ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆನಗರಸಭೆಯ ಎಂಟು ವಾರ್ಡ್ಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಓರ್ವ ಪಕ್ಷೇತರ ಅಭ್ಯರ್ಥಿ ಸೇರಿದಂತೆ ಏಳು ಮಂದಿ ಕಾಂಗ್ರೆಸ್ ನಿಂದ ಆಯ್ಕೆಯಾಗುವುದರೊಂದಿಗೆ ನಗರಸಭೆಯನ್ನು ಪ್ರವೇಶಿಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ತೆನೆ(ಜೆಡಿಎಸ್) ಇಳಿಸಿ ಕೈ( ಕಾಂಗ್ರೆಸ್) ಹಿಡಿದಿದ್ದ ಶಾಸಕ ಕೆ.ಎಂ. ಶಿವಲಿಂಗೇಗೌಡ ಗೆಲುವು ಸಾಧಿಸುವುದರೊಂದಿಗೆ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕತ್ವವನ್ನು ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ನಡೆದ ನಗರಸಭೆಯ ಉಪಚುನಾವಣೆಯಲ್ಲಿ ನಗರದ ಜನತೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಶೀರ್ವದಿಸುವ ಮೂಲಕ ಶಿವಲಿಂಗೇಗೌಡರ ಕೈ ಬಲಪಡಿಸಿದ್ದಾರೆ.ಸತತ ಐದು ಬಾರಿ ಗೆಲುವು ಸಾಧಿಸಿದ್ದ ಬಿ,ಎನ್ ವಿದ್ಯಾಧರ್, ಮೊದಲ ಬಾರಿಗೆ ಪರಾಜಿತಗೊಂಡರೆ ವಾರ್ಡ್ ನಂಬರ್ 19 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಇಮ್ರಾನ್ ಪಾಷಾ ಸೇರಿದಂತೆ ನೂತನವಾಗಿ ಗೆಲುವು ಸಾಧಿಸಿರುವ ಎಲ್ಲಾ ಎಂಟು ಮಂದಿಯೂ ಸಹ ನಗರಸಭೆಗೆ ಹೊಸ ಮುಖಗಳಾಗಿರುವುದು ವಿಶೇಷ.
ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಶಾಸಕ ಕೆಎಂ ಶಿವಲಿಂಗೇಗೌಡ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಿದ ನೂತನ ಸದಸ್ಯರು, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಪರಸ್ಪರ ಸಿಹಿ ತಿನಿಸುವ ಮೂಲಕ ತಮ್ಮ ಸಂತಸವನ್ನು ಹಂಚಿಕೊಂಡರು.ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಶಾಸಕ ಕೆ,ಎಂ ಶಿವಲಿಂಗೇಗೌಡ ಮಾತನಾಡಿ, ನಮ್ಮ ಕ್ಷೇತ್ರದ ಜನತೆ ಪ್ರಜ್ಞಾವಂತರಿದ್ದು ಅಭಿವೃದ್ಧಿಪರ ನಿಲುವು ಹೊಂದಿರುವುದರಿಂದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನ್ನ ಗೆಲುವು ಸೇರಿದಂತೆ ಈಗ ನಡೆದಿರುವ ನಗರಸಭೆಯ ಉಪಚುನಾವಣೆಯ ಫಲಿತಾಂಶ ಸಾಕ್ಷಿಯಾಗಿದೆ. ನಮ್ಮ ಅಭ್ಯರ್ಥಿಗಳ ಗೆಲುವಿಗೆ ಆಶೀರ್ವದಿಸಿರುವ ನಗರ ಜನತೆಗೆ ನಗರದ ಅಭಿವೃದ್ಧಿಯ ಮೂಲಕವೇ ಕೃತಜ್ಞತೆ ಸಲ್ಲಿಸುವುದಾಗಿ ಭರವಸೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೋ ಬಾಬು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ನ ಪರ್ವಕಾಲ ಆರಂಭವಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಸೇರಿದಂತೆ ವಿಧಾನಸಭೆಗೆ ನಡೆದ ಉಪಚುನಾವಣೆಯಲ್ಲೂ ಸಹ ಕಾಂಗ್ರೆಸ್ ಜಯಭೇರಿ ಬಾರಿಸುತ್ತಿದ್ದು, ರಾಜ್ಯದಲ್ಲಿ ಜನಪರ ಆಡಳಿತಕ್ಕೆ ಈ ವಿಜಯಗಳು ಜನ ನೀಡುತ್ತಿರುವ ಸರ್ಟಿಫಿಕೇಟ್ ಆಗಿವೆ ಎಂದು ಹೇಳಿದರು.ವಿಜಯೋತ್ಸವದ ಮೆರವಣಿಗೆಯಲ್ಲಿ ನಗರ ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅರುಣ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಗಂಜಿಗೆರೆ ಚಂದ್ರಶೇಖರ್,ನಗರ ಸಭೆ ಸದಸ್ಯ ವೆಂಕಟಮನಿ,ಕಾಂಗ್ರೆಸ್ ಮುಖಂಡರಾದ ಸುಬ್ರಹ್ಮಣ್ಯ ಬಾಬು,ವೆಂಕಟೇಶ್,ವೈ ಕೆ ದೇವರಾಜ್ ಮತ್ತು ಇತರರು ಪಾಲ್ಗೊಂಡಿದ್ದರು.
‘ನಗರ ಸಭೆಗೆ ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಬೆರಳೆಣಿಕೆ ಮತಗಳಿಂದ ಸೋಲನ್ನು ಕಂಡಿದ್ದ ನನಗೆ ಶಾಸಕ ಶಿವಲಿಂಗೇಗೌಡರು ಹಾಗೂ ಕಾಂಗ್ರೆಸ್ ಮುಖಂಡರು ಗುರುತಿಸಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿ ಕೊಟ್ಟರಲ್ಲದೆ ನನ್ನ ಗೆಲುವಿಗೆ ಮಾರ್ಗದರ್ಶನ ಹಾಗೂ ಸಹಕಾರ ನೀಡಿದ್ದಕ್ಕೆ ನಾನು ದಾಖಲೆ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೇನೆ. ನನ್ನ ಗೆಲುವಿಗೆ ಶ್ರಮಿಸಿದ ಎಲ್ಲರಿಗೂ ಹಾಗೂ ವಿಶೇಷವಾಗಿ ನನ್ನ ವಾರ್ಡ್ ನ ಮತದಾರರಿಗೂ ನಾನು ಆಭಾರಿಯಾಗಿದ್ದೇನೆ.’ಪಲ್ಲವಿ, 18ನೇ ವಾರ್ಡಿನಿಂದ ನೂತನವಾಗಿ ಆಯ್ಕೆಯಾಗಿರುವ ಸದಸ್ಯೆ