ಅನುಭಾವಿಗಳ ಅನುಭಾವ ದರ್ಶನ ಮಾಡಿಸಿದ ಮುಂಡರಗಿ ತೋಂಟದಾರ್ಯ ಮಠ

| Published : Aug 05 2024, 12:30 AM IST

ಸಾರಾಂಶ

ಇಲ್ಲಿನ ಆಷಾಢ ಮಾಸದ ಪ್ರವಚನ ಕಾರ್ಯಕ್ರಮಕ್ಕೆ ಪ್ರತಿವರ್ಷ ನಾಡಿನ ಹೆಸರಾಂತ ಪ್ರವಚನಕಾರರು ಬಂದು ಪ್ರವಚನ ಮಾಡಿದ್ದಾರೆ

ಶರಣು ಸೊಲಗಿ ಮುಂಡರಗಿ

ಶ್ರಾವಣ ಶ್ರೇಷ್ಠ, ಆಷಾಢ ಕನಿಷ್ಠ ಎಂಬ ಜನರಲ್ಲಿನ ಮೂಢನಂಬಿಕೆ ಹೊಡೆದೋಡಿಸಲು ಗದುಗಿನ ಲಿಂ. ಜಗದ್ಗುರು ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮೀಜಿ ಮುಂಡರಗಿ ತೋಂಟದಾರ್ಯ ಮಠದಲ್ಲಿ ಆಷಾಢ ಮಾಸದಲ್ಲಿ ಬಸವತತ್ವದಡಿಯಲ್ಲಿ ಪ್ರವಚನ ಮಾಡಿಸುತ್ತಾ ಬಂದಿದ್ದರು. ಈಗಿನ ಮುಂಡರಗಿ ತೋಂಟದಾರ್ಯ ಮಠದ ಪೀಠಾಧಿಪತಿ ಜ. ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಸಹ ಮುಂದುವರಿಸಿದ್ದಾರೆ.

ಮತೀಯ ಕಂದಾಚಾರ ಬದಿಗೆ ಸರಿಸುತ್ತ ವೈಚಾರಿಕ ಹಾಗೂ ವೈಜ್ಞಾನಿಕ ಪಥದಲ್ಲಿ ಸಾಗಿದ್ದ ಕನ್ನಡದ ಜಗದ್ಗುರು ಎಂದೇ ಖ್ಯಾತರಾಗಿದ್ದ ಲಿಂ.ಜ.ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಯಾವುದೇ ಜಾತಿ ಭೇದವಿಲ್ಲದೇ ಮಠವನ್ನು ಎಲ್ಲ ಧರ್ಮೀಯರಿಗಾಗಿ ತೆರೆದಿಟ್ಟಿದ್ದರು. ಅಂತದ್ದೇ ಮನಸ್ಸುಳ್ಳ ನಾಡಿನ ಬಸವತತ್ವ ಪ್ರಚಾರಕ ಜ.ನಿಜಗುಣಪ್ರಭು ಸ್ವಾಮೀಜಿ ಅವರನ್ನು ತೋಂಟದ ಸಿದ್ದಲಿಂಗ ಶ್ರೀಗಳು ಮುಂಡರಗಿ ತೋಂಟದಾರ್ಯ ಮಠಕ್ಕೆ ಪೀಠಾಧಿಪತಿಯನ್ನಾಗಿ ಮಾಡಿದ್ದು, ಅವರೂ ಶ್ರೀಗಳ ಹಾದಿಯಲ್ಲಿಯೇ ನಡೆಯುತ್ತಾ ಪ್ರತಿವರ್ಷದ ಪ್ರವಚನ ಕಾರ್ಯಕ್ರಮಕ್ಕೆ ವಿವಿಧ ಜಾತಿ, ಜನಾಂಗದವರನ್ನು ಪ್ರವಚನ ಕಮಿಟಿ ಅಧ್ಯಕ್ಷರನ್ನಾಗಿ ಮಾಡುತ್ತಾ ಬಂದಿದ್ದು, ಕಳೆದ ವರ್ಷ ಜೈನ ಸಮುದಾಯದವರನ್ನು, ಪ್ರಸ್ತುತ ವರ್ಷ ಲಿಂಗಾಯತ ಸಮುದಾಯದ ಎಸ್.ಎಸ್. ಗಡ್ಡದ ಅಧ್ಯಕ್ಷರಾಗಿದ್ದು, ಛಲವಾದಿ ಸಮುದಾಯದ ಅಡಿವೆಪ್ಪ ಛಲವಾದಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇಲ್ಲಿನ ಆಷಾಢ ಮಾಸದ ಪ್ರವಚನ ಕಾರ್ಯಕ್ರಮಕ್ಕೆ ಪ್ರತಿವರ್ಷ ನಾಡಿನ ಹೆಸರಾಂತ ಪ್ರವಚನಕಾರರು ಬಂದು ಪ್ರವಚನ ಮಾಡಿದ್ದಾರೆ. ಪ್ರಸ್ತುತ ವರ್ಷ ಜ. ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಒಂದಿಷ್ಟು ಹೊಸತನ ತಂದಿದ್ದು, ಪ್ರತಿದಿನ ಒಂದೊಂದು ವಿಷಯದ ಮೇಲೆ ಅನುಭಾವ ದರ್ಶನ ಮಾಡಲು ನಾಡಿನ ಪ್ರಖ್ಯಾತ ವಿಷಯ ತಜ್ಞರನ್ನು ಕರೆ ತಂದು ಮಾತನಾಡಿಸಿದ್ದಾರೆ.

ಸಾಂಸ್ಕೃತಿಕ ನಾಯಕ ಬಸವಣ್ಣ ಕುರಿತು ಹಾರೋಗೇರಿಯ ಐ.ಆರ್. ಮಠಪತಿ, ಜಂಗಮ ಪ್ರೇಮಿ ಬಸವಣ್ಣ ಕುರಿತು ಸಿಂಧನೂರಿನ ವೀರಭದ್ರಪ್ಪ ಕುರಕುಂದಿ, ಷಟ್‌ಸ್ಥಲಗಳ ಕುರಿತು ಶಿರಗುಪ್ಪಿಯ ಬಸವರಾಜಪ್ಪ ಶರಣರು, ಪಂಚಾಚಾರಗಳ ಕುರಿತು ಬೇಲೂರಿನ ಡಾ. ಮಹಾಂತ ಸ್ವಾಮೀಜಿ, ಶರಣರು ಕಂಡ ಶಿವಯೋಗ ಬೆಳಗಾವಿಯ ಶರಣಬಸವ ಸ್ವಾಮೀಜಿ, ಶರಣರು ಕಂಡ ಸಮಾಜ ಬೈಲೂರಿನ ಶಿಕ್ಷಕ ವಿವೇಕ ಕುರಗುಂದ, ಶರಣರ ಮನೋವಿಜ್ಞಾನ ಕಲ್ಪನೆ ಧಾರವಾಡ ಎಸ್.ಡಿ.ಎಂ. ಕಾಲೇಜಿನ ಡಾ. ನಾಗೇಶ ಅಜ್ಜವಾಡಿಮಠ ತಮ್ಮ ಅನುಭಾವದ ನುಡಿಗಳನ್ನಾಡಿದರು.

ವಚನ ಸಾಹಿತ್ಯದಲ್ಲಿ ಮಾಧ್ಯಮ ಕುರಿತು ಧಾರವಾಡದ ಸಾಹಿತಿ ಸಂಗಮನಾಥ ಲೋಕಾಪುರ, ತಾತ್ವಿಕತೆ ಸಂಘಟನೆ ಕುರಿತು ಗದುಗಿನ ಅಶೋಕ ಬರಗುಂಡಿ, ಶರಣರು ಕಂಡ ಕೃಷಿ ಕುರಿತು ಧಾರವಾಡದ ಡಾ. ಕುಮಾರ ಸಿ.ಟಿ. ಹಾಗೂ ಡಾ. ಬಸವರಾಜ ಏಣಗಿ, ಮಹಿಳೆಯರು ಮತ್ತು ಮೌಢ್ಯತೆ ವಿಷಯವಾಗಿ ಬೈಲಹೊಂಗಲದ ಪ್ರೇಮಕ್ಕ ಅಂಗಡಿ, ಪರಿಸರ ಹಾಗೂ ಶರಣರು ಕುರಿತು ಪಕ್ಷಿ ತಜ್ಞ ಪ್ರಕಾಶಗೌಡ ಪಾಟೀಲ, ರಾಷ್ಟ್ರಪ್ರಜ್ಞೆ ಕುರಿತು ಧಾರವಾಡದ ವಿಜಯಾನಂದ ದೊಡವಾಡ ಮಾತನಾಡಿದರು. ಒಬ್ಬೊಬ್ಬ ವಿಷಯ ತಜ್ಞರು ಅದ್ಬುತವಾಗಿ ಮಾತನಾಡಿ ಬಸವಾದಿ ಶಿವಶರಣರ ತತ್ವಾದರ್ಶಗಳ ಕುರಿತು ತಿಳಿಸಿಕೊಟ್ಟರು.

ಕಾರ್ಯಕ್ರಮದ ಮಧ್ಯದಲ್ಲಿ ಜನಪದ ಕಲೆ ಪ್ರೋತ್ಸಾಹಿಸುವ ಉದ್ದೇಶದಿಂದ ಹರ್ಲಾಪುರದ ಕಲಾ ತಂಡದ ಎಸ್.ಎಸ್. ಹಿರೇಮಠ ಹಾಗೂ ಸಂಗಡಿಗರಿಂದ ಜನಪದ ಕಾರ್ಯಕ್ರಮ, ಮೌಢ್ಯತೆ ಕುರಿತು ಜಾಗೃತಿ ನೀಡಲು ಚಿಕ್ಕೊಡಿ ಶಿಕ್ಷಕ ಎಸ್.ಆರ್. ಡೋಂಗರೆ ಅವರಿಂದ ಪವಾಡ ಬಯಲು, ಜನರನ್ನು ನಗಿಸಲು ನವಲಗುಂದದ ಹಾಸ್ಯ ಕಲಾವಿದ ಶರಣು ಯಮನೂರು ಅವರಿಂದ ಹಾಸ್ಯೋತ್ಸವ, ಶ್ರೀಮಠದಿಂದ ಪತ್ರಿಕಾ ದಿನಾಚರಣೆ, ಉಚಿತ ರಕ್ತದಾನ ಶಿಬಿರ ಸೇರಿದಂತೆ ಹಲವಾರು ಜನಪರ ಹಾಗೂ ಜೀವಪರ ಕಾರ್ಯಕ್ರಮ ಜರುಗಿದವು.

ಮುಂಡರಗಿ ತೋಂಟದಾರ್ಯ ಮಠದಲ್ಲಿ ಜರುಗಿದ ಆಷಾಢ ಮಾಸದ ಪ್ರವಚನ ಕಾರ್ಯಕ್ರಮ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ಜ. ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿಯವರಿಗೆ ಹಾಗೂ ಸಹಾಯ ಸಹಕಾರ ಮಾಡಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲ ಶರಣ ಬಂಧುಗಳಿಗೆ ಹಾಗೂ ಮುಂಡರಗಿ ಪಟ್ಟಣವೂ ಸೇರಿದಂತೆ ತಾಲೂಕಿನ ಸಮಸ್ತ ಜನತೆಗೆ ತುಂಬು ಹೃದಯದ ಕೃತಜ್ಞತೆಗಳು ಎಂದು ಎಸ್.ಎಸ್. ಗಡ್ಡದ ಅಧ್ಯಕ್ಷರು, ಅಡಿವೆಪ್ಪ ಛಲವಾದಿ ಕಾರ್ಯದರ್ಶಿ ತೋಂಟದಾರ್ಯ ಪ್ರವಚನ ಸಮಿತಿ ತಿಳಿಸಿದ್ದಾರೆ.

ತೋಂಟದಾರ್ಯ ಮಠ 12ನೇ ಶತಮಾನದ ಅನುಭವ ಮಂಟಪದ ತತ್ವ ನಿಷ್ಠದ ಮಠ. ಈ ತತ್ವನಿಷ್ಠದ ಮಠದ ಪರಂಪರೆಗೆ ಕೈಗನ್ನಡಿಯಂತೆ ಆಷಾಢ ಮಾಸದಲ್ಲಿ ಈ ವರ್ಷ ನಡೆದಂತಹ ಅನುಭಾವಿಗಳ ಅನುಭಾವವೇ ಒಂದು ಕೈಗನ್ನಡಿ. ಇಂತಹ ಕಾರ್ಯಕ್ರಮ ಸಮಾಜದಲ್ಲಿ ಜನಸಾಮಾನ್ಯರ ಹೃದಯಕ್ಕೆ ಮುಟ್ಟಿದರೆ, ಸಮಾಜ ಧರ್ಮ ಮತ್ತು ಧಾರ್ಮಿಕತೆಯಿಂದ ಅಧ್ಯಾತ್ಮದ ಕಡೆಗೆ ಬಂದು ಜೀವನ ಸಮೃದ್ಧಿಗೊಳಿಸಿಕೊಳ್ಳುವಲ್ಲಿ ಕೆಲಸ ಮಾಡುತ್ತದೆ. ಎಂದು ಜ. ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮೀಜಿ ತಿಳಿಸಿದ್ದಾರೆ.