ಎಸ್‌ಎಫ್‌ಸಿ ಅನುದಾನದಲ್ಲಿ ವೇತನಕ್ಕೆ ಅನುದಾನ ಬಿಡುಗಡೆಗೆ ನಗರಸಭೆ ಮನವಿ

| Published : Apr 30 2025, 12:36 AM IST

ಎಸ್‌ಎಫ್‌ಸಿ ಅನುದಾನದಲ್ಲಿ ವೇತನಕ್ಕೆ ಅನುದಾನ ಬಿಡುಗಡೆಗೆ ನಗರಸಭೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಹಣಕಾಸು ಆಯೋಗ ಎಸ್‌ಎಫ್‌ಸಿ ನಿಧಿಯಿಂದ ಕಾಯಂ ನೌಕರರಿಗೆ ವೇತನ ಅನುದಾನ ಬಿಡುಗಡೆ ಮಾಡುವಂತೆ ವಿಶೇಷ ನೇಮಕಾತಿಯಡಿ ನೇಮಕಗೊಂಡಿರುವ ಪೌರ ಕಾರ್ಮಿಕರಿಗೂ ಎಸ್‌ಎಫ್‌ಸಿ ನಿಧಿಯಿಂದಲೇ ವೇತನ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಶಿಫಾರಸು ಮಾಡಲು ಕೋರಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರಸಭೆಯಲ್ಲಿ ಪೌರ ಕಾರ್ಮಿಕರ ನೇಮಕಾತಿ (ವಿಶೇಷ) ನಿಯಮಗಳು ೨೦೨೨ರಡಿಯಲ್ಲಿ ಒಟ್ಟು ೨೫ ಮಂದಿ ನೇಮಕಗೊಂಡಿದ್ದು, ಈ ನೌಕರರಿಗೆ ೨೦೨೫-೨೬ನೇ ಸಾಲಿಗೆ ವೇತನ ಪಾವತಿಸಲು ಒಟ್ಟು ೧.೩೭ ಕೋಟಿ ರು. ಅನುದಾನದ ಅವಶ್ಯಕತೆ ಇದೆ. ಈವರೆಗೂ ನೌಕರರಿಗೆ ಎಸ್‌ಎಫ್‌ಸಿ ಅನುದಾನದಲ್ಲಿ ಅವಶ್ಯಕವಾದ ವೇತನ ಅನುದಾನವನ್ನು ಬಿಡುಗಡೆಗೊಳಿಸಿಲ್ಲ. ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ವಿಶೇಷ ನೇಮಕಾತಿಯಡಿ ನೇಮಕಗೊಂಡಿರುವ ಪೌರ ಕಾರ್ಮಿಕರಿಗೆ ಎಸ್‌ಎಫ್‌ಸಿ ಮುಕ್ತ ನಿಧಿಯಿಂದ ಹಾಗೂ ಹೆಚ್ಚುವರಿ ಆರ್ಥಿಕ ಪರಿಣಾಮಗಳನ್ನು ನಗರ ಸ್ಥಳೀಯ ಸ್ವಂತ ನಿಧಿಯಿಂದ ಪಾವತಿಸಬೇಕೆಂದು ನಿರ್ದೇಶಿಸಿದ್ದಾರೆ.ಆದರೆ, ನಗರ ಸ್ಥಳೀಯ ಸಂಸ್ಥೆಗಳ ಸ್ವಂತ ನಿಧಿಯಿಂದ ವೇತನ ಪಾವತಿಸುವುದು ಕಷ್ಟಕರವಾಗಿದೆ. ಆದ್ದರಿಂದ ರಾಜ್ಯ ಹಣಕಾಸು ಆಯೋಗ ಎಸ್‌ಎಫ್‌ಸಿ ನಿಧಿಯಿಂದ ಕಾಯಂ ನೌಕರರಿಗೆ ವೇತನ ಅನುದಾನ ಬಿಡುಗಡೆ ಮಾಡುವಂತೆ ವಿಶೇಷ ನೇಮಕಾತಿಯಡಿ ನೇಮಕಗೊಂಡಿರುವ ಪೌರ ಕಾರ್ಮಿಕರಿಗೂ ಎಸ್‌ಎಫ್‌ಸಿ ನಿಧಿಯಿಂದಲೇ ವೇತನ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಶಿಫಾರಸು ಮಾಡಲು ಕೋರಿದೆ.

ಮಂಡ್ಯ ನಗರಸಭೆ ಗ್ರೇಡ್-೧ ನಗರಸಭೆಯಾಗಿದ್ದು, ನಗರ ವ್ಯಾಪ್ತಿಯಲ್ಲಲಿ ಸಾರ್ವಜನಿಕ ಸೇವೆಗಳಾದ ಸ್ವಚ್ಛತೆ ನಿರ್ವಹಣೆ, ಆಸ್ತಿಹಕ್ಕು ಬದಲಾವಣೆ, ನಮೂನೆ-೩ ವಿತರಣೆ, ತೆರಿಗೆ ವಸೂಲಾತಿ, ಅಂಗಡಿ ಮಳಿಗೆಗಳ ಬಾಡಿಗೆ ವಸೂಲಾತಿ ಸೇರಿದಂತೆ ಇನ್ನಿತರ ಸೇವೆಗಳನ್ನು ಸಮರ್ಪಕವಾಗಿ ನೀಡಲು ಸಿಬ್ಬಂದಿ ಕೊರತೆ ಇರುವುದರಿಂದ ವಿಳಂಬವಾಗುತ್ತಿದೆ. ಆದ್ದರಿಂದ ಖಾಲಿ ಇರುವ ೬೨ ಸಿ ಹುದ್ದೆಗಳು ಮತ್ತು ೨೦೨ ಡಿ ವೃಂದದ ಹುದ್ದೆಗಳನ್ನು ಭರ್ತಿ ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಕೋರಲಾಗಿದೆ.

ನಗರಸಭೆಯಲ್ಲಿ ೧೫ ವರ್ಷಗಳಿಂದ ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದ ಮೇಲೆ ಸೀನಿಯರ್ ಪ್ರೋಗ್ರಾಮರ್, ಡಾಟಾ ಎಂಟ್ರಿ ಆಪರೇಟರ್‌ಗಳು, ವಾಹನ ಚಾಲಕರು, ಬೀದಿ ದೀಪ ಸಹಾಯಕರು, ಲೋಡರ್ಸ್, ಗಾರ್ಡ್‌ನರ್‌ಗಳು, ಸ್ಯಾನಿಟರಿ ಸೂಪರ್‌ವೈಸರ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಸೇವೆ ಅವಶ್ಯಕವಾಗಿದ್ದು, ಇವರನ್ನು ಖಾಯಂ, ನೇರಪಾವತಿಯಡಿಗೆ ಒಳಪಡಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಕೋರಿದೆ.

ಶಂಕರ ಬಿದರಿ ಆದೇಶ ವಾಪಸ್ ಸ್ವಾಗತಾರ್ಹ

ಕನ್ನಡಪ್ರಭ ವಾರ್ತೆ ಮಂಡ್ಯ

ಬಸವೇಶ್ವರರ ಜಯಂತಿ ಜೊತೆಯಲ್ಲಿ ರೇಣುಕಾಚಾರ್ಯರ ಜಯಂತಿ ಆಚರಿಸಬೇಕೆಂಬ ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಬಿದರಿ ಅವರ ಆದೇಶವನ್ನು ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹಿಂಪಡೆದಿರುವುದು ಸ್ವಾಗತಾರ್ಹ ಎಂದು ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಂ.ಎಸ್.ಮಂಜುನಾಥ್ ತಿಳಿಸಿದರು.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಬಿದರಿ ಅವರ ಆದೇಶ ಗೊಂದಲ ಸೃಷ್ಟಿಸಿದ್ದು, ಶಾಮನೂರು ಶಿವಶಂಕರಪ್ಪ ಅವರ ಆದೇಶದಿಂದಾಗಿ ಗೊಂದಲ ನಿವಾರಿಸಿದಂತಾಗಿದೆ ಎಂದರು.

ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಬಸವಣ್ಣನವರ ಭಾವಚಿತ್ರ ಅಳವಡಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದರೂ ಜಿಲ್ಲಾ ಪಂಚಾಯ್ತಿ, ಪೊಲೀಸ್ ಠಾಣೆಗಳು ಹಾಗೂ ಇತರೆ ಸರ್ಕಾರಿ ಕಚೇರಿಗಳಲ್ಲಿ ಪಾಲನೆಯಾಗುತ್ತಿಲ್ಲ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ಬಸವ ಜಯಂತಿ ಆಚರಿಸಲು ಮುಂದಾಗಿದ್ದು, ನೂತನ ಸಂಸತ್ ಭವನದ ಮುಂದೆ ಬಸವೇಶ್ವರರ ಪುತ್ಥಳಿ ಸ್ಥಾಪನೆ ಮಾಡುವಂತೆ ಆಗ್ರಹಿಸಿದರು.

ಬಸವ ಜಯಂತಿಯ ಪೂರ್ವಭಾವಿ ಸಭೆಗೆ ಎಲ್ಲಾ ಸಮುದಾಯದವರನ್ನು ಆಹ್ವಾನಿಸಬೇಕಿತ್ತು. ಆದರೆ ಒಂದು ಸಮುದಾಯದ ಸಂಘಟನೆಗಳ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿ ಲೋಪವೆಸಗಿದ ಕಾರಣ ಮರು ಆಹ್ವಾನ ಪತ್ರಿಕೆ ಮುದ್ರಿಸಲಾಗಿದೆ. ಜಿಲ್ಲಾಡಳಿತ ಎಲ್ಲ ಧರ್ಮೀಯರು, ಸಂಘಟನೆಗಳನ್ನು ಒಗ್ಗೂಡಿಸಿ ಬಸವ ಜಯಂತಿ ಆಚರಿಸಲು ಮುಂದಾಗಬೇಕು. ಬಸವ ಜಯಂತಿ ಸಂಬಂಧ ಮೆರವಣಿಗೆ ರದ್ದುಗೊಳಿಸಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಹಾಸಭಾದ ಉಪಾಧ್ಯಕ್ಷ ಶಿವಲಿಂಗಪ್ಪ, ಪ್ರಧಾನ ಕಾರ್ಯದರ್ಶಿ ಎಚ್.ವಿ.ಶಿವರುದ್ರಪ್ಪ, ಮಲ್ಲಿಕಾರ್ಜುನಪ್ಪ ಅಮ್ಜದ್ ಪಾಷಾ ಇತರರು ಗೋಷ್ಠಿಯಲ್ಲಿದ್ದರು.