲಿ ಉತ್ತರಪ್ರದೇಶ, ಮುಂಬೈ, ಕೊಲ್ಕೊತ್ತಾ, ಮಣಿಪುರ, ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳ 6 ನಾಟಕಗಳು, ಕನ್ನಡ ಭಾಷೆಯ 10 ಮತ್ತು ತುಳು ಭಾಷೆಯ 1 ನಾಟಕವು ಸೇರಿದಂತೆ ಒಟ್ಟು 17 ನಾಟಕಗಳು ಭೂಮಿಗೀತ, ವನರಂಗ, ಕಲಾಮಂದಿರ ಮತ್ತು ಕಿರು ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿವೆ.

ಮಾ.7 ರಂದು ಮುಟ್ಟಿಸಿಕೊಂಡವನು(ಕನ್ನಡ), ಲೋಕದ ಒಳಹೊರಗೆ (ಕನ್ನಡ), ಶಿಶುನಾಳ ಶರೀಫ (ಕನ್ನಡ), ಮಾ.8 ರಂದು ದುಖ್ವಾ ಮೇ ಬೀತಲ್ ರತಿಯಾ(ಹಿಂದಿ), ದ್ರೋಪದಿ ಹೇಳ್ತವ್ಳೆ (ಕನ್ನಡ), ಕಲ್ಯಾಣದ ಬಾಗಿಲು(ಕನ್ನಡ), ಸೀತೆಯ ವ್ಯಥೆ (ಕನ್ನಡ), ಮಾ.9 ರಂದು ಜಂಪ್ (ಹಿಂದಿ), ಗ್ಲಾನಿ (ಕನ್ನಡ), ಚಾವುಂಡರಾಯ (ಕನ್ನಡ), ಖಟಾರ (ಮರಾಠಿ). ಮಾ.10 ರಂದು ಕಿಟನ್ ಕೋಲಾ (ಬಂಗಾಳಿ), ಬ್ಲ್ಯಾಕ್‌ ಔಟ್ (ಕನ್ನಡ), ಚಿಲ್ಲರ ಸಮರಂ (ಮಲಯಾಳಂ), ಕರಿಯದೇವರ ಹುಡುಕಿ (ಕನ್ನಡ). ಮಾ.11 ರಂದು ಅಬೊರಿಜಿನಲ್ ಕ್ರೈ (ಮಣಿಪುರಿ), ಪಾರ್ಶ್ವಸಂಗೀತ (ಕನ್ನಡ), ಕಥೆ ಎಡ್ಡೇಂಡು (ತುಳು) ಹಾಗೂ ಬೆರಳ್ಗೆ ಕೊರಳ್ (ಕನ್ನಡ) ನಾಟಕಗಳು ಪ್ರದರ್ಶನವಾಗಲಿದೆ.