ಮುಂಡರಗಿಯಿಂದ ಹಡಗಲಿ-ಹರಪನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮುಂಡರಗಿ ಪಟ್ಟಣದ ಹೆಸರೂರು ಕ್ರಾಸ್‌ನಿಂದ ಕೈಗಾರಿಕಾ ಪ್ರದೇಶದವರೆಗಿನ ರಸ್ತೆ ದಶಕಗಳಿಂದ ಅಭಿವೃದ್ಧಿ ಕಂಡಿಲ್ಲ.

ಶಿವಕುಮಾರ ಕುಷ್ಟಗಿ

ಗದಗ: ಅಭಿವೃದ್ಧಿ ಎನ್ನುವುದು ಜನರ ಜೀವನವನ್ನು ಸುಗಮಗೊಳಿಸಬೇಕು. ಆದರೆ ಮುಂಡರಗಿ ಪಟ್ಟಣದ ಹೆಸರೂರು ಕ್ರಾಸ್‌ನಿಂದ ಕೈಗಾರಿಕಾ ಪ್ರದೇಶದವರೆಗಿನ ರಸ್ತೆ ಮಾತ್ರ ಜನರ ಪಾಲಿಗೆ ನರಕ ಸದೃಶವಾಗಿದೆ.

ಕಳೆದ 10 ವರ್ಷಗಳಿಂದ ಈ ರಸ್ತೆ ಕಾಮಗಾರಿ ಕುಂಟುತ್ತಾ ಸಾಗುತ್ತಿದ್ದು, ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಜೀವಂತ ಸಾಕ್ಷಿಯಂತಿದೆ.

ಮುಂಡರಗಿಯಿಂದ ಹಡಗಲಿ-ಹರಪನಹಳ್ಳಿಗೆ ಸಂಪರ್ಕ ಕಲ್ಪಿಸುವ ಈ ಪ್ರಮುಖ ರಸ್ತೆಯ ಪೈಕಿ, ಪಟ್ಟಣದ ಹೆಸರೂರು ಕ್ರಾಸ್‌ನಿಂದ ಕೈಗಾರಿಕಾ ಪ್ರದೇಶದವರೆಗಿನ ಕೇವಲ 1 ಕಿಮೀ ರಸ್ತೆ ಅಭಿವೃದ್ಧಿಯಾಗದೇ ದಶಕ ಕಳೆದಿದೆ. ರಾಜ್ಯದ ಪ್ರಮುಖ ಜಿಲ್ಲೆಗಳನ್ನು ಸಂಪರ್ಕಿಸುವ ಈ ರಸ್ತೆಯ ಹಣೆಬರಹ ಹತ್ತು ವರ್ಷವಾದರೂ ಬದಲಾಗಿಲ್ಲ ಎನ್ನುವುದು ಈ ಭಾಗದ ದುರ್ದೈವ ಎಂದರೆ ತಪ್ಪಾಗಲಾರದು.

ಅವೈಜ್ಞಾನಿಕ ಡಿವೈಡರ್: ರಸ್ತೆ ಅಗಲೀಕರಣದ ಹೆಸರಿನಲ್ಲಿ ನಿರ್ಮಿಸಲಾಗಿರುವ ಡಿವೈಡರ್‌ಗಳು (ವಿಭಜಕಗಳು) ಸಂಪೂರ್ಣ ಅವೈಜ್ಞಾನಿಕವಾಗಿವೆ. ಗುತ್ತಿಗೆದಾರರು ಮತ್ತು ಅಧಿಕಾರಿಗಳು ತಮ್ಮ ಇಚ್ಛಾನುಸಾರ ಎಲ್ಲಿ ಬೇಕೋ ಅಲ್ಲಿ ಡಿವೈಡರ್ ಅಳತೆಗಳಲ್ಲಿ ವ್ಯತ್ಯಾಸ ಮಾಡಿ ನಿರ್ಮಿಸಿದ್ದಾರೆ. ಕೆಲವೆಡೆ 4 ಮೀಟರ್ ಅಗಲ ಮಾಡಿದ್ದರೆ, ಇನ್ನು ಕೆಲವು ಸ್ಥಳಗಳಲ್ಲಿ ಕೇವಲ 1.5 ಮೀಟರ್ ಅಗಲ ನಿರ್ಮಿಸಿದ್ದಾರೆ. ಇವು ಸಂಚಾರಿಗಳ ಪ್ರಾಣಕ್ಕೆ ಕುತ್ತು ತರುತ್ತಿವೆ.

ಬಸ್ ನಿಲ್ದಾಣದ ಮುಂದೆಯೇ ಬಾಕಿ: ನಿತ್ಯವೂ ಸಾವಿರಾರು ಜನರು ಸಂಚರಿಸುವ ಮುಂಡರಗಿ ಬಸ್ ನಿಲ್ದಾಣದ ಮುಂಭಾಗದಲ್ಲಿಯೇ ಈ ರಸ್ತೆಯ ಅಭಿವೃದ್ಧಿ ದಶಕಗಳಿಂದ ಹಾಗೆಯೇ ಉಳಿದಿದೆ. ಕನಿಷ್ಠ ರಸ್ತೆಯನ್ನು ಪೂರ್ಣ ನಿರ್ಮಿಸದೇ ವಿಭಜಕ ನಿರ್ಮಾಣಕ್ಕಾಗಿ ಭೂಮಿ ಅಗೆದು ಹಾಗೆಯೇ ಬಿಟ್ಟು ಹೋಗಿದ್ದು, ಈ ಪ್ರದೇಶದಲ್ಲಿ ನೂರಾರು ಬೈಕ್ ಸವಾರರು ಬಿದ್ದು ಕೈ ಕಾಲು ಮುರಿದುಕೊಂಡಿದ್ದಾರೆ. 10-9-2025ರಂದು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಿಂದ ಈ ಕುರಿತು ಮುಖ್ಯ ಎಂಜಿನಿಯರ್‌ಗೆ ಪತ್ರ ಬರೆದು ಕೈ ತೊಳೆದುಕೊಂಡಿರುವುದೇ ಈ ರಸ್ತೆ ವಿಷಯದಲ್ಲಿ ಇಲಾಖೆ ಮಾಡಿದ ಸಾಧನೆಯಾಗಿದೆ.

ಧೂಳಿನ ಮಜ್ಜನ: ರಸ್ತೆ ಸುರಕ್ಷತಾ ನಿಯಮಗಳ ಪ್ರಕಾರ ರಸ್ತೆ ಮಧ್ಯಗಳಲ್ಲಿ ನಿರ್ಮಾಣ ಮಾಡುವ ಡಿವೈಡರ್‌ಗಳಲ್ಲಿ ಗುಣಮಟ್ಟದ ಮಣ್ಣನ್ನು ಹಾಕಿ, ಅಲ್ಲಿ ಗಿಡಗಳನ್ನು ನೆಡಬೇಕು, ಆದರೆ ಮುಂಡರಗಿ ಪಟ್ಟಣದಲ್ಲಿ ಈಗಷ್ಟೇ ಕಾಮಗಾರಿ ಪ್ರಾರಂಭಿಸಿದ್ದು, ಕಾಟಾಚಾರಕ್ಕೆ ಎನ್ನುವಂತೆ ಡಿವೈಡರ್ ಮಧ್ಯದಲ್ಲಿ ಪುಡಿ ಮಣ್ಣನ್ನು (ಹುಡಿ ಮಣ್ಣು) ಸುರಿಯಲಾಗಿದೆ. ಇದರಿಂದಾಗಿ, ಒಂದು ವಾಹನ ಸಂಚರಿಸಿದರೆ ಸಾಕು, ಇಡೀ ರಸ್ತೆ ಧೂಳಿನಿಂದ ಆವೃತ್ತವಾಗುತ್ತದೆ. ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಧೂಳಿನಲ್ಲಿ ಮುಚ್ಚಿ ಹೋಗುವಂತಾಗಿದೆ. ಅಕ್ಕಪಕ್ಕದ ಅಂಗಡಿಗಳಿಗೆ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರಿಗೂ ತೀವ್ರ ತೊಂದರೆಯಾಗಿ ಶ್ವಾಸಕೋಶದ ಕಾಯಿಲೆಗಳಿಗೆ ತುತ್ತಾಗುವ ಭೀತಿ ಎದುರಾಗಿದೆ.

ಟೋಲ್‌ ಸಂಗ್ರಹ: ನಿಯಮದ ಪ್ರಕಾರ ರಸ್ತೆ ಕಾಮಗಾರಿ ಸಂಪೂರ್ಣಗೊಂಡ ನಂತರವೇ ಟೋಲ್ ಸಂಗ್ರಹ ಆರಂಭಿಸಬೇಕು. ಆದರೆ ಮುಂಡರಗಿಯಲ್ಲಿ ಕೆಶಿಪ್‌ ಅಧಿಕಾರಿಗಳು ಎಲ್ಲ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ರಸ್ತೆ ಪೂರ್ಣಗೊಂಡಿಲ್ಲ, ಸೌಲಭ್ಯಗಳಿಲ್ಲ, ಆದರೂ ಕಳೆದ 10 ವರ್ಷಗಳಿಂದ ಜನರಿಂದ ಟೋಲ್ ಮಾತ್ರ ನಿರಂತರವಾಗಿ ಸಂಗ್ರಹ ಮಾಡಲಾಗುತ್ತಿದೆ. ಇದು ಸಾರ್ವಜನಿಕರ ಹಣದ ಲೂಟಿಯಲ್ಲವೇ? ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಮುಂಡರಗಿಯಲ್ಲಿ ನಾಯಕರಿಲ್ಲವೇ?: ಮುಂಡರಗಿ ಪಟ್ಟಣದಲ್ಲಿ ಇಷ್ಟೆಲ್ಲ ಸಮಸ್ಯೆಗಳಿದ್ದರೂ, ಇದನ್ನು ಪ್ರಶ್ನಿಸುವ ಧೈರ್ಯವಿರುವ ಒಬ್ಬನೇ ಒಬ್ಬ ಜನಪ್ರತಿನಿಧಿ ಅಥವಾ ಊರಿನ ಗಣ್ಯರು, ಹಿರಿಯರು ಇಲ್ಲವೇ? ಎಂಬುದು ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿರುವ ವಿಚಾರ. ದಿನನಿತ್ಯ ಸಾವಿರಾರು ಜನರು ಪರದಾಡುತ್ತಾ ಸಂಚರಿಸುತ್ತಿದ್ದರೂ, ಅಧಿಕಾರಿಗಳು ಮೌನ ಮುರಿಯುತ್ತಿಲ್ಲ. ಜನಪ್ರತಿನಿಧಿಗಳು ಹೋರಾಟಗಾರರು ಬಾಯಿ ಬಿಚ್ಚುತ್ತಿಲ್ಲ. ಮಾಹಿತಿಗಾಗಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧಿಕಾರಿಗಳನ್ನು ಹಲವಾರು ಬಾರಿ ಸಂಪರ್ಕಿಸಿದರೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಇಲಾಖೆಯ ಕಚೇರಿ ಗದಗ ಜಿಲ್ಲೆಯಲ್ಲಿ ಇದ್ದೂ ಇಲ್ಲದಂತೆ ಕಾರ್ಯ ನಿರ್ವಹಿಸುತ್ತಿದೆ.