ಸಾರಾಂಶ
ಮೂತ್ರ ವಿಸರ್ಜನೆಗೆ ಹೋಗಲು ಪ್ರಯಾಣಿಕರು ಹಿಂದೇಟು ಹಾಕುವಂತಾಗಿದೆ.
ಮುಂಡಗೋಡ: ಪಟ್ಟಣದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ, ಅದರ ಶೌಚಖಾನೆಗಳಲ್ಲಿ ಸ್ವಚ್ಛತೆ ಕಾಣದಾಗಿದೆ. ಮೂತ್ರ ವಿಸರ್ಜನೆಗೆ ಹೋಗಲು ಪ್ರಯಾಣಿಕರು ಹಿಂದೇಟು ಹಾಕುವಂತಾಗಿದೆ.ಬಸ್ ನಿಲ್ದಾಣ ಸೂಕ್ತ ನಿರ್ವಹಣೆ ಇಲ್ಲದ ಕಾರಣ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ. ಇದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ನಿಲ್ದಾಣದಿಂದ ಹುಬ್ಬಳ್ಳಿ-ಶಿರಸಿ, ಮಂಗಳೂರು, ಧರ್ಮಸ್ಥಳ, ಮುಂಬೈ, ಕೊಲ್ಲಾಪುರ, ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ತಾಲೂಕುಗಳಾದ ಯಲ್ಲಾಪುರ, ಕಲಘಟಗಿ, ಬಂಕಾಪುರ, ಶಿಗ್ಗಾಂವಿ, ಹಾನಗಲ್ಲ ಮುಂತಾದೆಡೆ ನಿತ್ಯ ನೂರಾರು ಬಸ್‌ಗಳು ಬಿಡುವಿಲ್ಲದೇ ಸಂಚರಿಸುತ್ತವೆ. ಸಾವಿರಾರು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಸುಸಜ್ಜಿತ ವಿಶಾಲವಾದ ಬಸ್ ನಿಲ್ದಾಣವಿದೆ. ಆದರೆ ಅದಕ್ಕೆ ತಕ್ಕಂತೆ ಸ್ವಚ್ಛತೆ ಹಾಗೂ ಸಮರ್ಪಕ ನಿರ್ವಹಣೆ ಇಲ್ಲದ ಕಾರಣ ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಗಿದೆ. ಶೌಚಾಖಾನೆಯನ್ನು ಸಮರ್ಪಕವಾಗಿ ಸ್ವಚ್ಛಗೊಳಿಸಲಾಗುವುದಿಲ್ಲ, ಹೀಗಾಗಿ ಗಬ್ಬೆದ್ದು ನಾರುತ್ತವೆ. ಇದರಿಂದ ಹಲವರು ಬಸ್ ನಿಲ್ದಾಣದ ಅಕ್ಕ ಪಕ್ಕ ಬಯಲು ಮೂತ್ರ ವಿಸರ್ಜನೆಗೆ ತೆರಳುತ್ತಾರೆ. ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಕಸ ಕಡ್ಡಿ ಬಿದ್ದಿರುತ್ತದೆ. ಬಸ್ ನಿಲ್ದಾಣಕ್ಕೆ ಒಬ್ಬ ಕಾವಲುಗಾರ ಕೂಡ ಇಲ್ಲ. ಸಾರಿಗೆ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಮುಂಡಗೋಡ ಪಟ್ಟಣದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ಹಾಗೂ ಅದರ ಶೌಚಾಲಯಗಳಲ್ಲಿ ಸ್ವಚ್ಛತೆ ಇಲ್ಲ.