ಸಾರಾಂಶ
ಕಾಂಗ್ರೆಸ್ ಬೆಂಬಲಿತ ರೈತ ಸಂಘದ ಅಭ್ಯರ್ಥಿಗಳಿಗೆ ತೀವ್ರ ಮುಖಭಂಗ । ಸಿಎಸ್ ಪುಟ್ಟರಾಜು ಬೆಂಬಲಿಗರ ವಿಜಯ ಪತಾಕೆ
ಕನ್ನಡಪ್ರಭ ವಾರ್ತೆ ಪಾಂಡವಪುರಪುರಸಭೆಯ ತೆರವಾದ ಎರಡು ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಬೆಂಬಲಿತ ರೈತ ಸಂಘದ ಅಭ್ಯರ್ಥಿಗಳಿಗೆ ತೀವ್ರ ಮುಖಭಂಗ ಉಂಟು ಮಾಡಿದ್ದಾರೆ.
ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ ಚುನಾವಣೆಯ ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಜೆಡಿಎಸ್ ಪಕ್ಷದ ಬೆಂಬಲಿಗರು ಸಂಭ್ರಮಿಸಿದರು. 2ನೇವಾರ್ಡ್ ಹಾಗೂ 9ನೇ ವಾರ್ಡ್ ಸದಸ್ಯರು ಅಕಾಲಿಕ ಮರಣ ಹೊಂದಿದ ಹಿನ್ನೆಲೆ ಎರಡು ಸ್ಥಾನಗಳಿಗೆ ಉಪ ಚುನಾವಣೆ ನಡೆಯಿತು.2ನೇ ವಾರ್ಡ್‌ನಿಂದ ಜೆಡಿಎಸ್ ಅಭ್ಯರ್ಥಿ ಯಶ್ವಂತ್‌ಕುಮಾರ್-380, ರೈತಸಂಘದ ಅಭ್ಯರ್ಥಿ ರಾಜೇಂದ್ರ-216, ಬಿಜೆಪಿ ಅಭ್ಯರ್ಥಿ-21 ಹಾಗೂ ಕೆಆರ್ ಎಸ್ ಪಕ್ಷದ ಅಭ್ಯರ್ಥಿಗೆ-1 ಮತ ಪಡೆದರು. ಜೆಡಿಎಸ್ ಅಭ್ಯರ್ಥಿ ಯಶ್ವಂತ್ ಕುಮಾರ್ 176 ಮತಗಳ ಅಂತರದಿಂದ ಗೆಲುವು ಸಾಧಿಸಿದರು.
9ನೇ ವಾರ್ಡ್‌ನಲ್ಲಿ ಜೆಡಿಎಸ್ ಅಭ್ಯರ್ಥಿ ಜ್ಯೋತಿಲಕ್ಷ್ಮಿ-171, ರೈತಸಂಘದ ಅಭ್ಯರ್ಥಿ ಎಸ್.ರಾಜು-128, ಬಿಜೆಪಿ ಅಭ್ಯರ್ಥಿ ಸೋಮಶೇಖರ್-81 ಮತಗಳನ್ನು ಪಡೆದರು. ಜೆಡಿಎಸ್ ಅಭ್ಯರ್ಥಿ ಜ್ಯೋತಿಲಕ್ಷ್ಮಿ-43 ಮತಗಳ ಅಂತರದಿಂದ ಜಯಭೇರಿ ಬಾರಿಸಿದರು. ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದಂತೆಯೇ ಜೆಡಿಎಸ್ ಕಾರ್‍ಯಕರ್ತರು ಸಂಭ್ರಮಿಸಿದರು.ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಸಿಎಸ್ಪಿ:
ಚುನಾವಣೆಯಲ್ಲಿ ಆಯ್ಕೆಯಾದಂತಹ ಜೆಡಿಎಸ್ ಅಭ್ಯರ್ಥಿಗಳಾದ ಜ್ಯೋತಿಲಕ್ಷ್ಮಿ ಹಾಗೂ ಯಶ್ವಂತ್ ಕುಮಾರ್ ಅವರನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಭಿನಂದಿಸಿ ಮಾತನಾಡಿ, ಪುರಸಭೆ ಎರಡು ವಾರ್ಡ್ ಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ. ಎರಡೂ ವಾರ್ಡ್ ಗಳು ಮತ್ತೆ ಜೆಡಿಎಸ್ ತೆಕ್ಕೆಗೆ ಸೇರ್ಪಡೆಗೊಂಡಿದ್ದು, ಒಟ್ಟು 18 ಜನ ಪುರಸಭೆ ಸದಸ್ಯರಿದ್ದಾರೆ. ಎರಡು ಸೇರಿ ಪಟ್ಟಣವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.ಸಿ.ಎಸ್.ಪುಟ್ಟರಾಜು ಕೈಹಿಡಿದ ಮತದಾರರು:
ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಸಿ.ಎಸ್.ಪುಟ್ಟರಾಜು ಅವರನ್ನು ಪುರಸಭೆ ಚುನಾವಣೆಯಲ್ಲಿ ಮತದಾರರು ಕೈಹಿಡಿದಿದ್ದಾರೆ. ವಿಧಾನಸಭೆ ಚುನಾವಣೆ ನಡೆದು ಕೇವಲ 7 ತಿಂಗಳಲ್ಲಿ ನಡೆದ ಮೊದಲ ಉಪಚುನಾವಣೆಯಲ್ಲಿ ಎರಡು ವಾರ್ಡ್‌ಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಿ ರೈತಸಂಘದ ಅಭ್ಯರ್ಥಿಗಳು ಹೀನಾಯ ಸೋಲುಂಡಿರುವುದು ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯಗೆ ತೀವ್ರ ಮುಖಂಭಗವಾಗಿದೆ.ಕ್ಷೇತ್ರದ ಶಾಸಕರಿದ್ದರೂ ಸಹ ಒಂದು ವಾರ್ಡ್‌ನ್ನು ಸಹ ಗೆಲ್ಲಿಸಿಕೊಳ್ಳಲು ಸಾಧ್ಯವಾಗಿಲ್ಲ. ಜತೆಗೆ ಚುನಾವಣೆಯ ನಡೆಯುತ್ತಿದ್ದರೂ ಸಹ ಕ್ಷೇತ್ರದ ಶಾಸಕರು 4ನೇ ಬಾರಿಗೆ ಅಮೆರಿಕಾ ಪ್ರವಾಸದಲ್ಲಿದ್ದರು. ಕಳೆದ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಮತಗಳು ಸುಧಾರಣೆ ಕಂಡಿವೆ.
ಈ ವೇಳೆ ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಶ್ರೀನಿವಾಸ್, ಪುರಸಭೆ ಸದಸ್ಯರಾದ ಗಿರೀಶ್, ಸೋಮಶೇಖರ್, ಶಿವಕುಮಾರ್, ಚಂದ್ರು ಅರ್ಚನ, ಶ್ವೇತ, ಮುಖಂಡರಾದ ವೈರಮುಡಿಗೌಡ, ಬಿ.ಎಸ್.ಜಯರಾಮು, ನಟರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.-------------
ಪಾಂಡವಪುರ ಪುರಸಭೆ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಜೆಡಿಎಸ್ ಅಭ್ಯರ್ಥಿಗಳಾದ ಜ್ಯೋತಿಲಕ್ಷ್ಮಿ, ಯಶ್ವಂತ್‌ಕುಮಾರ್ ಅವರನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಭಿನಂದಿಸಿದರು.