ಸಾರಾಂಶ
ಚಿಕ್ಕಬಳ್ಳಾಪುರ: ಗೌರಿಬಿದನೂರು ನಗರದ ನಗರಸಭೆ ವಿರುದ್ಧ ಸಾಕಷ್ಟು ದೂರುಗಳು ಕೇಳಿ ಬಂದಿವೆ, ಇನ್ನೊಂದು ವಾರದಲ್ಲಿ ಎಲ್ಲವನ್ನು ಅಧಿಕಾರಿಗಳು ಸರಿಪಡಿಸಿಕೊಳ್ಳದೇ ಹೋದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮವನ್ನು ಜರುಗಿಸಲಾಗುವುದು ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂಖಾನ್ ಖಡಕ್ ಎಚ್ಚರಿಕೆ ನೀಡಿದರು.
ಗೌರಿಬಿದನೂರು ನಗರದ ನಗರಸಭೆಗೆ ಭೇಟಿ ನೀಡಿದ ಅವರಿಗೆ ನಗರಸಭೆ ಸದಸ್ಯರಾದ ವಿ.ರಮೇಶ್,ಮೋಮಿನ್‌ತಾಜ್, ಮಾಜಿ ಸದಸ್ಯ ಕೆ.ಎಸ್.ಅನಂತರಾಜು, ಶೋಭಾ ರವರು ನಗರಸಭೆಯ ಅವ್ಯವಸ್ಥೆಗಳನ್ನು ವಿವರಿಸಿದರು. ಖಾತೆಗಳು ಆಗುತ್ತಿಲ್ಲ, ಇದೀಗ ಆನ್‌ಲೈನ್ ಖಾತೆ ಮಾಡುವುದಾಗಿ ಸರಕಾರ ಹೇಳುತ್ತಿದೆ. ಆದರೆ ಇಲ್ಲಿನ ನಗರಸಭೆಯಲ್ಲಿ ಆನ್‌ಲೈನ್ ಇಲ್ಲಾ. ಆಫ್‌ಲೈನ್ ಇಲ್ಲ ಸುಖಾ ಸುಮ್ಮನೆ ಕಚೇರಿ ಅಲೆದಾಡಬೇಕು. ಇಲ್ಲಿನ ಆಡಳಿತ ದಲ್ಲಾಳಿಗಳ ಆಡಳಿತವಾಗಿದೆ ಎಂದು ದೂರಿದರು.ವಿಕಲಚೇತನ ಮಂಜುನಾಥ್ ಎಂಬುವವರು ತಮ್ಮ ನಿವೇಶನದ ಖಾತೆಗಾಗಿ ಕಚೇರಿಯ ಮೆಟ್ಟಿಲು ಹತ್ತು ಇಳಿದು ಸಾಕಾಗಿದೆ ಎಂದು ತನ್ನ ಅಳಲನ್ನು ಸಚಿವರ ಬಳಿ ತೊಡಿಕೊಂಡರು.ಸಚಿವ ರಹೀಂಖಾನ್ ಮಾತನಾಡಿ, ನಗರದ ಮೂಲಭೂತ ಸೌಕರ್ಯಗಳ ಕಾಮಗಾರಿಗಳು ಯಾವುದೇ ಕಾರಣಕ್ಕೂ ವಿಳಂಬವಾಗಬಾರದು, ವಿಳಂಬವಾದಲ್ಲಿ ಅಂತಹ ಗುತ್ತಿಗೆ ದಾರರು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು. ಖಾತೆಗಳಿಗೆ ಅಲೆದಾಡಿಸುವುದು ಸೇರಿದಂತೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದಿದ್ದಲ್ಲಿ ಅಧಿಕಾರಿಗಳು ನೇರ ಹೊಣೆಯಾಗುತ್ತಾರೆ, ಅವರ ವಿರುದ್ಧ ಅಮಾನತು ಜೊತೆಗೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಇದು ನಮ್ಮ ಸರ್ಕಾರದ ಆದೇಶವಾಗಿದೆ ಎಂದರು.
ಇಂದಿರಾ ಕ್ಯಾಂಟಿನ್ ಭೇಟಿ:ಸಚಿವರು ನಗರದ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಯನ್ನು ನೋಡಿ ಏನ್ರೀ..ಇದು ಇಲ್ಲಿ ಅಡುಗೆ ಮಾಡುತ್ತಿರುವ ಯಾವುದೇ ಗುರುತುಗಳೇ ಕಾಣಿಸುತ್ತಿಲ್ಲ. ಇವತ್ತು ನನಗಾಗಿ ಮನೆಯಿಂದ ಅಡುಗೆ ಮಾಡಿಕೊಂಡು ಬಂದ ಹಾಗೆ ಇದೆ ಎಂದು ಅನ್ನಸಾಂಬರ್ ಸವಿದರು, ನಮ್ಮ ಸರಕಾರದ ಮಹತ್ತರ ಯೋಜನೆಯನ್ನು ಅಧಿಕಾರಿಗಳು ಈರೀತಿ ಬೇಜಾವ್ದಾರಿಯಿಂದ ಹಳ್ಳ ಹಿಡಿಸುತ್ತಿದ್ದೀರಾ ಎಂದು ನಗರಸಭೆ ಅಧಿಕಾರಿಗಳ ವಿರುದ್ಧ ಕೆಂಡಮಂಡಲರಾದರು.ಈ ವೇಳೆ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಮಾತನಾಡಿ, ನಗರಸಭೆಯಲ್ಲಿ ಯಾವುದೇ ಅಧಿಕಾರಿಗಳು ತಪ್ಪು ಮಾಡಿದರೂ ಪೌರಾಯುಕ್ತರೇ ನೇರ ಹೊಣೆಯಾಗುತ್ತೀರಾ. ನಿಮ್ಮ ವಿರುದ್ದವೇ ನಿರ್ದಾಕ್ಷಿಣ್ಯ ಕ್ರಮವನ್ನು ಜರುಗಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿ, ನಿಮಗೆ ಅಧಿಕಾರಿಗಳನ್ನು ನಿಬಾಹಿಸಲು ಸಾಧ್ಯವಾಗದೆ ಇದ್ದಲ್ಲಿ ನಮಗೆ ನಿಮ್ಮ ಅವಶ್ಯಕತೆಯಿಲ್ಲ ಎಂದು ಪೌರಾಯುಕ್ತರ ವಿರುದ್ದ ಸಚಿವರ ಮುಂದೆಯೇ ಕಿಡಿಕಾರಿದರು.1.5 ಕೋಟಿ ಅನುದಾನ:
ಕ್ಷೇತ್ರದ ಸಂಸದರ ಅನುದಾನದಿಂದ 1.5 ಕೋಟಿ ಅನುದಾನ ನಗರಕ್ಕೆ ನೀಡುವಂತೆ ಸಂಸದರಿಗೆ ಹಾಗೂ ಡಿಸಿ ಅವರಿಗೆ ಪತ್ರವನ್ನು ಬರೆಯಲಾಗಿದೆ, ನಗರಸಭೆಯಲ್ಲಿ ಸಿಬ್ಬಂದಿಯ ಕೊರತೆ ಹಾಗೂ ಅನುದಾನದ ಕೊರತೆ ಇದೆ, ಸಚಿವರು ಅದನ್ನು ಮಾಡಿಕೊಡುವಂತೆ ಸಚಿವರಲ್ಲಿ ಶಾಸಕರು ಮನವಿ ಮಾಡಿದರು.ನಗರದ ವಿವಿಧ ವಾರ್ಡ್‌ಗಳನ್ನು ಭೇಟಿ ಮಾಡಿ ರಸ್ತೆಗಳನ್ನು ಪರಿಶೀಲಿಸಿದರು. ಎಂ.ಜಿ.ರಸ್ತೆ ಗುಂಡಿಗಳಿಂದ ಹಾಗೂ ದೂಳಿನಿಂದ ಆನಾರೋಗ್ಯಕ್ಕೆ ತುತ್ತಾಗುವಂತಾಗಿದೆ ಎಂದು ಎಂ.ಜಿ.ರಸ್ತೆಯ ಅಂಗಡಿ ಮಾಲೀಕರು ತಮ್ಮ ಅಳಲನ್ನು ಸಚಿವರ ಬಳಿ ತೋಡಿಕೊಂಡರು.
ಈ ಸಂದರ್ಭದಲ್ಲಿ ನಗರಸಭೆಯ ಹಾಲಿ ಮತ್ತು ಮಾಜಿ ಸದಸ್ಯರು, ಕೆ.ಎಚ್.ಪಿ.ಬಣದ ಮುಖಂಡರುಗಳು ಇದ್ದರು.