ರಾಮನಗರ: ಅರ್ಕಾವತಿ ರಿವರ್ ಫ್ರಂಟ್ ಡೆವಲಪ್ ಮೆಂಟ್ ಯೋಜನೆಗಾಗಿ ಅರ್ಕೇಶ್ವರ ದೇವಾಲಯ, ಪೀರನ್ ಷಾ ವಲಿ ದರ್ಗಾ ಹಾಗೂ ವಸತಿ ಪ್ರದೇಶವನ್ನು ಸ್ವಾಧೀನ ಪಡಿಸಿಕೊಳ್ಳದಂತೆ ಒತ್ತಾಯಿಸಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಳಿಗೆ ನಿಯೋಗ ತೆರಳಲು ಗುರುವಾರ ನಡೆದ ನಗರಸಭೆ ತುರ್ತು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಕೆ.ಶೇಷಾದ್ರಿ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಸರ್ವ ಸದಸ್ಯರು, ಧಾರ್ಮಿಕ ಕೇಂದ್ರ ಮತ್ತು ವಸತಿ ಪ್ರದೇಶವನ್ನು ಹೊರತು ಪಡಿಸಿ ಅರ್ಕಾವತಿ ನದಿ ದಂಡೆ ಅಭಿವೃದ್ಧಿ ಪಡಿಸಲು ನಮ್ಮೆಲ್ಲರ ಸಹಕಾರ ಇರಲಿದೆ. ಅವುಗಳಿಗೆ ಧಕ್ಕೆಯಾಗದಂತೆ ಕ್ರಮ ವಹಿಸಬೇಕು. ಇಲ್ಲದಿದ್ದರೆ ಎಲ್ಲ ಹಂತದ ಹೋರಾಟಗಳಿಗೆ ಸಿದ್ಧರಾಗೋಣ ಎಂದು ಸಲಹೆಗಳನ್ನು ನೀಡಿದರು.

ಸದಸ್ಯರೆಲ್ಲ ಸಲಹೆ, ಅಭಿಪ್ರಾಯಗಳನ್ನು ಸ್ವೀಕರಿಸಿದ ಅಧ್ಯಕ್ಷ ಕೆ.ಶೇಷಾದ್ರಿ ಅರ್ಕೇಶ್ವರ ದೇವಾಲಯ ಸಮಿತಿ, ಪೀರನ್ ಷಾ ವಲಿ ದರ್ಗಾದ ಕಮಿಟಿ ಹಾಗೂ ರಾಘವೇಂದ್ರ ಕಾಲೋನಿ ನಿವಾಸಿಗಳನ್ನು ಒಳಗೊಂಡಂತೆ ನಗರಸಭಾ ಸದಸ್ಯರೆಲ್ಲರು ನಿಯೋಗದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸೋಣ ಎಂದು ಹೇಳಿದರು. ಇದಕ್ಕೆ ಎಲ್ಲ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದರು.

ವಿಪಕ್ಷ ನಾಯಕ ಮಂಜುನಾಥ್ ಮಾತನಾಡಿ, ಭೂ ಸ್ವಾಧೀನ ಪ್ರಕ್ರಿಯೆ ಸಂಬಂಧ ರಾಜ್ಯ ಸರ್ಕಾರ 2026ರ ಜನವರಿಯಲ್ಲಿ ಅಧಿಸೂಚನೆ ಹೊರಡಿಸಿದೆ. ಆದರೆ, ನದಿ ದಂಡೆಯಲ್ಲಿ ಒಂದು ವರ್ಷದ ಹಿಂದಿನಿಂದಲೇ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಸರ್ಕಾರದ ಆದೇಶಕ್ಕೂ ಮೊದಲೇ ಕಾಮಗಾರಿ ಹೇಗೆ ಪ್ರಾರಂಭಿಸಲಾಗಿದೆ. ಕೆಲವರ ಭೂಮಿ ಪರಿವರ್ತನೆ ಮಾಡಲಾಗಿದೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಪುರಾತನವಾದ ಅರ್ಕೇಶ್ವರ ದೇಗುಲ ಮತ್ತು ಪೀರನ್ ಷಾ ವಲಿ ದರ್ಗಾಗಳೊಂದಿಗೆ ಜನರು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ರಾಘವೇಂದ್ರ ಕಾಲೋನಿ ನಿವಾಸಿಗಳು 40-50 ವರ್ಷಗಳಿಂದ ಜೀವನ ಸಾಗಿಸುತ್ತಿದ್ದಾರೆ. ಭಕ್ತರ ಭಾವನೆಗಳಿಗೆ ಧಕ್ಕೆ ತಂದು, ನಿವಾಸಿಗಳನ್ನು ಬೀದಿಗೆ ತಂದು ಅಭಿವೃದ್ಧಿ ಮಾಡುವುದು ಬೇಕಾಗಿಲ್ಲ. ಈ ಯೋಜನೆ ಕೈಬಿಡುವುದೇ ಸೂಕ್ತ ಎಂದು ಹೇಳಿದರು.


ಇದಕ್ಕೆ ಪ್ರತಿಕ್ರಿಯೆ ನೀಡಿದ ಆಯುಕ್ತ ಜಯಣ್ಣ, ಡ್ರೋನ್ ಸರ್ವೆ ಮಾಡಿ ಬಫರ್ ಜೋನ್ ಪರಿಮಿತಿಯನ್ನು ಗುರುತಿಸಲಾಗಿದೆ. ನದಿ ದಂಡೆಯಲ್ಲಿರುವ ಸರ್ಕಾರಿ ಜಮೀನುಗಳಲ್ಲಿ ತಡೆಗೋಡೆ ನಿರ್ಮಾಣ ಕಾರ್ಯ ನಡೆಯುತ್ತಿದೆಯೇ ಹೊರತು ಖಾಸಗಿ ಜಾಗದಲ್ಲಿ ಅಲ್ಲ ಎಂದು ಸಮಜಾಯಿಷಿ ನೀಡಿದರು.

ಪಾರ್ಕ್ ನಿರ್ಮಾಣಕ್ಕೆ ತಕರಾರು ಇಲ್ಲ:

ಸದಸ್ಯ ನಿಜಾಮುದ್ದೀನ್ ಷರೀಫ್ ಮಾತನಾಡಿ, ಶಾಸಕ ಇಕ್ಬಾಲ್ ಹುಸೇನ್ ಅವರು ದೇಗುಲ, ದರ್ಗಾ ಹಾಗೂ ವಸತಿ ಪ್ರದೇಶಗಳನ್ನು ಸ್ವಾಧೀನ ಮಾಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಅವರು ಕೊಟ್ಟು ಮಾತಿನಂತೆ ನಡೆದುಕೊಳ್ಳುತ್ತಾರೆಂಬ ವಿಶ್ವಾಸವಿದೆ. ಜಿಲ್ಲಾ ಕೇಂದ್ರ ರಾಮನಗರದಲ್ಲಿ ಒಳ್ಳೆಯ ಅಭಿವೃದ್ಧಿ ಕೆಲಸ ಆಗುತ್ತಿದೆ. ಅದಕ್ಕೆ ಎಲ್ಲರು ಸಹಕಾರ ನೀಡಬೇಕು ಎಂದು ಹೇಳಿದರು.

ಸದಸ್ಯರಾದ ಮುನಿಜಲ್ ಆಗಾ, ಫೈರೋಜ್ ಪಾಷ, ಅಕ್ಲಿಂ, ಗ್ಯಾಬ್ರಿಯಲ್ , ವಿಜಯ ಕುಮಾರಿ , ಮೋಯಿನ್ , ರಮೇಶ್ ಹಾಗೂ ಪವಿತ್ರ ಮಾತನಾಡಿ, ಜಿಲ್ಲಾ ಕೇಂದ್ರ ರಾಮನಗರ ಅಭಿವೃದ್ಧಿ ಹೊಂದಬೇಕಾಗಿದೆ.ಈ ನಿಟ್ಟಿನಲ್ಲಿ ಹೈಟೆಕ್ ಪಾರ್ಕ್ ನಿರ್ಮಾಣ ಸಂತಸದ ವಿಚಾರ. ಆದರೆ, ಜನರ ಭಾವನೆಗಳಿಗೆ ಧಕ್ಕೆ ತಂದು ಅಭಿವೃದ್ಧಿ ಮಾಡುವುದು ಬೇಡ. ಕೋಟ್ಯಂತರ ಭಕ್ತರನ್ನು ಹೊಂದಿರುವ ದೇಗುಲ, ದರ್ಗಾಗಳನ್ನು ಉಳಿಸಿಕೊಳ್ಳಬೇಕಿದೆ. ಇದಕ್ಕಾಗಿ ಹೋರಾಟ ಮಾಡಬೇಕಾದರೆ ಸಿದ್ಧರಾಗೋಣ ಎಂದು ಹೇಳಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಗಿರಿಜಮ್ಮ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಕೋಟ್ ..............

ಐತಿಹಾಸಿಕ ದೇಗುಲ ಮತ್ತು ದರ್ಗಾವನ್ನು ಉಳಿಸಿಕೊಳ್ಳೋಣ. ಬಫರ್ ಜೋನ್ ಅಂತ ಗೊತ್ತಿದ್ದರು ಮನೆಗಳನ್ನು ನಿರ್ಮಿಸಿಕೊಂಡಿದ್ದು, ಅವರಿಗೆಲ್ಲ ಪರಿಹಾರ ಕಲ್ಪಿಸಿಕೊಡಲಿ. ಅಲ್ಲಿ ನನ್ನ ಮನೆಗಳು ಇದ್ದು, ನೋಟಿಸ್ ಕೂಡ ಬಂದಿದೆ. ನಾನು ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದು, ಸ್ವಾಧೀನ ಪಡಿಸಿಕೊಳ್ಳುವುದಾದರೆ ಅಭ್ಯಂತರ ಇಲ್ಲ. ನಮಗೆ ಜಿಲ್ಲಾ ಕೇಂದ್ರದ ಅಭಿವೃದ್ಧಿ ಮುಖ್ಯ.

-ನಿಜಾಮುದ್ದೀನ್ ಷರೀಫ್, ಸದಸ್ಯರು, ನಗರಸಭೆ, ರಾಮನಗರ

ಕೋಟ್ ................

ಅರ್ಕಾವತಿ ನದಿ ದಂಡೆ ಅಭಿವೃದ್ಧಿ ಹೆಸರಿನಲ್ಲಿ ರಾಘವೇಂದ್ರ ಕಾಲೋನಿ ನಿವಾಸಿಗಳನ್ನು ಬೀದಿ ಪಾಲು ಮಾಡಿದರೆ ನಗರಸಭೆ ಇದ್ದು ಸತ್ತಂತೆ. ಆ ನಿವಾಸಿಗಳು ಕಂದಾಯ ಕಟ್ಟುತ್ತಾ ಬಂದಿದ್ದಾರೆ. ದೇಗುಲ ಮತ್ತು ದರ್ಗಾ ರಾಮನಗರದ ಅಸ್ಮಿತೆಯಾಗಿದ್ದು, ಅವುಗಳನ್ನು ಉಳಿಸಿಕೊಳ್ಳಬೇಕಿದೆ. ಅಭಯ ಆಂಜನೇಯಸ್ವಾಮಿ ದೇಗುಲ ಪಕ್ಕದ ರಸ್ತೆ ಸೇತುವೆ ಬಳಿಯಿಂದ ನದಿ ದಂಡೆ ಅಭಿವೃದ್ಧಿ ಪಡಿಸಲಿ.

- ಸೋಮಶೇಖರ್, ಸದಸ್ಯರು, ನಗರಸಭೆ, ರಾಮನಗರ

ಕೋಟ್ .................

ಪುರಾತನ ಅರ್ಕೇಶ್ವರ ದೇವಾಲಯ, ಐತಿಹಾಸಿಕವಾದ ಪೀರನ್ ಷಾ ವಲಿ ದರ್ಗಾದಿಂದ ರಾಮನಗರದ ಚರಿತ್ರೆ ಪ್ರಾರಂಭವಾಗುತ್ತದೆ. ಹತ್ತಾರು ವರ್ಷಗಳಿಂದ ವಸತಿ ಪ್ರದೇಶದಲ್ಲಿ ಜನರು ಮನೆ ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಇದ್ಯಾವುದಕ್ಕೂ ಧಕ್ಕೆಯಾಗದಂತೆ ಅಭಿವೃದ್ಧಿ ಮಾಡಿದರೆ ಅಭ್ಯಂತರ ಇಲ್ಲ. ಖಾಲಿ ಜಾಗದಿಂದ ನದಿ ದಂಡೆ ಅಭಿವೃದ್ಧಿ ಪಡಿಸುವ ಕೆಲಸ ನಡೆಯಲಿ.

- ಆರೀಫ್ , ಅಧ್ಯಕ್ಷರು, ಸ್ಥಾಯಿ ಸಮಿತಿ, ನಗರಸಭೆ, ರಾಮನಗರ

9ಕೆಆರ್ ಎಂಎನ್ 1.ಜೆಪಿಜಿ

ರಾಮನಗರ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಯಿತು.