ಸಾರಾಂಶ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಜು.16ರಂದು ಬೀದಿ ನಾಯಿಗಳ ಕಾಟಕ್ಕೆ ಜನ ಹೈರಾಣ ಎಂಬ ಶೀರ್ಷಿಕೆಯಡಿ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಗೆ ಎಚ್ಛೆತ್ತ ನಗರಸಭೆಯು ಅವಳಿ ನಗರಾದ್ಯಂತವಿರುವ ಬೀದಿ ನಾಯಿಗಳ ನಿಯಂತ್ರಣಕ್ಕೆ ಮುಂದಾಗಿರುವದು ಅವಳಿ ನಗರದ ಜನತೆಗೆ ನಿರಾಳತೆ ಮೂಡಿಸಿದೆ.ಪೌರಾಯುಕ್ತ ರಮೇಶ ಜಾಧವ ಮಾತನಾಡಿ, ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಲು ಉದ್ದೇಶಿಸಿದ್ದು, ನಗರಸಭೆ ನಿಧಿಯಿಂದ ಹಣ ಭರಿಸಿ ಬೀದಿ ನಾಯಿಗಳನ್ನು ನಿಯಂತ್ರಣಕ್ಕೆ ಕಾರ್ಯಪ್ರವರ್ತರಾಗಿದ್ದು, ಇದೀಗ ಬನಹಟ್ಟಿಯಲ್ಲಿನ ಕೆಲ ಭಾಗಗಳಲ್ಲಿ ಯಶಸ್ವಿಯಾಗಿದೆ. ಇನ್ನುಳಿದ ರಬಕವಿ-ಹೊಸೂರು-ರಾಮಪೂರ ಸೇರಿದಂತೆ ನಗರಸಭೆ ವ್ಯಾಪ್ತಿಯಲ್ಲಿನ ಇನ್ನೂ ನೂರಾರು ಬೀದಿನಾಯಿಗಳ ನಿಯಂತ್ರಣಕ್ಕೆ ಮುಂದಾಗುವಲ್ಲಿ ಹಂತ-ಹಂತವಾಗಿ ಸಿಬ್ಬಂದಿ ಸನ್ನದ್ಧರಾಗಿದ್ದಾರೆಂದರು. ಬೀದಿ ನಾಯಿಗಳಿಗೆ ರೇಬೀಸ್ ಚುಚ್ಚು ಮದ್ದು ಹಾಕುವ ಮೂಲಕ ನಾಯಿ ಕಡಿತದ ಪರಿಣಾಮವನ್ನು ತಗ್ಗಿಸುವ ಕ್ರಮವನ್ನು ನಗರಸಭೆ ಕೈಗೊಂಡಿದೆಯೆಂದರು.
ನಗರಾದ್ಯಂತ ಕತ್ತೆಗಳ ಹಾಗೂ ಬಿಡಾಡಿ ದನಗಳ ಹಾವಳಿಯೂ ಇದ್ದು, ಆಯಾ ಮಾಲೀಕರಿಗೆ ಈಗಾಗಲೇ ತಾಕೀತು ಮಾಡಲಾಗಿದೆ. ನಿರ್ಲಕ್ಷಿಸಿದ್ದಲ್ಲಿ ಅವುಗಳ ಮೇಲೂ ನಿಯಂತ್ರಣ ಹೇರಲಾಗುವುದು. ರಮೇಶ ಜಾಧವ, ಪೌರಾಯುಕ್ತರು, ರಬಕವಿ-ಬನಹಟ್ಟಿರಬಕವಿ-ಬನಹಟ್ಟಿ ನಗರಸಭೆ ವ್ಯಾಪ್ತಿಯಲ್ಲಿನ ದನಗಳ ಆರೋಗ್ಯ ರಕ್ಷಿಸಲು ಸಂತೋಷ ಆಲಗೂರ ನೇತೃತ್ವದ ಟೀಂ ಗೋಸೇವಾ ತಂಡ ಹಗಲಿರುಳು ಶ್ರಮಿಸುತ್ತಿದೆ. ಗೋವುಗಳ ಸಂರಕ್ಷಣೆಗೆ ಮತ್ತು ಸಾಕಾಣಿಕೆಗೆ ಗೋಶಾಲೆ ನಿರ್ಮಿಸಲು ನಗರಸಭೆ ಮತ್ತು ಶಾಸಕರು ಆಸಕ್ತಿ ತೋರಿಸಿ, ರಬಕವಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹತ್ತಿರದ ಜಾಗೆ ನೀಡಿ, ಅನುದಾನ ನೀಡಿ ಅನುಕೂಲ ಕಲ್ಪಿಸಬೇಕು. ವಿನೋದ ಸಿಂದಗಿ. ಜವಳಿ ವರ್ತಕರು, ರಬಕವಿ