ಉದ್ಘಾಟನೆಯಾಗಿ 1 ವರ್ಷ ಕಳೆದರೂ ಆರಂಭ ಆಗದ ಮುಂಡಗೋಡ ಬಸ್ ಡಿಪೋ

| Published : Mar 19 2025, 12:33 AM IST

ಸಾರಾಂಶ

ಬಸ್ ಡಿಪೋ ಆವರಣದಲ್ಲೀಗ ಗಿಡಗಂಟಿ ಬೆಳೆದು ನಿಂತಿವೆ. ಮುಂಡಗೋಡ ಜನತೆಯ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಮುಂಡಗೋಡ: ಸಾರಿಗೆ ಸಂಸ್ಥೆ ಅಧಿಕಾರಿಗಳ ನಿರ್ಲಕ್ಷ್ಯ, ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದಾಗಿ ₹4 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಮುಂಡಗೋಡ ಸಾರಿಗೆ ಸಂಸ್ಥೆ ಬಸ್ ಡಿಪೋ ಉದ್ಘಾಟನೆಯಾಗಿ ೧ ವರ್ಷ ಕಳೆದರೂ ಇದುವರೆಗೆ ಬಸ್ ಕಾರ್ಯಾರಂಭಿಸದೇ ಹಾಳುಗೆಡವಲಾಗಿದೆ. ಬಸ್ ಡಿಪೋ ಆವರಣದಲ್ಲೀಗ ಗಿಡಗಂಟಿ ಬೆಳೆದು ನಿಂತಿವೆ. ಮುಂಡಗೋಡ ಜನತೆಯ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಮುಂಡಗೋಡ ಜನತೆಯ ಮೂರು ದಶಕಗಳ ಬೇಡಿಕೆಯಾಗಿದ್ದ ಬಸ್ ಡಿಪೋ ಹಲವು ವರ್ಷಗಳ ಬಳಿಕ ನಿರ್ಮಾಣವಾಗಿವೆ. ಕಳೆದ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಪೂರ್ವದಲ್ಲಿ ಡಿಪೋಗೆ ಬೇಕಾದ ಡೀಸೆಲ್ ಟ್ಯಾಂಕ್ ಹಾಗೂ ಅಗತ್ಯ ಮೂಲಭೂತ ಸೌಲಭ್ಯ ಒದಗಿಸದೇ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ತರಾತುರಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಂದ ಉದ್ಘಾಟನೆ ಮಾಡಲಾಯಿತು.

ಬಸ್, ಮೂಲಭೂತ ಸೌಲಭ್ಯ ಒದಗಿಸಿ ಕಾರ್ಯಾರಂಭಿಸುವ ಗೋಜಿಗೆ ಯಾರು ಹೋಗಲಿಲ್ಲ. ಇದರಿಂದ ನಾಮಕಾವಾಸ್ತೆ ಉದ್ಘಾಟನೆಗೊಂಡ ಬಸ್ ಡಿಪೋ ಇಂದಿಗೂ ಬೀಗ ಜಡಿದುಕೊಂಡು ಬಿಕೋ ಎನ್ನುತ್ತಿದೆ.

ಬಸ್ ಡಿಪೋ ಕಾರ್ಯರಂಭಿಸದೇ ಇರುವುದರಿಂದ ಮುಂಡಗೋಡ ತಾಲೂಕಿನ ಜನತೆ ಸುತ್ತಮುತ್ತಲಿನ ಡಿಪೋ ಬಸ್‌ಗಳನ್ನು ಅವಲಂಬಿಸುವುದು ತಪ್ಪಿಲ್ಲ. ಚುನಾವಣೆ ಸಂದರ್ಭದಲ್ಲಿ, ನಾವು ಅದು ಮಾಡಿದ್ದೇವೆ, ಇದು ಮಾಡಿದ್ದೇವೆ ಎಂದು ತೋರಿಸಿಕೊಳ್ಳುವ ಉದ್ದೇಶದಿಂದ ತರಾತುರಿಯಲ್ಲಿ ಉದ್ಘಾಟನೆ ಮಾಡಲಾಯಿತಾ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ತಕ್ಷಣ ಸಂಬಂಧಿಸಿದ ಸಾರಿಗೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಬಸ್ ಡಿಪೋಗೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಿ ಶೀಘ್ರ ಬಸ್‌ಗಳ ಸಂಚಾರ ಪ್ರಾರಂಭಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ. ಈ ಬಗ್ಗೆ ಚರ್ಚಿಸಲಾಗಿದ್ದು, ಸಣ್ಣ ಪುಟ್ಟ ಕೆಲ ಕೆಲಸಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಿ ಸುತ್ತಮುತ್ತ ಬಸ್ ಡಿಪೋಗಳಿಂದ ಅಗತ್ಯ ಸಿಬ್ಬಂದಿ ಪಡೆದುಕೊಂಡು ಬಸ್ ಗಳ ವೇಳಾಪಟ್ಟಿ ತಯಾರಿಸಿಕೊಂಡು ಸದ್ಯದಲ್ಲೇ ಬಸ್ ಕಾರ್ಯಾರಂಭಿಸಲಾಗುವುದು ಎನ್ನುತ್ತಾರೆ ಕೆಎಸ್‌ಆರ್‌ಟಿಸಿ ನಿಯಂತ್ರಾಣಾಧಿಕಾರಿ, ಶಿರಸಿ ವಿಭಾಗ ಬಸವರಾಜ ಅಮ್ಮನವರ.

ಡೀಸೆಲ್ ಟ್ಯಾಂಕ್ ನಿರ್ಮಾಣವಾಗಿದ್ದು, ಜಿಲ್ಲಾಧಿಕಾರಿ ತೈಲ ಕಂಪನಿಯಿಂದ ಪರವಾನಗಿಗಾಗಿ ಪತ್ರ ಬರೆದಿದ್ದಾರೆ. ವಿಳಂಬ ಮಾಡದೇ ಸಣ್ಣ ಪುಟ್ಟ ಕೆಲಸ ಪೂರ್ಣಗೊಳಿಸಿ ಎಂದು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಶೀಘ್ರ ಬಸ್ ಕಾರ್ಯಾರಂಭವಾಗಲಿದೆ ಎನ್ನುತ್ತಾರೆ ಶಾಸಕ ಶಿವರಾಮ ಹೆಬ್ಬಾರ.