ಅನ್ನ, ಅಕ್ಷರ, ಸಾಹಿತ್ಯ ಸೇವೆಯಲ್ಲಿ ಮುಂಡರಗಿ ಅನ್ನದಾನೀಶ್ವರ ಸ್ವಾಮೀಜಿ ಮೇಲ್ಪಂಕ್ತಿ-ಚನ್ನಬಸವ ಸ್ವಾಮೀಜಿ

| Published : Feb 24 2024, 02:34 AM IST

ಅನ್ನ, ಅಕ್ಷರ, ಸಾಹಿತ್ಯ ಸೇವೆಯಲ್ಲಿ ಮುಂಡರಗಿ ಅನ್ನದಾನೀಶ್ವರ ಸ್ವಾಮೀಜಿ ಮೇಲ್ಪಂಕ್ತಿ-ಚನ್ನಬಸವ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

155ಕ್ಕೂ ಹೆಚ್ಚು ಮೌಲ್ಯಯುತವಾದ ಎಲ್ಲ ತರಹದ ಸಾಹಿತ್ಯ ಕೃತಿಗಳನ್ನು ರಚಿಸುವ ಮೂಲಕ ಮುಂಡರಗಿ ಅನ್ನದಾನೀಶ್ವರ ಸ್ವಾಮೀಜಿ ಮೇಲ್ಪಂಕ್ತಿಯಲ್ಲಿದ್ದಾರೆ ಎಂದು ಜಮಖಂಡಿ ಓಲೆ ಮಠದ ಚನ್ನಬಸವ ಸ್ವಾಮೀಜಿ ಹೇಳಿದರು.

ಮುಂಡರಗಿ: ಹಸಿದು ಬಂದವರಿಗೆ ಅನ್ನ ನೀಡುವುದು, ನಾಡಿನಾದ್ಯಂತ 33ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ತೆರೆದು ಎಲ್ಲರಿಗೂ ಅಕ್ಷರಾಭ್ಯಾಸಕ್ಕೆ ಅನುಕೂಲ ಮಾಡಿಕೊಡುವುದು, 155ಕ್ಕೂ ಹೆಚ್ಚು ಮೌಲ್ಯಯುತವಾದ ಎಲ್ಲ ತರಹದ ಸಾಹಿತ್ಯ ಕೃತಿಗಳನ್ನು ರಚಿಸುವ ಮೂಲಕ ಮುಂಡರಗಿ ಅನ್ನದಾನೀಶ್ವರ ಸ್ವಾಮೀಜಿ ಮೇಲ್ಪಂಕ್ತಿಯಲ್ಲಿದ್ದಾರೆ ಎಂದು ಜಮಖಂಡಿ ಓಲೆ ಮಠದ ಚನ್ನಬಸವ ಸ್ವಾಮೀಜಿ ಹೇಳಿದರು.

ಅವರು ಗುರುವಾರ ಸಂಜೆ ಅನ್ನದಾನೀಶ್ವರ ಮಠದ 154ನೇ ಯಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಧರ್ಮಸಭೆ ಹಾಗೂ ಅನ್ನದಾನೀಶ್ವರ ಪ್ರತಿಷ್ಠಾನ ಪುರಸ್ಕಾರ ಹಾಗೂ ಗ್ರಂಥ ಬಿಡುಗಡೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು. ವೀರಶೈವ ಧರ್ಮದಲ್ಲಿ ಪ್ರಮುಖವಾದ ಷಟ್‌ಸ್ಥಲ ಕುರಿತು ವಿಶ್ಲೇಷಿಸುವ ಪಾಂಡಿತ್ಯ ಚನ್ನಬಸವಣ್ಣವರಿಗೆ ಇತ್ತು. ನಂತರದಲ್ಲಿ ಮಗ್ಗೆ ಮಹಾದೇವರಿಗಿತ್ತು, ಈಗ ಮುಂಡರಗಿ ಶ್ರೀಗಳಿಗೆ ಮಾತ್ರ ಆ ಪಾಂಡಿತ್ಯವಿದೆ. ಬರದ ನಾಡನ್ನು ಸಿರಿಯ ನಾಡನ್ನಾಗಿ ಮಾಡಿದ ಕೀರ್ತಿ ಈಗಿನ ಶ್ರೀಗಳಿಗೆ ಸಲ್ಲುತ್ತದೆ ಎಂದು ಹೇಳಿದರು.ಅನೇಕ ಪಂಡಿತರು ಮುಂಡರಗಿ ಶ್ರೀಗಳ ಸಾಹಿತ್ಯವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ಸಮಾಜದಲ್ಲಿ ಶರಣರ ಬಗ್ಗೆ ಅನೇಕ ದ್ವಂದ್ವಗಳು ಎದ್ದಾಗ, ಶರಣರ ಜನ್ಮಸ್ಥಳದಲ್ಲಿಯೇ ವಿಚಾರ ಸಂಕಿರಣಗಳನ್ನು ನಡೆಸಿ, ಸಂಕಿರಣದಲ್ಲಿ ಮಂಡಿಸಿದ ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ ಹೊರತಂದು ಸಮಾಜಕ್ಕೆ ನೀಡಿದ್ದಾರೆ. ದಾನ ಧರ್ಮದಲ್ಲಿ ಶಿರಸಂಗಿ ಲಿಂರಾಜರ ಹೆಸರು ಕೇಳಿದ್ದೇವೆ, ಅದರಂತೆ ಮುಂಡರಗಿ ಶ್ರೀಗಳು ಅನೇಕ ಸಾರ್ವಜನಿಕ ಕಾರ್ಯಕ್ಕೆ ಶ್ರೀಮಠದ ನೂರಾರು ಎಕರೆ ಭೂಮಿ ದಾನಮಾಡಿ ಸಾಮಾಜಿಕ ಕಳಕಳಿಯನ್ನು ತೋರಿದ್ದಾರೆ. ಈ ಎಲ್ಲ ಕಾರ್ಯಗಳು ಶ್ರೀ ಮಠದಿಂದ ನಡೆಯುತ್ತಿರುವುದು ನಮಗೆಲ್ಲ ಸಂತೋಷವನ್ನುಂಟು ಮಾಡಿದೆ ಎಂದರು.

ಕಾರ್ಯಕ್ರಮದಲ್ಲಿ ಶಿವಕುಮಾರ ದೇವರು ಬಳೂಟಗಿ, ಲಿಂಗನಾಯಕನಹಳ್ಳಿಯ ಚನ್ನವೀರ ಮಹಾಸ್ವಾಮಿಗಳು ಮತ್ತು ಅನೇಕ ಹರಗುರು ಚರಮೂರ್ತಿಗಳು ಮಾತನಾಡಿದರು. ಪಟ್ಟಣದ ಖ್ಯಾತ ಉದ್ದಿಮೆದಾರ ಕರಬಸಪ್ಪ ಹಂಚಿನಾಳ ಅವರಿಗೆ ಶ್ರೀ ಜಗದ್ಗುರು ಅನ್ನದಾನೀಶ್ವರ ಪ್ರತಿಷ್ಠಾನ ಪುರಸ್ಕಾರ ಪ್ರದಾನ ಮಾಡಲಾಯಿತು.

ಸಾನ್ನಿಧ್ಯವಹಿಸಿದ್ದ ಜ. ನಾಡೋಜ ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, ಶ್ರೀಮಠದ ಯಾತ್ರಾ ಮಹೋತ್ಸವ ವರ್ಷದಿಂದ ವರ್ಷಕ್ಕೆ ಅದ್ಧೂರಿಯಾಗಿ ನಡೆಯುತ್ತಿದ್ದು, ಅದಕ್ಕೆ ಎಲ್ಲ ಭಕ್ತರ ಸಹಕಾರವೇ ಕಾರಣವಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ಅನೇಕ ಭಕ್ತರು ಶೇಂಗಾ ಹೋಳಿಗೆ, ಕರ್ಜಿಕಾಯಿ, ರೊಟ್ಟಿ ಸೇರಿದಂತೆ ಅನೇಕ ಆಹಾರ ಪದಾರ್ಥಗಳನ್ನು ಮಾಡಿಕೊಂಡು ಬಂದು ತಮ್ಮ ಭಕ್ತಿಯನ್ನು ಸಮರ್ಪಿಸಿದ್ದಾರೆ. ಭಕ್ತರ ಭಕ್ತಿಯೇ ಶ್ರೀಮಠಕ್ಕೆ ಶಕ್ತಿಯಾಗಿದೆ ಎಂದರು.

ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ಚನ್ನಬಸವ ದೇವರು, ಗುರುಪಾದ ಸ್ವಾಮೀಜಿ, ಡಾ. ಚೆನ್ನಮಲ್ಲ ಸ್ವಾಮೀಜಿ, ವೀರೇಶ್ವರ ಶಿವಾಚಾರ್ಯರು, ನಾಗೇಶ ಹುಬ್ಬಳ್ಳಿ, ಡಾ. ಬಿ.ಜಿ. ಜವಳಿ, ಎಂ.ಎಸ್. ಶಿವಶೆಟ್ಟರ, ಬಸಪ್ಪ ಬನ್ನಿಕೊಪ್ಪ, ದೇವಪ್ಪ ರಾಮೇನಹಳ್ಳಿ, ಡಾ. ಬಿ.ಎಸ್. ಮೇಟಿ, ಎಂ.ಜಿ. ಗಚ್ಚಣ್ಣವರ, ಆರ್.ಎಲ್. ಪೊಲೀಸ್ ಪಾಟೀಲ ಉಪಸ್ಥಿತರಿದ್ದರು. ಶಾಲಾ-ಕಾಲೇಜುಗಳ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಎಸ್.ಎಸ್. ಇನಾಮತಿ ಮತ್ತು ಶಿಕ್ಷಕ ಮಠದ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಲಾವಿದ ಮುದಿಯಪ್ಪ ಭಜಂತ್ರಿ ಕ್ಲೈರಿನೇಟ್ ವಾದನ ನುಡಿಸಿದರು. ಆನಂತರ ಜೀವನಸಾಬ್ ಬಿನ್ನಾಳ ಹಾಸ್ಯಸಂಜೆ ಕಾರ್ಯಕ್ರಮ ನಡೆಯಿತು.