ಸಾರಾಂಶ
ಸಂತೋಷ ದೈವಜ್ಞ
ಮುಂಡಗೋಡ: ಇಲ್ಲಿನ ಮುಂಡಗೋಡ ಬಸ್ ಡಿಪೋ ಎರಡೆರಡು ಬಾರಿ ಉದ್ಘಾಟನೆಗೊಂಡರೂ ಬಸ್ ಭಾಗ್ಯ ದೊರೆತಿಲ್ಲ. ಬಸ್ ಇಲ್ಲದ ಬಸ್ ಡಿಪೋ ಎಂಬ ಹೆಗ್ಗಳಿಕೆಗೆ ಮುಂಡಗೋಡ ಬಸ್ ಡಿಪೋ ಪಾತ್ರವಾಗಿದೆ. ಬಸ್‌ಗಾಗಿ ಇಂದಿಗೂ ಜನರ ಹೋರಾಟ ತಪ್ಪಿಲ್ಲ. ನಿತ್ಯ ಬಸ್ ಸೌಲಭ್ಯಕ್ಕಾಗಿ ಪ್ರತಿಭಟನೆ ರಸ್ತೆ ತಡೆ ನಡೆಯುತ್ತಲೇ ಇವೆ.ಒಂದು ಬಾರಿ ಕಟ್ಟಡ ಉದ್ಘಾಟನೆ, ಇನ್ನೊಂದು ಬಾರಿ ಬಸ್ ಕಾರ್ಯಾರಂಭ ಎಂದು ಹೇಳಿಕೊಂಡು ಎರಡೆರಡು ಬಾರಿ ಉದ್ಘಾಟನೆ ಮಾಡಲಾಗಿದೆ. ಆದರೆ ಬಸ್‌ಗಳನ್ನು ಮಾತ್ರ ನೀಡಲಾಗಿಲ್ಲ. ಇದರಿಂದ ದಿನ ಬೆಳಗಾದರೆ ವಿದ್ಯಾರ್ಥಿಗಳು ಸಾರ್ವಜನಿಕರು ಬಸ್‌ಗಾಗಿ ಪ್ರತಿಭಟನೆ ಮಾಡುವುದು ಇಲ್ಲಿ ಸಾಮಾನ್ಯವಾಗಿದೆ. ಇದೆಲ್ಲ ನೋಡಿದರೆ ಬಸ್ ಡಿಪೋ ಕೇವಲ ಪ್ರಚಾರಕ್ಕೆ ಸೀಮಿತವಾಗಿದೆ.
ಸಾರಿಗೆ ಸಂಸ್ಥೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯಿಂದಾಗಿ ₹೪ ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಪಟ್ಟಣದ ಸಾರಿಗೆ ಬಸ್ ಡಿಪೋ ಒಂದೂವರೆ ವರ್ಷದ ಹಿಂದೆ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಪೂರ್ವದಲ್ಲಿ ಡಿಪೋಗೆ ಬೇಕಾದ ಡೀಸೆಲ್ ಟ್ಯಾಂಕ್ ಹಾಗೂ ಅಗತ್ಯ ಮೂಲಭೂತ ಸೌಲಭ್ಯ ಒದಗಿಸದೇ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ತರಾತುರಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಂದ ಉದ್ಘಾಟನೆ ಮಾಡಲಾಯಿತು.ಡಿಪೋಗೆ ಬೇಕಾದ ಅಗತ್ಯ ಬಸ್ ಹಾಗೂ ಮೂಲಭೂತ ಸೌಲಭ್ಯ ಒದಗಿಸಿ ಕಾರ್ಯಾರಂಭಿಸುವ ಗೋಜಿಗೆ ಯಾರು ಹೋಗಲಿಲ್ಲ. ಇದರಿಂದ ಸುಮಾರು ೧ ವರ್ಷಗಳ ಕಾಲ ಬಸ್ ಡಿಪೋ ಹಾಳು ಬಿದ್ದಿತ್ತು. ಈಗ ಡೀಸೆಲ್ ಟ್ಯಾಂಕ್ ನಿರ್ಮಾಣವಾಗಿದೆ. ಕಳೆದ ಒಂದೂವರೆ ತಿಂಗಳ ಹಿಂದೆ ಬಸ್ ಡಿಪೋದಿಂದ ಬಸ್ ಕಾರ್ಯಾರಂಭ ಎಂಬ ಶೀರ್ಷಿಕೆಯಡಿ ಶಾಸಕ ಶಿವರಾಮ ಹೆಬ್ಬಾರ ಹಸ್ತದಿಂದ ಮತ್ತೊಮ್ಮೆ ಉದ್ಘಾಟಿಸಿ ಚಾಲನೆ ನೀಡಲಾಯಿತು. ಇದರಿಂದ ಮುಂಡಗೋಡ ಜನತೆಯ ೩ ದಶಕಗಳ ಬೇಡಿಕೆಯಾಗಿದ್ದ ಬಸ್ ಡಿಪೋ ವಿಳಂಬವಾಗಿದೆ.
ಬಸ್ ಸಮಸ್ಯೆ ಪರಿಹಾರವಾಗಲಿದೆ; ಬಹುದಿನದ ಕನಸು ನನಸಾಗುತ್ತಿದೆ ಎಂದು ತಾಲೂಕಿನ ಜನತೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಅದು ಕೂಡ ಹುಸಿಯಾಗಿದೆ. ಡಿಪೋಗೆ ಅಧಿಕೃತವಾಗಿ ಬಸ್ ನೀಡಲಾಗಿಲ್ಲ. ಇದರಿಂದ ತಾಲೂಕಿನ ಜನತೆ ಸುತ್ತಮುತ್ತಲಿನ ಡಿಪೋ ಬಸ್‌ಗಳನ್ನು ಅವಲಂಬಿಸುವುದು ತಪ್ಪಿಲ್ಲ.ತಕ್ಷಣ ಸಂಬಂಧಿಸಿದ ಸಾರಿಗೆ ಸಂಸ್ಥೆ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಬಸ್ ಡಿಪೋಗೆ ಬಸ್‌ಗಳನ್ನು ನೀಡಿ ವೇಳಾಪಟ್ಟಿ ತಯಾರಿಸಿ ಅಗತ್ಯ ರೂಟ್‌ಗಳಿಗೆ ಬಸ್ ಬಿಡಬೇಕೆಂಬುವುದು ಸಾರ್ವಜನಿಕರ ಆಗ್ರಹವಾಗಿದೆ.
ಈ ಬಗ್ಗೆ ಮಾಹಿತಿ ಪಡೆಯಲು ಕೆಎಸ್ಆರ್ಟಿಸಿ ಶಿರಸಿ ವಿಭಾಗ ನಿಯಂತ್ರಾಣಾಧಿಕಾರಿ ಬಸವರಾಜ ಅಮ್ಮನವರ ಅವರಿಗೆ ಕನ್ನಡಪ್ರಭ ವರದಿಗಾರರು ಹಲವು ಬಾರಿ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಬಳಿಕ ಬೇರೆಯೊಂದು ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿದಾಗ ಸ್ವೀಕರಿಸಿದರು. ಡಿಪೋ ಬಗ್ಗೆ ಕೇಳುತ್ತಿದ್ದಂತೆ, ನಾನು ಮೀಟಿಂಗ್‌ನಲ್ಲಿದ್ದೇನೆ; ಆಮೇಲೆ ಮಾತನಾಡುತ್ತೇನೆ ಎಂಬ ಉತ್ತರ ನೀಡಿದರು.ಬಸ್ ಡಿಪೋ ಉದ್ಘಾಟನೆಯಾಗಿ ಸುಮಾರು ಒಂದೂವರೆ ವರ್ಷ ಕಳೆದಿದೆ. ಮೂಲಭೂತವಾಗಿ ಬಸ್ ಕಾರ್ಯಾರಂಭಿಸದೇ ಇರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಬಹುತೇಕ ಗ್ರಾಮೀಣ ಪ್ರದೇಶಕ್ಕೆ ಇಂದಿಗೂ ಬಸ್ ಸಂಪರ್ಕವಿಲ್ಲ. ತಕ್ಷಣ ಸಮರ್ಪಕ ಬಸ್ ಒದಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎನ್ನುತ್ತಾರೆ ನ್ಯಾಯವಾದಿ, ಸಾಮಾಜಿಕ ಕಾರ್ಯಕರ್ತ ಸಂಗಮೇಶ ಕೊಳ್ಳಾನವರ.