ಸಾರಾಂಶ
ಗಂಗಾವತಿ: ಇಲ್ಲಿನ ನಗರಸಭೆಯ 15 ತಿಂಗಳ ಅವಧಿಯ ಅಧಿಕಾರ ಇಬ್ಬರಿಗೆ ಹಂಚಿಕೆ ಹಿನ್ನೆಲೆಯಲ್ಲಿ ನಗರಸಭೆ ಅಧ್ಯಕ್ಷ ಮೌಲಾಸಾಬ್ ಮತ್ತು ಉಪಾಧ್ಯಕ್ಷೆ ಪಾರ್ವತಮ್ಮ ದೊಡ್ಮನಿ ಏ. 3ರಂದು ರಾಜಿನಾಮೆ ನೀಡುವುದು ಖಚಿತವಾಗಿದೆ.
ನಗರಸಭೆಯ ಕೊನೆಯ ಅಧಿಕಾರಾವಧಿ 15 ತಿಂಗಳು ಇರುವುದರಿಂದ ಮೊದಲ ಏಳುವರೇ ತಿಂಗಳ ಅಧಿಕಾರವನ್ನು ಮೌಲಾಸಾಬ್ ಅಧ್ಯಕ್ಷರಾಗಿ, ಪಾರ್ವತಮ್ಮ ದೊಡ್ಮನಿ ಉಪಾಧ್ಯಕ್ಷೆಯಾಗಿ ಅಧಿಕಾರ ವಹಿಸಿದ್ದರು. ಈಗ ಅವಧಿ ಮುಗಿದಿದ್ದರಿಂದ ಅನಿವಾರ್ಯವಾಗಿ ರಾಜಿನಾಮೆ ನೀಡುವ ಪ್ರಸಂಗ ಒದಗಿ ಬಂದಿದೆ. ಈ ಹಿಂದೆ ನಗರಸಭೆಯಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಾ ಬಂದಿತ್ತು. ನಂತರ ಶಾಸಕ ಗಾಲಿ ಜನಾರ್ದನ ರೆಡ್ಡಿ ತಮ್ಮ ಪ್ರಭಾವ ಬೀರಿ ನಗರಸಭೆಯನ್ನು ಬಿಜೆಪಿ ಆಡಳಿತ ತೆಕ್ಕೆಗೆ ತೆಗೆದುಕೊಂಡಿದ್ದರು.ಒಬಿಸಿ-ಬಿಗೆ ಮೀಸಲಾತಿ ಅಧ್ಯಕ್ಷ ಸ್ಥಾನ ಹೊಂದಿದ್ದರಿಂದ ಅಲ್ಪಸಂಖ್ಯಾತರಿಗೆ ಮೊದಲ ಅವಧಿಗೆ ಅಧಿಕಾರ ನೀಡಬೇಕು ಎಂದು ಮೌಲಾಸಾಬ್ ಅವರನ್ನು ಅಧ್ಯಕ್ಷರಾಗಿ, ಪರಿಶಿಷ್ಟ ಜಾತಿ ಮಹಿಳೆ ಮೀಸಲಾತಿಯಲ್ಲಿ ಪಾರ್ವತಮ್ಮ ದೊಡ್ಮನಿ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಶಾಸಕರು ಸೂಚಿಸಿದರು.
ಏ.3 ರಂದು ಅಧ್ಯಕ್ಷ- ಉಪಾಧ್ಯಕ್ಷೆ ರಾಜಿನಾಮೆ:ಕಳೆದ ಏಳುವರೇ ತಿಂಗಳಿನಿಂದ ನಗರಸಭೆ ಅಧ್ಯಕ್ಷ ಸ್ಥಾನ ವಹಿಸಿದ್ದ ಮೌಲಾಸಾಬ್ ಮತ್ತು ಉಪಾಧ್ಯಕ್ಷೆ ಪಾರ್ವತಮ್ಮ ದೊಡ್ಮನಿ ಏ. 3ರಂದು ರಾಜಿನಾಮೆ ನೀಡುವುದು ಬಹುತೇಕವಾಗಿ ಖಚಿತವಾಗಿದೆ ಎನ್ನಲಾಗಿದೆ. ಶಾಸಕ ಗಾಲಿ ಜನಾರ್ದನ ರೆಡ್ಡಿ ಈಗಾಗಲೇ ರಾಜಿನಾಮೆ ನೀಡುವಂತೆ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ರಾಜಿನಾಮೆ ಖಚಿತವಾಗಿದೆ.ತೆರೆಮರೆ ಕಸರತ್ತು: ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಲಾಗುತ್ತದೆ ಎಂದು ಉಳಿದ ಏಳುವರೆ ತಿಂಗಳ ಅಧ್ಯಕ್ಷ ಸ್ಥಾನಕ್ಕೆ ಕೆಲ ಸದಸ್ಯರು ಕಸರತ್ತು ನಡೆಸಿದ್ದಾರೆನ್ನಲಾಗಿದೆ. ಒಬಿಸಿ ಬಿ ಮೀಸಲಾತಿ ಹೊಂದಿರುವ 19ನೇ ವಾರ್ಡ್‌ನ ಅಜಯ್ ಬಿಚ್ಚಾಲಿ, 10ನೇ ವಾರ್ಡ್‌ನ ಪರಶುರಾಮ ಮಡ್ಡೇರ, 2ನೇ ವಾರ್ಡ್‌ನ ಹೀರಾಬಾಯಿ ಮತ್ತು 17ನೇ ವಾರ್ಡ್‌ನ ನೀಲಕಂಠ ಕಟ್ಟಿಮನಿ ಪೈಪೋಟ ನಡೆಸಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ 33ನೇ ವಾರ್ಡ್‌ನ ಪಾರ್ವತಮ್ಮ ಬಾಲಾಜಿ ಚವ್ಹಾಣ ಹೆಸರು ಮುಂಚೂಣಿಯಲ್ಲಿದೆ.
ಇನ್ನು ಏಳುವರೇ ತಿಂಗಳ ಅವಧಿಗಾಗಿ ಅಧ್ಯಕ್ಷ-ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕಾಗಿದ್ದು, ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಮೇಲೆ ಅವಲಂಬಿತವಾಗಿದೆ.ಮೊದಲನೆ ಅವಧಿಯಲ್ಲಿ ನಗರಸಭೆ ಅಧ್ಯಕ್ಷರಾಗುವಂತೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಸೂಚನೆ ನೀಡಿದ್ದರು. ಅದರಂತೆ ಏಳುವರೇ ತಿಂಗಳು ಅವಧಿ ಪೂರ್ಣಗೊಳಿಸಿದ್ದೇನೆ. ಶಾಸಕರು ರಾಜಿನಾಮೆ ನೀಡಬೇಕೆಂದು ಸೂಚನೆ ನೀಡಿದರೆ ರಾಜಿನಾಮೆ ನೀಡುತ್ತೇನೆ. ನೀವು ಮುಂದುವರೆಯಿರಿ ಎಂದು ಹೇಳಿದರೆ ಅದಕ್ಕೂ ಸಿದ್ಧ ಎಂದು ನಗರಸಭೆ ಅಧ್ಯಕ್ಷೆ ಮೌಲಾಸಾಬ್ ಹೇಳಿದರು.