ಸಾರಾಂಶ
ಶರಣು ಸೊಲಗಿ ಮುಂಡರಗಿ
ಜಿಲ್ಲೆಯ ಬೇರೆ ತಾಲೂಕುಗಳಿಗೆ ಹೋಲಿಸಿದರೆ ಮುಂಡರಗಿ ತಾಲೂಕಿನಲ್ಲಿ ಉತ್ತಮ ಮಳೆಯಾಗಿಲ್ಲವಾದರೂ ಅಲ್ಪಸ್ವಲ್ಪ ಸುರಿದ ಮಳೆಯಿಂದ ತಾಲೂಕಿನ ವಿವಿಧೆಡೆ ರೈತರು ತಮ್ಮ ಜಮೀನುಗಳನ್ನು ಹದಗೊಳಿಸಿ ಮುಂಗಾರು ಬಿತ್ತನೆಗೆ ಸಜ್ಜಾಗಿದ್ದಾರೆ.ತಾಲೂಕಿನಲ್ಲಿ ಏಪ್ರಿಲ್ ತಿಂಗಳಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಮೇ ತಿಂಗಳಲ್ಲಿ ವಾಡಿಕೆಗಿಂತಲೂ ಹೆಚ್ಚು ಪ್ರಮಾಣದ ಮಳೆ ಸುರಿದಿದೆ. ಏಪ್ರಿಲ್‌ನಲ್ಲಿ 37ಮಿಮೀ ವಾಡಿಕೆ ಮಳೆ ಇದ್ದು, 29 ಮಿಮೀ ಮಾತ್ರ ಮಳೆ ಸುರಿದಿದೆ, ಮೇ 1ರಿಂದ 28ರವರೆಗೆ ವಾಡಿಕೆ ಮಳೆ 57 ಮಿಮೀ ಇದ್ದು, 84 ಮಿಮೀ ಮಳೆ ಸುರಿದಿದೆ. ಹೀಗಾಗಿ ಕಳೆದ ವಾರ ಸುರಿದ ಮಳೆಯಿಂದ ಭೂಮಿ ಹಸಿಯಾಗಿ ಬಿತ್ತನೆಗೆ ಅನುಕೂಲವಾಗುವಂತಾಗಿದೆ.
ಕಳೆದ ವರ್ಷ ಮುಂಗಾರಿನ ಸಂದರ್ಭದಲ್ಲಿ ಉತ್ತಮ ಮಳೆಯಾಗದ ಹಿನ್ನೆಲೆ ತಾಲೂಕಿನಾದ್ಯಂತ ಭೀಕರ ಬರಗಾಲ ಅನುಭವಿಸುವಂತಾಯಿತು. ಪ್ರಸ್ತುತ ವರ್ಷ ಅಲ್ಪಸ್ವಲ್ಪ ಮಳೆಯಾಗುತ್ತಿದ್ದು, ರೈತರಿಗೆ ಬಿತ್ತನೆ ಮಾಡಲು ಜಮೀನು ಹಸಿಯಾದ ಹಿನ್ನೆಲೆಯಲ್ಲಿ ರೈತರು ಬಿತ್ತನೆಗಾಗಿ ಜಮೀನನ್ನು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಕೆಲವು ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ರೈತ ಸಮುದಾಯ ಈ ಬಾರಿ ಉತ್ತಮ ಮಳೆಯಾಗುವ ನಿರೀಕ್ಷೆಯಲ್ಲಿದ್ದು, ಈಗಾಗಲೇ ಬಿತ್ತನೆಗೆ ಬೇಕಾದ ಬೀಜ, ಗೊಬ್ಬರದ ತಯಾರಿ ಮಾಡಿಕೊಳ್ಳಲು ಮುಂದಾಗಿ ಕೃಷಿ ಚಟುವಟಿಕೆಗಳಿಗೆ ಬೇಕಾದ ಎಲ್ಲ ಸಲಕರಣೆ ಸಜ್ಜು ಮಾಡಿಕೊಳ್ಳುತ್ತಿದ್ದಾರೆ.ಮುಂಡರಗಿ ತಾಲೂಕಿನಲ್ಲಿ ನೀರಾವರಿ ಹಾಗೂ ಖುಷ್ಕಿ ಜಮೀನಿನಲ್ಲಿ ಒಟ್ಟು 48,288 ಹೇಕ್ಟರ್ ಬಿತ್ತನೆ ಗುರಿ ಹೊಂದಲಾಗಿದ್ದು, ಅದರಲ್ಲಿ ಪ್ರಮುಖ ಬೆಳೆಗಳಾದ ಜೋಳ 1,335 ಹೆಕ್ಟೇರ್, ಗೋವಿನಜೋಳ 22,000 ಹೆಕ್ಟೇರ್, ಸಜ್ಜೆ 650 ಹೆಕ್ಟೇರ್, ತೊಗರಿ 245 ಹೆಕ್ಟೇರ್, ಹೆಸರು 8050 ಹೆಕ್ಟೇರ್, ಶೇಂಗಾ 4,310 ಹೆಕ್ಟೇರ್, ಸೂರ್ಯಕಾಂತಿ 7,230 ಹೆಕ್ಟೇರ್, ಭತ್ತ 2,846 ಹೆಕ್ಟೇರ್, ಬಿಟಿಹತ್ತಿ 620 ಹೆಕ್ಟೇರ್, ಕಬ್ಬು 840 ಹೆಕ್ಟೇರ್ ನಾಟಿ ಗುರಿ ಹೊಂದಲಾಗಿದೆ.
ಮುಂಡರಗಿ ರೈತ ಸಂಪರ್ಕ ಕೇಂದ್ರದಲ್ಲಿ ಸದ್ಯ 10 ಕ್ವಿಂಟಲ್ ಹೆಸರು, 20 ಕ್ವಿಂಟಲ್ ತೊಗರಿ, 16 ಕ್ವಿಂಟಲ್ ಗೋವಿನಜೋಳ ಬೀಜ ಸಂಗ್ರಹವಿದೆ. ಅದೇ ರೀತಿ ತಾಲೂಕಿನ ಡಂಬಳ ರೈತ ಸಂಪರ್ಕ ಕೇಂದ್ರದಲ್ಲಿ 25 ಕ್ವಿಂಟಲ್ ಹೆಸರು, 20ಕ್ವಿಂಟಲ್ ತೊಗರಿ, 15 ಕ್ವಿಂಟಲ್ ಶೇಂಗಾ, 16 ಕ್ವಿಂಟಲ್ ಗೋವಿನಜೋಳ ಬಿತ್ತನೆ ಬೀಜ ಸಂಗ್ರಹವಿದೆ. ಸೂರ್ಯಕಾಂತಿ, ಸಜ್ಜೆ ಇನ್ನಿತರ ಬೀಜಗಳು ರೈತ ಸಂಪರ್ಕ ಕೇಂದ್ರದಲ್ಲಿ ಲಭ್ಯವಿಲ್ಲ. ಜೂನ್ ಮೊದಲ ವಾರದಲ್ಲಿ ಇನ್ನಷ್ಟು ಮಳೆಯಾಗಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಕಾರ್ಯ ನಡೆಯುವ ನಿರೀಕ್ಷೆ ಇದ್ದು, ಅಷ್ಟರಲ್ಲಿ ಬಿತ್ತನೆ ಬೀಜ ಕೊರತೆಯಾಗದಂತೆ ಸಂಗ್ರಹಿಸಿ ರೈತರಿಗೆ ವಿತರಿಸುವ ಕಾರ್ಯಕ್ಕೆ ಇಲಾಖೆ ಕ್ರಮ ಕೈಗೊಳ್ಳಬೇಕಿದೆ.ನಮ್ಮ ಭಾಗದಲ್ಲಿ ಆಗಾಗ ಮಳೆ ಸುರಿಯುತ್ತಿರುವ ಹಿನ್ನೆಲೆ ಬಿತ್ತನೆಗೆ ಭೂಮಿ ಹಸಿಯಾಗಿದ್ದು, ಈಗಾಗಲೇ ನಾವು ಬಿತ್ತನೆ ಕಾರ್ಯಕ್ಕೆ ಮುಂದಾಗುತ್ತಿದ್ದೇವೆ. ಹಮ್ಮಿಗಿ ಭಾಗದಲ್ಲಿ ಗೋವಿನ ಜೋಳ ಬಿತ್ತನೆ ಪ್ರಾರಂಭವಾಗಿದೆ. ಇನ್ನೂ ಹೆಚ್ಚಿನ ಮಳೆಯ ಅವಶ್ಯವಿದ್ದು, ಭೂಮಿ ಇನ್ನಷ್ಟು ಹಸಿಯಾದರೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಹಮ್ಮಿಗಿ ರೈತ ಕೊಟ್ರೇಶ ಬಳ್ಳಾರಿ ಹೇಳಿದರು.
ತಾಲೂಕಿನಲ್ಲಿ ಇತ್ತೀಚೆಗೆ ಮಳೆ ಸುರಿದಿದ್ದು, ಇನ್ನೂ 2-3 ದಿನಗಳಲ್ಲಿ ಇನ್ನಷ್ಟು ಮಳೆಯಾಗುವ ಸಾಧ್ಯತೆ ಇದ್ದು, ರೈತರು ಕಾದು ನೋಡಿ ಬಿತ್ತನೆ ಮಾಡಿದರೆ ಭೂಮಿ ಸಂಪೂರ್ಣ ಹಸಿಯಾಗಿ ಬೀಜ ಹುಟ್ಟಲು ಅನುಕೂಲವಾಗುತ್ತದೆ. ತಾಲೂಕಿನ ಮುಂಡರಗಿ ಹಾಗೂ ಡಂಬಳ ರೈತ ಸಂಪರ್ಕ ಕೇಂದ್ರದಲ್ಲಿ ಸದ್ಯ ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ ಹಾಗೂ ಗೊಬ್ಬರ ದಾಸ್ತಾನು ಇದ್ದು, ಈಗಾಗಲೇ ರೈತರಿಗೆ ವಿತರಿಸಲಾಗುತ್ತಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ ಹೇಳಿದರು.