ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುತಾಲೂಕು ವ್ಯಾಪ್ತಿಯಲ್ಲಿನ ಕೆರೆ, ಕಟ್ಟೆಗಳಿಗೆ ಪೂರ್ಣ ಪ್ರಮಾಣದಲ್ಲಿ ನೀರು ತುಂಬಿಸಲು ಕ್ರಮವಹಿಸಬೇಕು. ಏತ ನೀರಾವರಿ ಯೋಜನೆ ಮೂಲಕ ತುಂಬಿಸಬೇಕಿರುವ ಎಲ್ಲಾ ಕೆರೆಗಳಿಗೂ ಭರ್ತಿ ಆಗುವಂತೆ ಮಾಡಬೇಕು ಎಂದು ಶಾಸಕ ಜಿ.ಟಿ. ದೇವೇಗೌಡ ತಾಕೀತು ಮಾಡಿದರು.ನಗರಪಾಲಿಕೆ ವಲಯ 3ರ ಕಚೇರಿ ಸಭಾಂಗಣದಲ್ಲಿ ಬುಧವಾರ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಗೆ ಬರುವ ಎಲ್ಲಾ ಕೆರೆಗಳು, ಕಟ್ಟೆಗಳನ್ನು ತುಂಬಿಸಲು ಅನುದಾನ ಬಿಡುಗಡೆ ಮಾಡಿಸಲಾಗಿದೆ. ಸಕಾಲದಲ್ಲಿ ಕಾಮಗಾರಿಗಳನ್ನು ಮುಗಿಸಬೇಕು. ಉಳಿದ ಕೆರೆಗಳನ್ನು ತುಂಬಿಸಲು ಡಿಪಿಆರ್ ತಯಾರಿಸಿ ಸಲ್ಲಿಸುಂತೆ ಸಲಹೆ ನೀಡಿದರು.ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಹರಿಸಬೇಕಾದರೆ ಕೆರೆಗಳನ್ನು ತುಂಬಿಸಬೇಕು. ಹಾಗಾಗಿ, ಯಾವುದೇ ಕೆರೆಗಳು ಪೂರ್ಣವಾಗಿ ತುಂಬಿಲ್ಲ ಎನ್ನುವ ದೂರು ಬರಬಾರದು. ಪೈಪ್ ಲೈನ್ ಕೊನೆಯ ತನಕವೂ ಇರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಸಣ್ಣ ನೀರಾವರಿ ಇಲಾಖೆ ಇಇ ಅಜರುದ್ದೀನ್ ಮಾತನಾಡಿ, ಗುಂಗ್ರಾಲ್ ಛತ್ರ, ಒಡೆಯರ ಕಟ್ಟೆ, ದೊಡ್ಡೇಗೌಡನಕಟ್ಟೆ, ಹೊನ್ನಯ್ಯನಕಟ್ಟೆ ಕೆರೆಯನ್ನುತುಂಬಿಸಲು 14 ಕೋಟಿ ರೂ. ಮಂಜೂರಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಮುಗಿಯಲಿದೆ. ಒಡೆಯರ ಕೆರೆ ದೊಡ್ಡ ಕೆರೆಯಾಗಿದ್ದು, ಏತನೀರಾವರಿ ಯೋಜನೆ ಮೂಲಕ ನೀರು ತುಂಬಿಸಬೇಕಿರುವುದರಿಂದ ಎರಡು-ಮೂರು ದಿನಗಳಲ್ಲಿ ಮೋಟಾರ್ ಅಳವಡಿಸಲಾಗುತ್ತದೆ. ನಂತರ, ಚಾಲನೆ ಕೊಡಬಹುದು ಎಂದು ಅಧಿಕಾರಿಗಳು ಹೇಳಿದರು.ಲಿಂಗಾಂಬುದಿಪಾಳ್ಯ, ಅಯ್ಯಜಯ್ಯನಕೆರೆ, ಕೇರ್ಗಳ್ಳಿ ಕೆರೆಯನ್ನು ಶುಚಿಗೊಳಿಸಿ ನೀರು ತುಂಬಿಸಲು ಕೆಲವು ಕಾಮಗಾರಿ ನಡೆಸಬೇಕಿದೆ. ಕೆರೆಗಳಿಗೆ ನೇರವಾಗಿ ಪೈಪ್ ಲೈನ್ ತೆಗೆದುಕೊಂಡು ಹೋಗಬೇಕಿರುವುದರಿಂದ ಪ್ರತ್ಯೇಕವಾದ ಡಿಪಿಆರ್ ತಯಾರಿಸಲಾಗುತ್ತಿದೆ ಎಂದರು.ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಕೆರೆಗಳನ್ನು ಸಂರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ತಾವು ಪ್ರಸ್ತಾವನೆ ಸಲ್ಲಿಸುವ ಯೋಜನೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಸಣ್ಣ ನೀರಾವರಿ ಸಚಿವರೊಂದಿಗೆ ಸಮಾಲೋಚನೆ ನಡೆಸಿ ಒಪ್ಪಿಗೆ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.ಆನಂದೂರು, ಬೋರೆ ಆನಂದೂರು, ಮರಟಿಕ್ಯಾತನಹಳ್ಳಿ, ಈರಪ್ಪನಕೊಪ್ಪಲು ಕೆರೆಗಳಿಗೆ ಏತ ನೀರಾವರಿ ಯೋಜನೆ ಮೂಲಕ ತುಂಬಿಸಲಾಗುತ್ತದೆ. ಇವುಗಳನ್ನು ಸಕಾಲದಲ್ಲಿ ಮುಗಿಸುವುದಕ್ಕೆ ಗಮನಹರಿಸಬೇಕು. ಗುತ್ತಿಗೆದಾರರಿಗೆ ಏನಾದರೂ ಬಾಕಿ ಅನುದಾನ ಪಾವತಿಸುವುದು ಇದ್ದರೆ ಕ್ಲಿಯರ್ ಮಾಡಿ. ಶೀಘ್ರದಲ್ಲೇ ಚಾಲನೆ ಕೊಡೋಣ ಎಂದರು.ದೇವಿಕೆರೆಯಲ್ಲಿ ತುಂಬಿರುವ ಹೂಳುತೆಗೆಯಲಾಗಿತ್ತು. ವಿದ್ಯುತ್ ದೀಪ, ರಸ್ತೆ ಮೊದಲಾದ ಕಾಮಗಾರಿ ಮುಂದುವರಿಸಲು ಅರಮನೆ ವತಿಯಿಂದ ಅನುಮತಿ ಬೇಕಿದೆ ಎಂದರು.ಸಣ್ಣ ನೀರಾವರಿ ಇಲಾಖೆ ಅಧೀಕ್ಷಕ ಎಂಜಿನಿಯರ್‌ಪ್ರಶಾಂತ್, ಇಇ ಅಜರುದ್ದೀನ್, ಈಶ್ವರ್, ವೇಣುಗೋಪಾಲ್ ಮೊದಲಾದವರು ಇದ್ದರು.