ಹೆಸರು ಕಾಳು ಒಕ್ಕಲು ಕಣವಾದ ರಾಷ್ಟ್ರೀಯ ಹೆದ್ದಾರಿ!

| Published : Aug 18 2024, 01:52 AM IST

ಹೆಸರು ಕಾಳು ಒಕ್ಕಲು ಕಣವಾದ ರಾಷ್ಟ್ರೀಯ ಹೆದ್ದಾರಿ!
Share this Article
  • FB
  • TW
  • Linkdin
  • Email

ಸಾರಾಂಶ

ಮೊದಲೆಲ್ಲಾ ಒಕ್ಕಲು ಕಣಗಳು ಇರುತ್ತಿದ್ದವು. ಈ ಬಾರಿ ಮಳೆಯಿಂದಾಗಿ ಹೊಲದಲ್ಲೂ ಸಹ ನೆಲ ಆರಿಲ್ಲ. ಹೊಲದಲ್ಲಿ ಕಟಾವ್‌ ಮಿಷನ್‌ಗಳಲ್ಲಿ ಹಾಕಿದ ಮೇಲೆ ಹೊರತಂದ ಹೆಸರುಕಾಳುಗಳನ್ನು ಜಾಗೆಯ ಅಭಾವದಿಂದಾಗಿ ಹೆದ್ದಾರಿಯಲ್ಲೆ ಸ್ವಚ್ಛಗೊಳಿಸುತ್ತ, ಒಣಗಿಸುತ್ತಿದ್ದಾರೆ.

ಶಿವಾನಂದ ಅಂಗಡಿ

ಹುಬ್ಬಳ್ಳಿ:

ಮುಂಗಾರಿನ ಮೊದಲ ಸುಗ್ಗಿ ಹೆಸರು ಕಾಳು ಹಂಗಾಮು ಎಲ್ಲೆಡೆ ಆರಂಭವಾಗಿದ್ದು, ಹುಬ್ಬಳ್ಳಿ-ಗದಗ ಚತುಷ್ಟಥ ರಾಷ್ಟ್ರೀಯ ಹೆದ್ದಾರಿ-67 ಈಗ ಒಕ್ಕಲು ಕಣವಾಗಿ ಮಾರ್ಪಟ್ಟಿದೆ.

ಹೌದು, ಶಿರಗುಪ್ಪಿ, ನಲವಡಿ, ಭದ್ರಾಪುರ, ಅಣ್ಣಿಗೇರಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿಗುಂಟ ಹೊರಟರೆ ಸಾಕು, ಅಲ್ಲಲ್ಲಿ ಗ್ರಾಮಸ್ಥರು ಹೆಸರು ಕಾಳು ರಾಶಿ ಹಾಕಿರುವುದು ಕಂಡು ಬರುತ್ತದೆ.

ಹೆದ್ದಾರಿಯ ಸರ್ವೀಸ್‌ ರಸ್ತೆ, ಹೆದ್ದಾರಿ ಪಕ್ಕದ ಜಾಗ ಸೇರಿದಂತೆ ವಿಶಾಲವಾದ ಜಾಗವಿರುವ ಕಡೆ ಒಕ್ಕಲಿ ಮಾಡುತ್ತಿದ್ದಾರೆ. ಮೊದಲೆಲ್ಲಾ ಒಕ್ಕಲು ಕಣಗಳು ಇರುತ್ತಿದ್ದವು. ಈ ಬಾರಿ ಮಳೆಯಿಂದಾಗಿ ಹೊಲದಲ್ಲೂ ಸಹ ನೆಲ ಆರಿಲ್ಲ. ಹೊಲದಲ್ಲಿ ಕಟಾವ್‌ ಮಿಷನ್‌ಗಳಲ್ಲಿ ಹಾಕಿದ ಮೇಲೆ ಹೊರತಂದ ಹೆಸರುಕಾಳುಗಳನ್ನು ಜಾಗೆಯ ಅಭಾವದಿಂದಾಗಿ ಹೆದ್ದಾರಿಯಲ್ಲೆ ಸ್ವಚ್ಛಗೊಳಿಸುತ್ತ, ಒಣಗಿಸುತ್ತಿದ್ದೇವೆ. ರಸ್ತೆ ಇದ್ದರೆ ಮಳೆ ಬಂದರೂ ಹೆಸರು ಸಂರಕ್ಷಣೆಗೆ ಅನುಕೂಲ ಎನ್ನುತ್ತಾರೆ ರೈತರು.

ಕಟಾವ್‌ ಮಷಿನ್‌ಗಳ ಅಬ್ಬರಹೆಸರು ಕಾಳು ಬೆಳೆದ ಹೊಲಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಟಾವ್‌ ಮಷಿನ್‌ಗಳು ಬರುತ್ತಿದ್ದು, ಅಣ್ಣಿಗೇರಿಯೊಂದರಲ್ಲೇ ಈಗ 30-35 ಮಿಷನ್‌ಗಳು ಕಾರ್ಯನಿರ್ವಹಿಸುತ್ತಿವೆ. ಎಕರೆಗೆ ₹ 1600ರಿಂದ ₹ 2000ರ ವರೆಗೂ ಬಾಡಿಗೆ ಪಡೆಯುತ್ತಿದ್ದಾರೆ. ದಿನಕ್ಕೆ ಈ ಮಷಿನ್‌ಗಳು 15 ಎಕರೆ ವರೆಗೂ ಹೆಸರು ಬೆಳೆ ಕಟಾವ್‌ ಮಾಡುವುದು ವಿಶೇಷ.

ಧಾರವಾಡ ಜಿಲ್ಲೆಯಲ್ಲಿ ಈ ಬಾರಿ 67150 ಹೆಕ್ಟೇರ್‌ ಗುರಿ ಹೊಂದಲಾಗಿದ್ದು, 94,956 ಹೆಕ್ಟೇರ್‌ ಕ್ಷೇತ್ರದಲ್ಲಿ ಹೆಸರು ಬಿತ್ತನೆಯಾಗಿದೆ. ಈ ಪೈಕಿ ನವಲಗುಂದ ತಾಲೂಕಿನಲ್ಲಿಯೇ ಅತಿ ಹೆಚ್ಚು 38 ಸಾವಿರ ಹೆಕ್ಟೇರ್‌ ಹೆಸರು ಬಿತ್ತನೆಯಾಗಿದೆ. ಅಣ್ಣಿಗೇರಿ ತಾಲೂಕಿನಲ್ಲಿ 19 ಸಾವಿರ, ಕುಂದಗೋಳ ತಾಲೂಕಲ್ಲಿ 13,856 ಹೆಕ್ಟೇರ್‌, ಹುಬ್ಬಳ್ಳಿ ತಾಲೂಕಿನಲ್ಲಿ 12600, ಧಾರವಾಡ ತಾಲೂಕಿನಲ್ಲಿ 10,780 ಹೆಕ್ಟೇರ್‌ ಹೆಸರು ಬಿತ್ತನೆಯಾಗಿದೆ.

ಕಳೆದ ಬಾರಿ ಮಳೆ ಅಭಾವದಿಂದಾಗಿ ಧಾರವಾಡ ಜಿಲ್ಲೆಯಲ್ಲಿ 31126 ಹೆಕ್ಟೇರ್‌ನಲ್ಲಿ ಹೆಸರು ಕಾಳು ಬಿತ್ತನೆಯಾಗಿತ್ತು. ಇಳುವರಿ ಕುಂಠಿತವಾಗಿದ್ದರೂ ₹ 10ರಿಂದ ₹ 11 ಸಾವಿರ ವರೆಗೂ ಕ್ವಿಂಟಲ್‌ ಮಾರಾಟವಾಗಿತ್ತು. ಈ ಬಾರಿ ಬಿತ್ತನೆ ಕ್ಷೇತ್ರ ಮೂರು ಪಟ್ಟು ಹೆಚ್ಚಳವಾಗಿದ್ದು, ಹೆದ್ದಾರಿ, ರಸ್ತೆ ಸೇರಿದಂತೆ ನೀವು ಯಾವುದೇ ಹಳ್ಳಿಗೆ ತೆರಳಿದರೂ ರೈತರು ಹೆಸರು ಸುಗ್ಗಿಯಲ್ಲಿ ತೊಡಗಿರುವುದು ಕಾಣುತ್ತದೆ.

ಎಪಿಎಂಸಿಗೆ ಹೆಸರು ಆವಕ

ಹುಬ್ಬಳ್ಳಿ ಎಪಿಎಂಸಿಗೆ ಶನಿವಾರ 2020 ಕ್ವಿಂಟಲ್‌ ಹೆಸರು ಆವಕವಾಗಿದೆ. ಕನಿಷ್ಠ ₹ 1219ರಿಂದ ₹ 8090ರ ವರೆಗೆ ಮಾರಾಟವಾಗಿದೆ. ಗದಗ ಮಾರುಕಟ್ಟೆಗೆ 19724 ಕ್ವಿಂಟಲ್‌ ಹೆಸರು ಆವಕವಾಗಿದೆ. ಕನಿಷ್ಠ ₹ 1106ರಿಂದ ಗರಿಷ್ಠ ₹ 8569ರ ವರೆಗೂ ಮಾರಾಟವಾಗಿದೆ. ಆ. 3ರಿಂದ 17ರ ವರೆಗೂ ಹುಬ್ಬಳ್ಳಿ ಎಪಿಎಂಸಿಗೆ 6033 ಕ್ವಿಂಟಲ್‌ ಹೆಸರು ಆವಕವಾಗಿದೆ. ಗದಗ ಮಾರುಕಟ್ಟೆಗೆ ಆ. 1ರಿಂದ 16ರ ವರೆಗೆ 1,04,009 ಕ್ವಿಂಟಲ್ ಹೆಸರು ಆವಕವಾಗಿದೆ.

ಅಣ್ಣಿಗೇರಿ ಸೇರಿದಂತೆ ನವಲಗುಂದ ತಾಲೂಕಿನಲ್ಲಿ ಖರೀದಿದಾರರು ಸ್ಥಳದಲ್ಲಿಯೇ ಹೆಸರು ಖರೀದಿ ಮಾಡುತ್ತಿದ್ದು, ಕ್ವಿಂಟಲ್‌ಗೆ ₹ 6000ದಿಂದ ₹ 6500ರ ವರೆಗೆ ಹೆಸರು ಮಾರಾಟವಾಗುತ್ತಿದೆ.ಈ ಬಾರಿ ಸಕಾಲದಲ್ಲಿ ಹೆಸರು ಕಾಳು ಬಿತ್ತನೆ ಮಾಡಿದ್ದೇವೆ. ಆದರೆ, ನಿರಂತರ ಮಳೆಯಿಂದ ಬೆಳೆಗೆ ರೋಗ ಬಾಧಿಸಿದೆ. ಈ ವೇಳೆ ತೀವ್ರ ಆತಂಕ ಎದುರಾಗಿತ್ತು, ಆದರೂ ಎಕರೆಗೆ ಮೂರರಿಂದ ಐದು ಚೀಲ ಹೆಸರು ಇಳುವರಿ ಬಂದಿದ್ದು, ಸಮಾಧಾನ ತಂದಿದೆ ಎಂದು ಅಣ್ಣಿಗೇರಿ ರೈತ ಮೈಲಾರಪ್ಪ ವಗ್ಗರ ಹೇಳಿದರು.ಕಟಾವ್‌ ಮಶಿನ್‌ಗಳಿಂದ ಈಗೀಗ ಸುಗ್ಗಿಯು ಬೇಗ ಮುಗಿಯುತ್ತಿದೆ. ಅಣ್ಣಿಗೇರಿಗೆ ನಾವು ಬಂದು15 ದಿನ ಆಯಿತು. ಆಗಲೇ ಸುಗ್ಗಿ ಶೇ. 75ರಷ್ಟು ಮುಕ್ತಾಯವಾಗಿದೆ. ಒಂದು ಹಂತದಲ್ಲಿ ಇಲ್ಲಿ 70ಕ್ಕೂ ಅಧಿಕ ಮಿಷನ್‌ಗಳು ಇದ್ದವು. ಸ್ಪರ್ಧೆಯಿಂದಾಗಿ ಬಾಡಿಗೆ ದರವೂ ಇಳಿಮುಖವಾಗಿದೆ ಎಂದು ಕಟಾವ್‌ ಮಶಿನ್‌ ತಂದಿರುವ ಹೊಸಪೇಟೆ ವ್ಯಕ್ತಿ ಜುಬೇರ ಹೇಳಿದರು.