ಜಿಲ್ಲಾಧಿಕಾರಿ ಆದೇಶಕ್ಕೆ ಬೆಲೆ ನೀಡದ ಪೌರಾಯುಕ್ತರು

| Published : Dec 15 2024, 02:01 AM IST

ಸಾರಾಂಶ

ಪ್ರದೀಪ್ ಎಂಬುವರನ್ನು ಬಿಡುಗಡೆಗೊಳಿಸುವ ವಿಚಾರದಲ್ಲಿ ನಾಲ್ಕು ಮಂದಿ ನಗರಸಭೆ ಸದಸ್ಯರು ಪರವಾಗಿದ್ದು, ಇಲ್ಲೇ ಉಳಿಸಿಕೊಳ್ಳಲು ಲಾಭಿ ನಡೆಸುತ್ತಿದ್ದಾರೆ. ಇದಕ್ಕೆ ಸಾಥ್ ನೀಡದ ಯೋಜನಾಧಿಕಾರಿ ಸುಧಾ ಅವರನ್ನು ನಾಲ್ಕೂ ಮಂದಿ ತರಾಟೆಗೆ ತೆಗೆದುಕೊಂಡು ಉದ್ಧಟತನ ಪ್ರದರ್ಶಿಸಿದರು ಎನ್ನಲಾಗಿದ್ದು, ಈ ಬೆಳವಣಿಗೆ ಕುರಿತು ನಗರಸಭೆ ಸದಸ್ಯರೊಬ್ಬರ ಬಳಿ ಯೋಜನಾಧಿಕಾರಿ ಸುಧಾ ಕರೆ ಮಾಡಿ ತಮ್ಮ ಅಳಲು ತೋಡಿಕೊಂಡು ಕಣ್ಣೀರಿಟ್ಟಿದ್ದಾರೆ ಎಂದು ಹೇಳಲಾಗಿದೆ.ವ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಕೊಳ್ಳೇಗಾಲ ನಗರಸಭೆಗೆ ಜಿಲ್ಲಾಧಿಕಾರಿ ಆದೇಶದ ಹಿನ್ನೆಲೆ ವರ್ಗವಾಗಿ ಪುರಸಭೆಯ ಕರ್ತವ್ಯದಿಂದ ಬಿಡುಗಡೆಗೊಂದು ಆಗಮಿಸಿದ ದ್ವಿತೀಯ ದರ್ಜೆ ನೌಕರ ತುಷಾರ್ ಎಂಬುವರಿಗೆ ಕಳೆದ ಎರಡು ದಿನಗಳಿಂದಲೂ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದೆ ಇಲ್ಲಿನ ಪೌರಾಯುಕ್ತರು ವಾಪಸ್ಸು ಕಳುಹಿಸುತ್ತಿರುವ ವಿಚಾರ ಚರ್ಚೆಯ ಕೇಂದ್ರ ಬಿಂದುವಾಗಿದೆ.

ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಕೊಳ್ಳೇಗಾಲದ ಪ್ರಭಾಕರ್, ಪ್ರದೀಪ್, ಮನಿಯ ಅವರನ್ನು ಜಿಲ್ಲೆಯ ವಿವಿಧ ಪುರಸಭೆ, ಪಟ್ಟಣ ಪಂಚಾಯ್ತಿಗಳಿಗೆ ವರ್ಗಾಯಿಸಿ ಆದೇಶಿಸಿದ್ದರು.

ಕೊಳ್ಳೇಗಾಲ ನಗರಸಭೆಯ ದ್ವಿತೀಯ ದರ್ಜೆ ನೌಕರ ಪ್ರದೀಪ್ 10 ವರ್ಷಗಳಿಗೂ ಹೆಚ್ಚು ಕಾಲ ಕರ್ತವ್ಯ ನಿರ್ವಹಿಸಿದ್ದ ಹಿನ್ನೆಲೆ ಜಿಲ್ಲಾಧಿಕಾರಿಗಳು ಇವರನ್ನು ಹನೂರು ಪಟ್ಟಣ ಪಂಚಾಯ್ತಿಗೆ ವರ್ಗಾಯಿಸಿದ್ದರು. ಅದರಂತೆ ತೆರವಾದ ಖಾಲಿ ಜಾಗಕ್ಕೆ ತುಷಾರ್ ಎಂಬುವರನ್ನು ನೇಮಿಸಲಾಗಿತ್ತು, ತುಷಾರ್ ಗುಂಡ್ಲುಪೇಟೆ ಪುರಸಭೆಯಿಂದ ಕೊಳ್ಳೇಗಾಲ ನಗರಸಭೆಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಆಗಮಿಸಿದ್ದರು. ಆದರೆ ಇದಕ್ಕೆ ಆಯುಕ್ತರು ಸಹಕರಿಸಿಲ್ಲ, ಡಿ. 13ರಂದು ಸಹ ಈತನನ್ನು ವಾಪಸ್ಸು ಕಳುಹಿಸಿದ್ದಾರೆ ಎನ್ನಲಾಗಿದ್ದು, ಈ ಬೆಳವಣಿಗೆ ನಾನಾ ಶಂಕೆ ಮತ್ತು ಚರ್ಚೆಗೆ ಗ್ರಾಸವಾಗಿದೆ. ಗುಂಡ್ಲುಪೇಟೆ ಅಧಿಕಾರಿಗಳು ಮಾತ್ರ ಜಿಲ್ಲಾಧಿಕಾರಿಗಳ ಆದೇಶಕ್ಕೆ ಮಹತ್ವ ನೀಡಿ ಗೌರವಿಸಿದ್ದಾರೆ.

ಆದರೆ, ಹನೂರು, ಚಾ.ನಗರ, ಯಳಂದೂರು ಪಂಚಾಯ್ತಿಗಳ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಆದೇಶಕ್ಕೆ ಬೆಲೆ ನೀಡದೆ ಆದೇಶ ಉಲ್ಲಂಘಿಸುವ ಮೂಲಕ

ಕರ್ತವ್ಯ ಲೋಪ ಎಸಗುತ್ತಿದ್ದು ಈ ಬೆಳವಣಿಗೆ ನಾನಾ ಸಂಶಯಗಳಿಗೆ ಆಸ್ಪದ ನೀಡಿದೆ.

ಕಣ್ಣೀರಿಟ್ಟ ಯೋಜನಾಧಿಕಾರಿ:

ಪ್ರದೀಪ್ ಎಂಬುವರನ್ನು ಬಿಡುಗಡೆಗೊಳಿಸುವ ವಿಚಾರದಲ್ಲಿ ನಾಲ್ಕು ಮಂದಿ ನಗರಸಭೆ ಸದಸ್ಯರು ಪರವಾಗಿದ್ದು, ಇಲ್ಲೇ ಉಳಿಸಿಕೊಳ್ಳಲು ಲಾಭಿ ನಡೆಸುತ್ತಿದ್ದಾರೆ. ಇದಕ್ಕೆ ಸಾಥ್ ನೀಡದ ಯೋಜನಾಧಿಕಾರಿ ಸುಧಾ ಅವರನ್ನು ನಾಲ್ಕೂ ಮಂದಿ ತರಾಟೆಗೆ ತೆಗೆದುಕೊಂಡು ಉದ್ಧಟತನ ಪ್ರದರ್ಶಿಸಿದರು ಎನ್ನಲಾಗಿದ್ದು, ಈ ಬೆಳವಣಿಗೆ ಕುರಿತು ನಗರಸಭೆ ಸದಸ್ಯರೊಬ್ಬರ ಬಳಿ ಯೋಜನಾಧಿಕಾರಿ ಸುಧಾ ಕರೆ ಮಾಡಿ ತಮ್ಮ ಅಳಲು ತೋಡಿಕೊಂಡು ಕಣ್ಣೀರಿಟ್ಟಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ ಕರ್ತವ್ಯ ಮುಗಿದು ತೆರಳುತ್ತಿದ್ದ ಯೋಜನಾಧಿಕಾರಿಗಳನ್ನು ನಾಲ್ಕು ಮಂದಿ ನಗರಸಭೆ ಸದಸ್ಯರು ಅಡ್ಡಗಟ್ಟಿ ಸಹಿ ಹಾಕಲೇಬೇಕು, ನಿಯೋಜನೆಗೊಂಡ 3 ಮಂದಿಯನ್ನು ಇಲ್ಲೇ ಉಳಿಸಿ ಎಂದು ಗರಂಮ್ಮಾಗಿ ಒತ್ತಾಯಿಸಿದ್ದರು ಎನ್ನಲಾಗಿದ್ದು, ಈ ಬೆಳವಣಿಗೆಯಿಂದಾಗಿ ಯೋಜನಾಧಿಕಾರಿಗಳು ವಿಚಲಿತರಾಗಿದ್ದಾರೆಂದು ಅವರ ಆಪ್ತ ಮೂಲಗಳು ಕನ್ನಡಪ್ರಭಕ್ಕೆ ಖಚಿತಪಡಿಸಿವೆ. ಈ ಬೆಳವಣಿಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿದ್ದು 3 ಮಂದಿ ವರ್ಗಾವಣೆಯನ್ನು ರದ್ದು ಮಾಡುತ್ತಾರಾ? ಇಲ್ಲ ಬಿಡುಗಡೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಬಿಡುಗಡೆಗೊಳಿಸದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಕ್ರಮಕೈಗೊಳ್ಳುತ್ತಾರಾ ಕಾದು ನೋಡಬೇಕಿದೆ.