ಸಾರಾಂಶ
ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು
ಸ್ಥಳೀಯ ನಗರಸಭೆ ವಾರ್ಡ್ 22ಕ್ಕೆ ಡಿ.27ರಂದು ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ಡಿ. 25ರಂದು ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಈ ಕುರಿತು ರಾಜ್ಯ ಚುನಾವಣಾ ಆಯೋಗ ಮಾರ್ಗಸೂಚಿ ಪ್ರಕಟಿಸಿದೆ.ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಮತ್ತು ಉಪ ಚುನಾವಣೆಯನ್ನು ಶಾಂತಿಯುತವಾಗಿ ಮುಕ್ತ, ಮತ್ತು ನ್ಯಾಯ ಸಮ್ಮತವಾಗಿ ನಡೆಸುವ ಉದ್ದೇಶದಿಂದ ಮತದಾನ ಪ್ರಾರಂಭವಾಗುವ 48 ಗಂಟೆಗಳ ಅವಧಿಯಲ್ಲಿ ಅಂದರೆ ಡಿ. 25ರಂದು ಬೆಳಗ್ಗೆ 7 ಗಂಟೆ ನಂತರ ಹಾಗೂ ಚುನಾವಣೆ ನಡೆಯಲಿರುವ ಡಿ.27ರಂದು ಯಾವುದೇ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ಹಾಗೂ ಅಭ್ಯರ್ಥಿಗಳ ಪರವಾಗಿ ಅವರ ಬೆಂಬಲಿಗರು ಯಾವುದೇ ವಿಧದಲ್ಲಿ ಬಹಿರಂಗ ಪ್ರಚಾರ ನಡೆಸತಕ್ಕದ್ದಲ್ಲ. ಡಿ. 25ರ ಬೆಳಗ್ಗೆ 7ಗಂಟೆಯೊಳಗೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಬೆಂಬಲಿಗರು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಹೊರಗಿನಿಂದ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ ತಾರಾ ಪ್ರಚಾರಕರು ಮತ್ತು ಇತರ ವ್ಯಕ್ತಿಗಳನ್ನು ಕರೆಯಿಸಿಕೊಂಡಿದ್ದಲ್ಲಿ ಅಂತಹ ವ್ಯಕ್ತಿಗಳು ಚುನಾವಣೆ ನಡೆಯುತ್ತಿರುವ ನಗರ ಸ್ಥಳೀಯ ಸಂಸ್ಥೆಗಳ ವಾರ್ಡುಗಳ ವ್ಯಾಪ್ತಿಯನ್ನು ಕಡ್ಡಾಯವಾಗಿ ಬಿಡಬೇಕು. ಡಿ. 25ರಂದು ಬೆಳಗ್ಗೆ 7ಗಂಟೆಯ ನಂತರ ಮತದಾರರಲ್ಲದ ಬೆಂಬಲಿಗರು/ ರಾಜಕೀಯ ಪಕ್ಷದ ಪದಾಧಿಕಾರಿಗಳು, ಮುಖಂಡರುಗಳು, ಪಕ್ಷದ ಕಾರ್ಯಕರ್ತರು, ಮೆರವಣಿಗೆ ಕಾರ್ಯ ನಿರ್ವಹಿಸುವವರು, ಪ್ರಚಾರ ಕಾರ್ಯ ನಿರ್ವಹಿಸುವವರು ಇತ್ಯಾದಿ ಆ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ಗಳ ವ್ಯಾಪ್ತಿಯಲ್ಲಿ ತಮ್ಮ ವಾಸ್ತವ ಮುಂದುವರಿಸಿದಲ್ಲಿ ಚುನಾವಣೆಯ ಮುಕ್ತ ಮತ್ತು ನಿಷ್ಪಕ್ಷ ವಾತಾವರಣಕ್ಕೆ ಧಕ್ಕೆಯುಂಟಾಗುವ ಸಂಭವವಿರುವುದರಿಂದ ಆಯಾ ನಗರ ಸ್ಥಳೀಯ ಸಂಸ್ಥೆಗಳ ವಾರ್ಡಿನ ಮತದಾರರಲ್ಲದ ವ್ಯಕ್ತಿಗಳು ವಾರ್ಡಿನ ವ್ಯಾಪ್ತಿಯಿಂದ ಹೊರಗೆ ಹೋಗಿರುವ ಬಗ್ಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆಯು ಖಚಿತಪಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಹೊರಗೆ ಕಳುಹಿಸುವ ಬಗ್ಗೆ ಅಗತ್ಯ ಕ್ರಮ ಜರುಗಿಸುವಂತೆ ಆದೇಶಿಸಿದೆ.
ನಗರ ಸ್ಥಳೀಯ ಸಂಸ್ಥೆಗಳ ವಾರ್ಡಿನ ವ್ಯಾಪ್ತಿಯಲ್ಲಿರುವ ಕಲ್ಯಾಣ ಮಂಟಪ, ಸಮುದಾಯ ಭವನ, ಇತರೆ ಸ್ಥಳಗಳಲ್ಲಿ ಆ ನಗರ ಸ್ಥಳೀಯ ಸಂಸ್ಥೆ ವಾರ್ಡಿನ ವ್ಯಾಪ್ತಿಗೆ ಒಳಪಡದ ಮೇಲೆ ತಿಳಿಸಿದಂತಹ ವ್ಯಕ್ತಿಗಳು ಇದ್ದಾರೆಯೇ ಎಂಬ ಬಗ್ಗೆ ತಪಾಸಣೆ ಮಾಡಬೇಕು. ನಗರ ಸ್ಥಳೀಯ ಸಂಸ್ಥೆಗಳ ವಾರ್ಡಿನ ವ್ಯಾಪ್ತಿಯಲ್ಲಿರುವ ಪ್ರವಾಸಿಗರ ವಸತಿ ಗೃಹಗಳಲ್ಲಿ ಮತ್ತು ಪ್ರವಾಸ ಮಂದಿರದಲ್ಲಿ ಅಂತಹ ವ್ಯಕ್ತಿಗಳು ಇದ್ದಾರೆಯೇ ಎಂಬ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ವಹಿಸಬೇಕು. ನಗರ ಸ್ಥಳೀಯ ಸಂಸ್ಥೆಗಳ ವಾರ್ಡಿನ ವ್ಯಾಪ್ತಿಯಲ್ಲಿ ಅನುಮಾನಾಸ್ಪದ ವಾಹನಗಳು ಹಾಗೂ ಜನರ ಸಂಚಾರದ ಮೇಲೆ ನಿಗಾವಹಿಸಬೇಕು. ಯಾವುದೇ ರೀತಿ, ನೀತಿ ಸಂಹಿತೆಯ ಉಲ್ಲಂಘನೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗ ತಿಳಿಸಿದೆ.