ಪುರಸಭೆ: ₹3.20 ಲಕ್ಷ ಉಳಿತಾಯ ಬಜೆಟ್ ಮಂಡನೆ

| Published : Mar 28 2025, 12:30 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ಇಲ್ಲಿನ ಪುರಸಭೆಯ 2025–26ನೇ ಸಾಲಿನಲ್ಲಿ ಒಟ್ಟು ₹3.20 ಲಕ್ಷ ಉಳಿತಾಯ ಬಜೆಟ್ ಅನ್ನು ಗುರುವಾರ ಮಂಡನೆ ಮಾಡಲಾಯಿತು. ರಾಜಸ್ವ, ಬಂಡವಾಳ ಸ್ವೀಕೃತಿ, ಅಸಾಧಾರಣ ಸ್ವೀಕೃತಿ ಸೇರಿದಂತೆ ಒಟ್ಟು ₹44.30 ಕೋಟಿ ಆದಾಯ ಸಂಗ್ರಹವಾಗುವ ನಿರೀಕ್ಷೆ ಇದ್ದು, ಅದರಲ್ಲಿ ಒಟ್ಟು ₹44.27 ಕೋಟಿ ವೆಚ್ಚವನ್ನು ಅಂದಾಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಇಂಡಿ

ಇಲ್ಲಿನ ಪುರಸಭೆಯ 2025–26ನೇ ಸಾಲಿನಲ್ಲಿ ಒಟ್ಟು ₹3.20 ಲಕ್ಷ ಉಳಿತಾಯ ಬಜೆಟ್ ಅನ್ನು ಗುರುವಾರ ಮಂಡನೆ ಮಾಡಲಾಯಿತು. ರಾಜಸ್ವ, ಬಂಡವಾಳ ಸ್ವೀಕೃತಿ, ಅಸಾಧಾರಣ ಸ್ವೀಕೃತಿ ಸೇರಿದಂತೆ ಒಟ್ಟು ₹44.30 ಕೋಟಿ ಆದಾಯ ಸಂಗ್ರಹವಾಗುವ ನಿರೀಕ್ಷೆ ಇದ್ದು, ಅದರಲ್ಲಿ ಒಟ್ಟು ₹44.27 ಕೋಟಿ ವೆಚ್ಚವನ್ನು ಅಂದಾಜಿಸಲಾಗಿದೆ.

ಸದಸ್ಯರಾದ ಇಸ್ಮಾಯಿಲ್‌ ಅರಬ, ಉಮೇಶ ದೇಗಿನಾಳ, ಅನೀಲಗೌಡ ಬಿರಾದಾರ ಮಾತನಾಡಿ, ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗಿ 10 ತಿಂಗಳಾಯಿತು. ಪುರಸಭೆ ಸದಸ್ಯರ ಆಡಳಿತಾವಧಿ ಇನ್ನು ಕೇವಲ ನಾಲ್ಕೈದು ತಿಂಗಳು ಮಾತ್ರ ಬಾಕಿ ಇದೆ. ವಾರ್ಡ್‌ಗಳಲ್ಲಿ ಇಲ್ಲಿಯವರೆಗೆ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಹೀಗಾದರೆ ಪಟ್ಟಣದ ವಾರ್ಡ್‌ಗಳ ಅಭಿವೃದ್ಧಿ ಹೇಗೆ ಎಂದು ಪ್ರಶ್ನಿಸಿದರು.

ಸದಸ್ಯ ಉಮೇಶ ದೇಗಿನಾಳ ಮಾತನಾಡಿ, ಪಟ್ಟಣದ ಸೌಂದರ್ಯ ಹೆಚ್ಚಿಸುವ ಉದ್ದೇಶದಿಂದ ಹೊಂದಲಾಗಿದ್ದು, ಪಟ್ಟಣದ ವಾರ್ಡ್‌ಗಳ ಸ್ವಚ್ಛತೆಗೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ? ಚರಂಡಿಗಳು ತುಂಬಿ ರಸ್ತೆ ಮೇಲೆ ಹರಿಯುತ್ತಿವೆ. ಸದಸ್ಯರು ಹೇಳಿದರೂ ಸ್ವಚ್ಛ ಮಾಡುತ್ತಿಲ್ಲ. ಪೌರ ಕಾರ್ಮಿಕರು ಸಾಕಷ್ಟು ಜನ ಇದ್ದರೂ ಏಕೆ ನಗರ ಸ್ವಚ್ಛವಾಗುತ್ತಿಲ್ಲ ಎಂದು ಪ್ರಶ್ನಿಸಿದರು. ಆರೋಗ್ಯ ನಿರೀಕ್ಷಕ ಶಿವು ಸೋಮನಾಯಕ, ಸಂಗೀತಾ ಕೋಳಿ, ಪೌರ ಕಾರ್ಮಿಕರು, ಮೇಲ್ವಿಚಾರಕರು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಸರಿಯಾಗಿ ಕೆಲಸ ಮಾಡದ ಪೌರಕಾರ್ಮಿಕರ ಸಂಬಳ ತಡೆಹಿಡಿಯಲು ಸಭೆಯಲ್ಲಿದ್ದ ಸದಸ್ಯರು ಸೂಚಿಸಿದರು.

ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ ಬಜೆಟ್‌ ಪ್ರತಿ ಓದಿದರು. ಈ ವೇಳೆ ಉಪಾಧ್ಯಕ್ಷ ಜಹಾಂಗೀರ ಸೌದಾಗರ, ಸ್ಥಾಯಿ ಸಮಿತಿ ಅಧ್ಯಕ್ಷೆ ಸಂಗೀತಾ ಕರಕಟ್ಟಿ, ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಪೂಜಾರಿ, ಸದಸ್ಯರಾದ ಶಬ್ಬಿರ ಖಾಜಿ, ಅಸ್ಲಂ ಕಡಣಿ, ಅಯೂಬ್‌ ಬಾಗವಾನ, ಮುಸ್ತಾಕ ಇಂಡಿಕರ, ಕಚೇರಿ ಅಧೀಕ್ಷಕ ಪ್ರವೀಣ ಸೋನಾರ, ಇಂಜಿನೀಯರ್‌ ಅಶೋಕ ಚಂದನ, ಲೆಕ್ಕಾಧಿಕಾರಿ ಅಸ್ಲಂ ಖಾದಿಮ, ಕಂದಾಯ ಅಧಿಕಾರಿ ನಿಂಬಾಳಕರ, ಆರೋಗ್ಯಾಧಿಕಾರಿ ಸೋಮನಾಯಕ, ಸಂಗೀತಾ ಕೋಳಿ, ಚಂದ್ರಶೇಖರ ಕಾಲೇಬಾಗ ಇದ್ದರು.---------

ಬಾಕ್ಸ್‌....

ಚರ್ಚೆಯಾಗದ ಪ್ರಮುಖ ವಿಷಯಗಳು

ಪಟ್ಟಣದ ಪ್ರಮುಖ ರಸ್ತೆಯಲ್ಲಿ ಪಾದಚಾರಿಗಳ ಅನುಕೂಲಕ್ಕಾಗಿ ಪಾದಚಾರಿ ಮಾರ್ಗ ತೆರವು, ಉದ್ಯಾನ ಅಭಿವೃದ್ಧಿ, ಸಮುದಾಯ ಭವನ ನಿರ್ಮಾಣ, ನಗರ ಸೌಂದರ್ಯಿಕರಣ, ಹಿರಿಯ ನಾಗರಿಕರ ವಿಶ್ರಾಂತಿ ಸ್ಥಳಗಳು, ಎಸ್‌ಎಫ್‌ಸಿ, 15ನೇ ಹಣಕಾಸು, ಸ್ವಚ್ಛ ಭಾರತ್ ಅನುದಾನ, ಡೇ ನಲ್ಮ್ ಯೋಜನೆ, ಮಳೆಹಾನಿ, ಕಚೇರಿ ಪೀಠೋಪಕರಣ, ವಾಣಿಜ್ಯ ಮಳಿಗೆ ಕಾಮಗಾರಿ, ಸಮುದಾಯ ಭವನ, ಅಂಗನವಾಡಿ, ರಸ್ತೆ, ಚರಂಡಿ ಅಭಿವೃದ್ಧಿ, ಸಂಚಾರಿ, ಬೀದಿದೀಪ ಅಳವಡಿಕೆ, ಮಳೆ ನೀರಿನ‌ ಚರಂಡಿ, ಸೇತುವೆ ಕಾಮಗಾರಿ, ಘನತ್ಯಾಜ್ಯ ನಿರ್ವಹಣೆ, ಕಟ್ಟಡ ಕಾಮಗಾರಿ, ನೀರು ಸರಬರಾಜು ಅಭಿವೃದ್ಧಿ ಕಾಮಗಾರಿ, ಒಳಚರಂಡಿ ಅಭಿವೃದ್ಧಿ ಕಾಮಗಾರಿ, ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ, ಅಂಗವಿಕಲರ ಅಭಿವೃದ್ಧಿ ಸೇರಿದಂತೆ ಇತರೆ ವಿಷಯಗಳು ಚರ್ಚೆಗೆ ಬರಲಿಲ್ಲ.

--------

ಕೋಟ್‌

ಬಜೆಟ್‌ ಪೂರ್ವ ಚರ್ಚಿಸಿಲ್ಲ

ಬಜೆಟ್ ಸಿದ್ಧತೆ ಮೊದಲು ಸದಸ್ಯರೊಂದಿಗೆ ಚರ್ಚಿಸಿಲ್ಲ. ಅಧಿಕಾರಿಗಳು ಚರ್ಚಿಸದೇ ಹಿಂದಿನ ವರ್ಷದ ಬಜೆಟ್‌ನ ಪ್ರತಿಯನ್ನೇ ಯಥಾವತ್ತಾಗಿ ಮುಂದುವರಿಸಿರುವ ರೀತಿಯಲ್ಲಿದೆ. ಹೊಸ ಯೋಜನೆಗಳು ವಿಶೇಷ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬಹುದಿತ್ತು. ಸಾರ್ವಜನಿಕ ಮೂತ್ರಾಲಯ, ಮಹಿಳಾ ಶೌಚಾಲಯ, ನಾಮಫಲಕ ಅಳವಡಿಸಿವುದು, ಬೀದಿ ದೀಪ ಹೆಚ್ಚಿಸುವುದು, ನೂತನ ಚರಂಡಿಗಳ ನಿರ್ಮಾಣ ಎಲ್ಲವೂ ಚರ್ಚಿಸಬೇಕಾಗಿತ್ತು. ಇದು ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಮಂಡಿಸಿದ ಬಜೆಟ್‌ ಅಲ್ಲ. ಹಿಂದಿನ ವರ್ಷದ ಬಜೆಟ್‌ ಪ್ರತಿ ಕಾಫಿ ಮಾಡಿದ್ದಾರೆ.

- ಅನೀಲಗೌಡ ಬಿರಾದಾರ, ಪುರಸಭೆ ಸದಸ್ಯರು