ಸಾರಾಂಶ
ಹಾನಗಲ್ಲ: ಇಂದಿರಾ ನಗರದ ಸ್ವಚ್ಛತೆಗೆ ಪುರಸಭೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದು, ಪ್ರತಿಭಟನೆ ನಡೆಸುವುದಾಗಿ ಪುರಸಭೆ ಸದಸ್ಯ ಜಮೀರಅಹಮ್ಮದ ಶೇಖ್ ಹೇಳಿದರು.ಬುಧವಾರ ಪುರಸಭೆ ಸಭಾಂಗಣದಲ್ಲಿ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ರಸ್ತೆ, ಗಟಾರ ಒಂದಾಗಿ ನೀರು ಹರಿಯುತ್ತಿದೆ. ಒಂದು ತಿಂಗಳಿಂದ ಮನವಿ ಮಾಡಿದರೂ ಪುರಸಭೆ ಲಕ್ಷ್ಯ ವಹಿಸುತ್ತಿಲ್ಲ. ಕೆಲವು ವಾರ್ಡ್‌ಗಳಿಗೆ ಮಾತ್ರ ಸ್ವಚ್ಛತೆಯ ಭಾಗ್ಯ, ಕೆಲವು ವಾರ್ಡಗಳ ದೌರ್ಭಾಗ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇಂದಿರಾ ನಗರದ 19ನೇ ವಾರ್ಡ್ ಕೊಳೆಗೇರಿ ಎಂದು ಹೇಳುತ್ತೀರಿ. ಅದನ್ನು ಸ್ವಚ್ಛವಾಗಿಡಲು ನೀವು ಕಾಳಜಿ ವಹಿಸುತ್ತಿಲ್ಲ. ಒಂದು ತಿಂಗಳಿಂದ ಈ ಸಮಸ್ಯೆ ಹೇಳುತ್ತಿದ್ದರೂ ಜಾಣ ಕುರುಡರಂತೆ ವರ್ತಿಸುತ್ತಿರುವಿರಿ. ನಿಮ್ಮ ಆರೋಗ್ಯಾಧಿಕಾರಿ ಕೆಲಸ ಏನು? ನೀವು ಕೂಡ 19ನೇ ವಾರ್ಡ್ ಕಡೆಗೆ ಕಣ್ಣು ಹಾಯಿಸಿಲ್ಲ ಎಂದರಲ್ಲದೆ, ಸಭೆಯಲ್ಲಿ ವಾಸ್ತವಾಂಶಗಳನ್ನು ಒಂದೊಂದಾಗಿ ಬಿಚ್ಚಿಟ್ಟರು.
ಪೌರ ಕಾರ್ಮಿಕ ಸಿಬ್ಬಂದಿ ಕೊರತೆ ಇದೆ. ಹೊರಗುತ್ತಿಗೆಯಲ್ಲಿ ಸಿಬ್ಬಂದಿ ನೇಮಿಸಲು ಅವಕಾಶವಿಲ್ಲ. 17 ಸಿಬ್ಬಂದಿ ನೇಮಕದ ಪ್ರಕ್ರಿಯೆ ಚಾಲನೆಯಲ್ಲಿದೆ. ನಾನೇ ನಿಂತು ಇಂದಿರಾ ನಗರದ ಎಲ್ಲ ಚರಂಡಿ ಸ್ವಚ್ಛತೆಗೆ ಕ್ರಮ ಜರುಗಿಸುತ್ತೇನೆ ಎಂದು ಭರವಸೆ ನೀಡಿದ ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ, ಪ್ರತಿಭಟನೆ ನಡೆಸದಂತೆ ಮನವಿ ಮಾಡಿದರು. ಪುರಸಭಾಧ್ಯಕ್ಷ ಪರಶುರಾಮ ಖಂಡೂನವರ ನಾಳೆ ಬೆಳಗ್ಗೆ ನಾನೇ ಸ್ವತಃ ನಿಂತು ಸ್ವಚ್ಛತೆಗೆ ಕ್ರಮ ಜರುಗಿಸುವುದಾಗಿ ತಿಳಿಸಿದರು.ಪುರಸಭೆ ಸದಸ್ಯ ನಾಗಪ್ಪ ಸವದತ್ತಿ, ಇಂದಿರಾ ಕ್ಯಾಂಟೀನ್‌ಗೆ ಪುರಸಭೆ ಹಣ ಬೇಡ. ತಾಪಂ ಹಾಗೂ ಶಾಸಕರ ಅನುದಾನದಲ್ಲಿ ಅದರ ಕೆಲಸವಾಗಲಿ. ಇದು ಪುರಸಭೆಯ ಸಾಮಾನ್ಯ ಸಭೆಯ ನಿರ್ಣಯ ಎಂದು ಮೇಲಧಿಕಾರಿಗಳಿಗೆ ತಿಳಿಸಲು ಒತ್ತಾಯಿಸಿದರು. ಪುರಸಭೆ ಅಗತ್ಯ ಕೆಲಸಗಳಿಗೇ ಹಣವಿಲ್ಲ. ಆದಷ್ಟು ಪುರಸಭೆಯ ಅಗತ್ಯ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು ಎಂದರು. ಪುರಸಭೆ ವ್ಯಾಪ್ತಿಯ ಆಸ್ತಿಗಳ ಉತಾರ ನೀಡಲು ಅನಗತ್ಯ ವಿಳಂಬ ಮಾಡುತ್ತಿರುವ ಬಗ್ಗೆ ದೂರುಗಳಿವೆ ಎಂದು ಹೇಳಿದರು.
ಆಸ್ತಿ ತೆರಿಗೆಯನ್ನು ಶೇ. 5ರಷ್ಟು ಹೆಚ್ಚಳಕ್ಕೆ ಒಪ್ಪಿಗೆ ನೀಡಲು ಪುರಸಭಾ ಸದಸ್ಯರಿಗೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ ಮನವಿ ಮಾಡಿದರು. ಆದರೆ ಎಲ್ಲ ಸದಸ್ಯರು ಈ ಬಾರಿ ಆಸ್ತಿ ತೆರಿಗೆ ಹೆಚ್ಚಳ ಬೇಡ ಎಂದು ಪಟ್ಟು ಹಿಡಿದರು. ಅಂತಿಮವಾಗಿ ಶೇ. 1.5 ಹೆಚ್ಚಳಕ್ಕೆ ಒಪ್ಪಿದರು. ಆದರೆ ಶೇ. 5 ಹೆಚ್ಚಳ ಅನಿವಾರ್ಯ ಎಂದು ಮುಖ್ಯಾಧಿಕಾರಿ ಘೋಷಿಸಿದರು.ಆಸ್ತಿಗಳ ಇ-ಸೊತ್ತು ದಾಖಲಿಸುವ ವಿಷಯದಲ್ಲಿ ಪುರಸಭೆ ಸಿಬ್ಬಂದಿಯ ಪ್ರತಿಕ್ರಿಯೆ ಸರಿಯಾಗಿಲ್ಲ ಎಂದು ಸದಸ್ಯರು ಸಭೆಯ ಗಮನ ಸೆಳೆದರು.
ಉಪಾಧ್ಯಕ್ಷೆ ವೀಣಾ ಗುಡಿ, ಸುರೇಶ ನಾಗಣ್ಣನವರ, ಖುರ್ಷಿದ್ ಅಹಮ್ಮದ ಹುಲ್ಲತ್ತಿ, ವಿರೂಪಾಕ್ಷಪ್ಪ ಕಡಬಗೇರಿ, ಹನುಮನಕೊಪ್ಪ, ರಾಧಿಕಾ ದೇಶಪಾಂಡೆ, ಶೋಭಾ ಉಗ್ರಣ್ಣನವರ, ಹಸೀನಾಬಾನು ನಾಯಕನವರ ಮೊದಲಾದವರು ಮಾತನಾಡಿದರು.