ಸಾರಾಂಶ
ಸೌಂದರ್ಯಕ್ಕಾಗಿ ಅಲ್ಲಲ್ಲಿ ಗಿಡಮರ ಬೆಳೆಸುವ ಉದ್ದೇಶದಿಂದ ತಾಲೂಕು ಸಾಮಾಜಿಕ ವಲಯ ಅರಣ್ಯ ಇಲಾಖೆ ಸಸ್ಯಪಾಲನಾ ಕ್ಷೇತ್ರದಲ್ಲಿ ಪ್ರಸ್ತುತ ವರ್ಷ ಸುಮಾರು 32,585 ಸಸಿಗಳು ಬೆಳೆದು ನಿಂತಿವೆ.
ಶರಣು ಸೊಲಗಿ
ಮುಂಡರಗಿ:ತಾಲೂಕಿನ ರೈತರ ಜಮೀನು ಬದುಗಳ ಹಸಿರೀಕರಣಕ್ಕಾಗಿ ಹಾಗೂ ಪಟ್ಟಣದ ಸೌಂದರ್ಯಕ್ಕಾಗಿ ಅಲ್ಲಲ್ಲಿ ಗಿಡಮರ ಬೆಳೆಸುವ ಉದ್ದೇಶದಿಂದ ತಾಲೂಕು ಸಾಮಾಜಿಕ ವಲಯ ಅರಣ್ಯ ಇಲಾಖೆ ಸಸ್ಯಪಾಲನಾ ಕ್ಷೇತ್ರದಲ್ಲಿ ಪ್ರಸ್ತುತ ವರ್ಷ ಸುಮಾರು 32,585 ಸಸಿಗಳು ಬೆಳೆದು ನಿಂತಿವೆ.
ತಾಲೂಕಿನ ಕೊರ್ಲಹಳ್ಳಿಯ ಸಾಮಾಜಿಕ ವಲಯ ಅರಣ್ಯ ಇಲಾಖೆಯ ಸಸ್ಯಪಾಲನಾ ಕ್ಷೇತ್ರದಲ್ಲಿ 32,585 ಸಸಿಗಳು ಬೆಳೆದು ನಿಂತಿವೆ. ಇವುಗಳಲ್ಲಿ ಆರ್.ಎಸ್.ಪಿ.ಡಿ. ಯೋಜನೆಯಡಿ ರೈತರ ಮಾರಾಟಕ್ಕಾಗಿ ಮಹಾಗಣಿ, ನೇರಳೆ, ಹೆಬ್ಬೇವು, ಜೆಂಬು ನೇರಳೆ, ಬೇವು, ಬಿದಿರು, ಸಿಲ್ವರ್ ಒಕ್, ಸಾಗವಾನಿ, ಬೆಟ್ಟದ ನೆಲ್ಲಿ ಸೇರಿದಂತೆ ವಿವಿಧ ಬಗೆಯ ಸುಮಾರು 22,375 ಸಸಿ ಬೆಳೆಸಿ ಬೆಲೆ ನಿಗದಿಪಡಿಸಲಾಗಿದ್ದು, ಪ್ಲಾಸ್ಟಿಕ್ ಚೀಲದಲ್ಲಿರುವ 6*9 ಸೈಜಿನ ಸಸಿಗಳಿಗೆ ಸರ್ಕಾರ ಈ ಬಾರಿ ₹3 ನಿಗದಿ ಮಾಡಿದೆ. ಅದೇ ರೀತಿ ಪ್ಲಾಸ್ಟಿಕ್ ಚೀಲದಲ್ಲಿರುವ 8*12 ಅಳತೆಯ ಸಸಿಗಳಿಗೂ ಸಹ ₹ 6 ದರ ನಿಗದಿ ಮಾಡಲಾಗಿದೆ. ರೈತರು ಹಣ ಪಾವತಿಸಿ ತಮಗೆ ಬೇಕಾದ ಸಸಿಗಳನ್ನು ಪಡೆದುಕೊಳ್ಳಬಹುದಾಗಿದೆ. ಸಾಮಾಜಿಕ ವಲಯ ಅರಣ್ಯ ಇಲಾಖೆ ಹಾಗೂ ಇತರ ಸಂಘಟನೆಗಳು ಆಶ್ರಯದಲ್ಲಿ ಸಸಿ ನೆಡುವ ಕಾರ್ಯ ಪ್ರತಿ ವರ್ಷವೂ ಮಾಡಲಾಗುತ್ತಿದೆ.ಅದಕ್ಕಾಗಿಯೇ ಸಾಮಾಜಿಕ ಅರಣ್ಯ ಇಲಾಖೆ 10,210 ಸಸಿ ಬೆಳೆಸಿದ್ದು, ಮಹಾಗಣಿ, ರೇನ್ ಟ್ರೀ, ಹೊಂಗೆ, ಗುಲ್‌ಮೊಹರ್, ಬಸವನಪಾದ, ಗೋಣಿ, ತಪ್ಸಿ, ಬದಾಮಿ, ಬಸರಿ, ಆಲ, ಅರಳಿ, ಹುಣಸೆ, ಹೆಬ್ಬೇವು, ಜಂಬು ನೇರಳೆ, ಅತ್ತಿ, ಹೊಳೆಮತ್ತಿ, ಸ್ಪೆತೋಡಿಯಾ ಸೇರಿದಂತೆ ವಿವಿಧ ಸಸಿಗಳನ್ನು ಬೆಳೆಸಲಾಗಿದೆ.
ಕೊರ್ಲಹಳ್ಳಿ ಸಸ್ಯಪಾಲನಾ ಕ್ಷೇತ್ರದಲ್ಲಿ ಉತ್ತಮವಾಗಿ ಸಸಿ ಬೆಳೆಸಿದ್ದು, ಸರ್ಕಾರ ನಿಗದಿಪಡಿಸಿದ ದರದಲ್ಲಿ ರೈತರಿಗೆ ಮಾರಾಟ ಮಾಡಲಾಗುವುದು. ಅಲ್ಲದೇ ವಿವಿಧೆಡೆ ರಸ್ತೆ ಬದಿ, ಶಾಲಾ-ಕಾಲೇಜು ಆವರಣ, ಸರ್ಕಾರಿ ಕಚೇರಿಗಳ ಆವರಣ ಸೇರಿದಂತೆ ವಿವಿಧ ಸರ್ಕಾರಿ ಜಾಗಗಳಲ್ಲಿ ಹಚ್ಚಿ ಬೆಳೆಸಲು ಯೋಚಿಸಲಾಗಿದೆ. ಶೀಘ್ರದಲ್ಲಿ ಅಲ್ಲಲ್ಲಿ ಸಸಿ ನೆಡುವ ಕಾರ್ಯ ಪ್ರಾರಂಭಿಸಲಾಗುವುದು. ರೈತರು ಮತ್ತು ಸಂಘ ಸಂಸ್ಥೆಗಳು ಖರೀದಿ ಮಾಡಿಕೊಂಡು ಹೋಗಿರುವ ಸಸಿಗಳನ್ನು ಹಚ್ಚಿ ಉಳಿಸಿ-ಬೆಳೆಸಲು ಸ್ವಯಂ ಪ್ರೇರಣೆಯಿಂದ ಮುಂದಾಗಬೇಕು ಎಂದು ಮುಂಡರಗಿಯ ಸಾಮಾಜಿಕ ವಲಯ ಅರಣ್ಯಾಧಿಕಾರಿ ಕೌಶಿಕ್ ದಳವಾಯಿ ಹೇಳಿದರು.