ಸಾರಾಂಶ
ಮುಂಡಗೋಡ: ಪಟ್ಟಣದ ಇಂದಿರಾಗಾಂಧಿ ವಸತಿ ಶಾಲೆಯ 100ಕ್ಕೂ ಹೆಚ್ಚು ಮಕ್ಕಳಲ್ಲಿ ಶಂಕಿತ ಮಂಗನಬಾವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಲೆಗೆ ಶುಕ್ರವಾರದಿಂದ ಮೂರು ದಿನ ರಜೆ ನೀಡಿ ಮಕ್ಕಳನ್ನು ಮನೆಗೆ ಕಳುಹಿಸಲಾಗಿದೆ.
ಬುಧವಾರ ವಸತಿ ಶಾಲೆಯ ಕೆಲವರಲ್ಲಿ ಜ್ವರ ಹಾಗೂ ಗಂಟಲು ನೋವು, ಉರಿ ಲಕ್ಷಣ ಕಾಣಿಸಿಕೊಂಡಿತ್ತು. ಕ್ರಮೇಣ ಬಹುತೇಕ ಮಕ್ಕಳಲ್ಲಿ ಈ ಲಕ್ಷಣ ಕಾಣಿಸಿಕೊಳ್ಳುತ್ತ ಹೋಯಿತು. ವಸತಿ ಶಾಲೆಯ ೨೦೫ ವಿದ್ಯಾರ್ಥಿಗಳ ಪೈಕಿ ೧೦೦ಕ್ಕೂ ಅಧಿಕ ವಿದ್ಯಾರ್ಥಿಗಳಲ್ಲಿ ಶಂಕಿತ ಸೋಂಕು ಕಾಣಿಸಿಕೊಂಡಿದೆ. ವಿಶೇಷ ವೈದ್ಯಕೀಯ ತಂಡವನ್ನು ನಿಯೋಜನೆ ಮಾಡಿ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರ ಆದೇಶದ ಮೇರೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗೆ ರಜೆ ನೀಡಿ ವಿದ್ಯಾರ್ಥಿಗಳನ್ನು ಪಾಲಕರೊಂದಿಗೆ ಮನೆಗೆ ಕಳುಹಿಸಲಾಗಿದೆ. ಶುಕ್ರವಾರ ಶಿರಸಿ ಸಹಾಯಕ ಆಯುಕ್ತೆ ಕಾವ್ಯಾರಾಣಿ ಇಂದಿರಾಗಾಂಧಿ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಕಲೆ ಹಾಕಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಶಂಕರ ಗೌಡಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಟಿ.ವೈ. ದಾಸನಕೊಪ್ಪ ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದರು.ಮುನ್ನೆಚ್ಚರಿಕೆ ವಹಿಸಲಿ: ವಿದ್ಯಾರ್ಥಿಗಳಲ್ಲಿ ಕಾಣಿಸಿಕೊಂಡ ಸೋಂಕು ಮಂಗನಬಾವು ಕಾಯಿಲೆ ಎಂದು ಹೇಳಲಾಗುವುದಿಲ್ಲ. ಹಲವು ಮಕ್ಕಳಲ್ಲಿ ಜ್ವರ, ಶೀತ, ಗಂಟಲು ಕೆರೆತ ಹಾಗೂ ಬಾವು ಕಾಣಿಸಿಕೊಂಡಿದ್ದು, ಅಗತ್ಯ ಚಿಕಿತ್ಸೆ ನೀಡಲಾಗಿದೆ. ೫ ಜನ ಮಕ್ಕಳು ಮಾತ್ರ ಮಂಗನಬಾವು ಶಂಕಿತರಿದ್ದು, ಅವರ ರಕ್ತ ಮಾದರಿ ಪಡೆದು ಪರೀಕ್ಷೆಗೆ ಕಳುಹಿಸಲಾಗಿದೆ. ಅಲ್ಲದೇ ವಿದ್ಯಾರ್ಥಿಗಳು ಮನೆಗೆ ತೆರಳಿದಾಗ ಸೋಂಕು ಬೇರೆಯವರಿಗೆ ತಗುಲದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ ಎಂದು ತಾಲೂಕು ಆಡಳಿತ ವೈದ್ಯಾಧಿಕಾರಿ ಸ್ವರೂಪರಾಣಿ ಪಾಟೀಲ ತಿಳಿಸಿದರು.
3 ದಿನ ರಜೆ:ಒಬ್ಬರಿಂದ ಇನ್ನೊಬ್ಬರಿಗೆ ಸೋಂಕು ಹರಡದಿರಲಿ ಎಂಬ ಉದ್ದೇಶದಿಂದ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಮುಂಜಾಗ್ರತಾ ಕ್ರಮವಾಗಿ ಶಾಲೆಗೆ ೩ ದಿನ ರಜೆ ನೀಡಿ ಮಕ್ಕಳನ್ನು ಪಾಲಕರೊಂದಿಗೆ ಮನೆಗೆ ಕಳುಹಿಸಲಾಗಿದೆ ಎಂದು ಇಂದಿರಾಗಾಂಧಿ ವಸತಿ ಶಾಲೆಯ ಪ್ರಾಂಶುಪಾಲರಾದ ಅನ್ನಪೂರ್ಣ ಚೌಡಿ ತಿಳಿಸಿದರು.
ಬೈಕ್‌ಗೆ ಬುಲೆರೋ ವಾಹನ ಡಿಕ್ಕಿ: ಮಹಿಳೆ ಸಾವುಶಿರಸಿ: ಬನವಾಸಿ ಸೊರಬ ರಸ್ತೆಯಲ್ಲಿ ನಿಂತಿದ್ದ ಬೈಕ್‌ಗೆ ಹಿಂಬದಿಯಿಂದ ಬುಲೆರೋ ಪಿಕ್‌ಅಪ್ ಡಿಕ್ಕಿಯಾದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.ಸೊರಬ ತಾಲೂಕಿನ ಕೆರೆಹಳ್ಳಿಯ ಯಶೋದಾ ಮೃತಪಟ್ಟ ಮಹಿಳೆ. ಬನವಾಸಿ ಬಳಿ ರಸ್ತೆಯ ಪಕ್ಕದಲ್ಲಿ ಬೈಕ್‌ನಲ್ಲಿ ಮಾತನಾಡುತ್ತ ನಿಂತಿದ್ದ ಮಹೇಶ ಹಾಗೂ ಈತನ ಹೆಂಡತಿ ಯಶೋದಾ ಮಗಳಾದ ಸಾಹಿತ್ಯ ಅವರಿಗೆ ಹಿಂದಿನಿಂದ ಬುಲೆರೋ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಮಹೇಶ ಹಾಗೂ ಸಾಹಿತ್ಯ ತಲೆಗೆ ಹಾಗೂ ಮುಖಕ್ಕೆ ಗಂಭೀರ ಗಾಯವಾಗಿದೆ. ಯಶೋದಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬನವಾಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನಾ ಸ್ಥಳಕ್ಕೆ ಪಿಎಸ್‌ಐ ಚಂದ್ರಕಲಾ ಪತ್ತಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.