ನಗರಸಭೆ ಆಯುಕ್ತ, ಎಂಜಿನಿಯರ್‌ ಲೋಕಾಯುಕ್ತ ಬಲೆಗೆ

| Published : Jan 10 2025, 12:48 AM IST

ಸಾರಾಂಶ

ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ನೀಡಿದ್ದ ಸ್ವಚ್ಛತಾ ಟೆಂಡರ್‌ ಬಿಲ್ ಪಾಸ್‌ ಮಾಡಲು ಗುತ್ತಿಗೆದಾರನಿಂದ ಲಂಚ ಪಡೆಯುವಾಗ ನಗರಸಭೆ ಆಯುಕ್ತ ನರಸಿಂಹಮೂರ್ತಿ ಮತ್ತು ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ (ಪರಿಸರ) ಕೆ.ಆರ್‌. ವೆಂಕಟೇಶ್ ಗುರುವಾರ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಆದರೆ ಇದೇ ವೇಳೆ ನಗರಸಭೆ ಆಯುಕ್ತರನ್ನ ಬಂಧಿಸಿ, ಎ.ಆರ್‌. ವೆಂಕಟೇಶ್ ಅವರನ್ನು ಬಿಟ್ಟು ಬಿಡಿ ಎಂದು ನಗರಸಭೆ ಸದಸ್ಯರು ಲೋಕಾಯುಕ್ತರಲ್ಲಿ ಮನವಿ ಮಾಡಿದ ವಿಲಕ್ಷಣ ಘಟನೆಯೂ ನಡೆದಿದೆ.

ಕನ್ನಡಪ್ರಭ ವಾರ್ತೆ ಹಾಸನ

ಹಾಸನಾಂಬ ಜಾತ್ರಾ ಮಹೋತ್ಸವದ ಸ್ವಚ್ಛತಾ ಟೆಂಡರ್ ಪಡೆದಿದ್ದ ಗುತ್ತಿಗೆದಾರನಿಗೆ ಒಟ್ಟು ೧೦ ಲಕ್ಷದ ೫೦ ಸಾವಿರ ಬಿಲ್ ಹಣ ನೀಡಲು ಒಂದೂವರೆ ಲಕ್ಷಕ್ಕೆ ನಗರಸಭೆ ಆಯುಕ್ತ ನರಸಿಂಹಮೂರ್ತಿ ಹಾಗೂ ಕೆ.ಆರ್‌. ವೆಂಕಟೇಶ್ ಬೇಡಿಕೆ ಇಟ್ಟಿದ್ದರು. ಗುರುವಾರದಂದು ಲೋಕಾಯುಕ್ತ ಇನ್ಸ್‌ಪೆಕ್ಟರ್‌ಗಳಾದ ಬಾಲು ಹಾಗೂ ಶಿಲ್ಪಾ ನೇತೃತ್ವದಲ್ಲಿ ದಾಳಿ ನಡೆಸಿ ನಗರಸಭೆಯ ಕೆ.ಆರ್‌.ವೆಂಕಟೇಶ್ ಕಚೇರಿಯಲ್ಲಿ ಲಂಚ ಪಡೆಯುವಾಗ ಸಿಕ್ಕಿ ಬಿದ್ದಿದ್ದಾರೆ. ಹಣದ ಸಮೇತ ಇಬ್ಬರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದುಕೊಂಡರು. ನಗರಸಭೆ ಆಯುಕ್ತ ನರಸಿಂಹಮೂರ್ತಿ ಕಚೇರಿಯಲ್ಲಿ ತನಿಖೆ ನಡೆಸಿ ನಂತರ ಜೊತೆಯಲ್ಲಿ ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ (ಪರಿಸರ) ಕೆ.ಆರ್‌. ವೆಂಕಟೇಶ್ ಅವರನ್ನು ಅವರು ಕೆಲಸ ಮಾಡುವ ಕಚೇರಿಗೆ ಕರೆದುಕೊಂಡು ಹೋದರು.

ಈ ವೇಳೆ ನಗರಸಭೆಯಲ್ಲಿದ್ದ ನಗರಸಭೆ ಸದಸ್ಯರು ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ (ಪರಿಸರ)ವೆಂಕಟೇಶ್ ಪರ ಬ್ಯಾಟಿಂಗ್ ಆರಂಭಿಸಿದರು. ಕೆ.ಆರ್.ವೆಂಕಟೇಶ್ ತುಂಬಾ ಒಳ್ಳೆಯವರು, ಅವರನ್ನು ಬಿಟ್ಟು ಬಿಡಿ, ಆಯುಕ್ತರನ್ನು ಕರೆದುಕೊಂಡು ಹೋಗುವಂತೆ ಒತ್ತಾಯ ಮಾಡಿದ ಘಟನೆ ನಗರಸಭೆ ಆವರಣದಲ್ಲಿ ನಡೆಯಿತು. ಲಂಚ ಪಡೆಯುವುದರಲ್ಲಿ ವೆಂಕಟೇಶ್ ಪಾತ್ರವಿಲ್ಲ. ನಗರಸಭೆ ಆಯುಕ್ತರು ಹೇಳಿದಂತೆ ಮಾಡಿದ್ದಾರೆ. ಬೇಕಾದರೇ ನಗರಸಭೆ ಆಯುಕ್ತರನ್ನು ಕರೆದುಕೊಂಡು ಹೋಗಿ. ಎ.ಆರ್.ವೆಂಕಟೇಶ್ ಅವರನ್ನು ಬಿಟ್ಟು ಬಿಡಿ ಎಂದು ಲೋಕಾಯುಕ್ತ ಇನ್ಸ್‌ಪೆಕ್ಟರ್‌ಗಳಾದ ಬಾಲು, ಶಿಲ್ಪಾ ಮುಂದೆ ಒತ್ತಾಯ ಮಾಡುತ್ತಿದ್ದದ್ದು ಕಂಡು ಬಂದಿತು. ಈ ವೇಳೆ ಲೋಕಾಯುಕ್ತ ಇನ್ಸ್‌ಪೆಕ್ಟರ್‌ ಬಾಲು ಗರಂ ಆಗಿ ಮಾತನಾಡುತ್ತಾ, ಲಂಚದ ಹಣ ಪಡೆಯುತ್ತಿರುವ ವೇಳೆ ದಾಳಿ ಮಾಡಿದ್ದೇವೆ. ಯಾವ ಅಮಾಯಕ ಅಧಿಕಾರಿಗಳು ಮೇಲೂ ದಾಳಿ ಮಾಡಿಲ್ಲ. ಹಿರಿಯ ಅಧಿಕಾರಿಗಳ ಮಾತು ಕೇಳುವುದನ್ನು ಮೊದಲು ಬಿಡಲಿ. ಲೋಕಾಯುಕ್ತ ನಿಯಮ, ಕಾನೂನಿನಂತೆ ದಾಳಿ ಮಾಡಿದ್ದೇವೆ. ಇನ್ಸ್‌ಪೆಕ್ಟರ್‌ ಬಾಲು ಗರಂ ಆಗುತ್ತಿದ್ದಂತೆ ಸ್ಥಳದಲ್ಲಿದ್ದ ನಗರಸಭೆ ಸದಸ್ಯರು ಅಲ್ಲಿಂದ ಕಾಲ್ಕಿತ್ತ ಘಟನೆ ನಡೆಯಿತು.