ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ನಗರಸಭೆಯ ಕಾರ್ಯ ವೈಖರಿಯನ್ನು ಖಂಡಿಸಿ ಜೆಡಿಎಸ್, ಬಿಜೆಪಿ ಕಾರ್ಯಕರ್ತರು ನಗರಸಭಾ ಆವರಣದಲ್ಲಿ ಜೆಡಿಎಸ್ ಮುಖಂಡ ಸಂತೋಷ್ ಹಾಗೂ ಮಾಜಿ ನಗರಸಭಾ ಅಧ್ಯಕ್ಷ ಗಿರೀಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ಇದನ್ನು ವಿರೋಧಿಸಿ ನಗರಸಭಾ ಅಧ್ಯಕ್ಷ ಸಮೀವುಲ್ಲಾ ಮತ್ತು ಅವರ ಬೆಂಬಲಿಗರು ಪ್ರಶ್ನಿಸಲು ಬಂದಾಗ ಎರಡು ಗುಂಪಿನ ನಡುವೆ ಕೈ ಕೈ ಮಿಲಾಯಿಸಿ ಪರಸ್ಪರ ಆರೋಪ ಪ್ರತ್ಯಾರೋಪ ನಡೆಸಿದರು.ಪೊಲೀಸರು ಸಕಾಲಕ್ಕೆ ಮಧ್ಯ ಪ್ರವೇಶಿಸಿ ಎರಡು ಗುಂಪನ್ನು ಬೇರ್ಪಡಿಸಿದರಾದರೂ ಕಾಂಗ್ರೆಸ್ ಬೆಂಬಲಿಗರು ಅವಾಚ್ಯ ಶಬ್ಧಗಳಿಂದ ಜೆಡಿಎಸ್ ಮುಖಂಡರನ್ನು ನಿಂದಿಸಿದರು. ಆನಂತರ ಪ್ರತ್ಯೇಕವಾಗಿ ಎರಡು ಗುಂಪಿನವರು ನಗರಸಭೆಯ ಎರಡೂ ಬದಿಯಲ್ಲಿ ನಡೆಸಿದ ಪ್ರತಿಭಟನೆಗೆ ನಗರಸಭೆ ಸಾಕ್ಷಿಯಾಯಿತು.
ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಹರಿತ ನಗರ ಇನ್ಸ್‌ಪೆಕ್ಟರ್ ರಾಘವೇಂದ್ರ ತಕ್ಷಣವೇ ಸ್ಥಳಕ್ಕೆ ಹೆಚ್ಚುವರಿ ಪೊಲೀಸರನ್ನು ಕರೆಸಿಕೊಂಡು ಎರಡೂ ಗುಂಪಿಗೂ ಬಿಗಿ ಭದ್ರತೆ ನೀಡಿದರಲ್ಲಿದೆ, ಸಂಜೆ 6 ಗಂಟೆಯಾದರೂ ಪ್ರತಿಭಟನೆ ಮುಂದುವರಿಯುತ್ತಿರುವುದನ್ನು ಅರಿತು ಎರಡೂ ಗುಂಪಿನ ನಡುವೆ ಮಾತುಕತೆ ನಡೆಸಿ, ಜೆಡಿಎಸ್, ಬಿಜೆಪಿ ಪ್ರತಿಭಟನಕಾರರ ಆರೋಪಗಳಿಗೆ ಮೇಲಾಧಿಕಾರಿಗಳಿಂದ ಸೂಕ್ತ ತನಿಖೆ ನಡೆಸುವ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.ಜೆಡಿಎಸ್ ಮುಖಂಡ ಎನ್.ಆರ್ ಸಂತೋಷ್ ಬಸವೇಶ್ವರ ವೃತ್ತದಲ್ಲಿ ಅಭಿಮಾನಿಗಳು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಮಂಗಳವಾರ ಅರಸೀಕೆರೆ ಸ್ವಯಂಪ್ರೇರಿತ ಬಂದ್‌ಗೆ ಕರೆ ನೀಡಿದರು.
ಇದಕ್ಕೂ ಮೊದಲು ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಜೆಡಿಎಸ್ ಮುಖಂಡ ಎನ್.ಆರ್ ಸಂತೋಷ್ ಹೌಸಿಂಗ್ ಫಾರ್ ಹಾಲ್ ಯೋಜನೆಯಲ್ಲಿ ಶಾಸಕರು ಕಬ್ಬಿಣ, ಸಿಮೆಂಟ್ ಇಟ್ಟಿಗೆ, ಎಂಸ್ಯಾಂಡ್ ಮಾಡಿ ಅವರ ತಿಜೋರಿ ತುಂಬಿಕೊಂಡರೇ ಹೊರತು ಬಡವರಿಗೆ ಮನೆ ಸಿಕ್ಕಿಲ್ಲ. ಈ ಹಣದಲ್ಲಿ ಅವರ ಮಗಳ ಹೆಸರಿನಲ್ಲಿ 20 ಎಕರೆ ಜಮೀನನ್ನು ಖರೀದಿಸಿದ್ದಾರೆ ಎಂದು ದೂರಿದರು.ಹೊಸ ಬಡಾವಣೆಗಳಿಗೆ ಸಂಬಂಧಿಸಿದಂತೆ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗದೆ ಈ ಖಾತೆ ಮಾಡುವಂತಿಲ್ಲ ಎಂದು ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆಯಾದರೂ ನಿಯಮಗಳನ್ನು ಗಾಳಿಗೆ ತೂರಿ ಈ ಖಾತೆ ಮಾಡುವ ಮೂಲಕ ಜಾದು ಮಾಡಲಾಗುತ್ತಿದೆ ಎಂದು ಸಂತೋಷ್ ಹೇಳುತ್ತಿದ್ದಂತೆ, ನಗರಸಭೆ ಒಳಗಿನಿಂದ ಹೊರ ಬಂದ ಅಧ್ಯಕ್ಷ ಸಮೀವುಲ್ಲಾ ಮತ್ತು ಬೆಂಬಲಿಗರು ಯಾವ ಮ್ಯಾಜಿಕ್ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಎರಡೂ ಬೆಂಬಲಿಗರ ನಡುವ ಮಾರಾಮಾರಿ ನಡೆದು ಪರಸ್ಪರ ಆರೋಪ-ಪ್ರತ್ಯಾರೋಪಗಳಿಗೆ ನಗರಸಭೆ ವೇದಿಕೆಯಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್‌ನ ಕೆಲ ಕಾರ್ಯಕರ್ತರು ಗಿರೀಶ್ ಹಾಗೂ ಸಂತೋಷ್ ಅವರನ್ನು ಪೊಲೀಸರ ಎದುರೇ ನಿಂದಿಸತೊಡಗಿದರು.
ಪೊಲೀಸರು ಈ ಗೊಂದಲವನ್ನು ನಿವಾರಿಸಲು ಹರಸಹಾಸ ಪಟ್ಟು ತಹಬದಿಗೆ ತಂದರಾದರೂ, ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ದೌರ್ಜನ್ಯವನ್ನು ವಿರೋಧಿಸಿ ನಗರಸಭೆಯ ಒಂದು ಬದಿಯಲ್ಲಿ ಪ್ರತಿಭಟನೆ ನಡೆಸಿದರೆ ಕಾಂಗ್ರೆಸ್‌ನ ಕಾರ್ಯಕರ್ತರು ಇನ್ನೊಂದು ಬದಿಯಲ್ಲಿ ಪ್ರತಿಭಟನೆ ನಡೆಸಿದರು.ಈ ಘಟನೆಯ ನಂತರ ಎರಡೂ ಕಡೆಯವರು ತಮ್ಮ ಬೆಂಬಲಿಗರಿಗೆ ದೂರವಾಣಿ ಕರೆ ಮಾಡುವ ಮೂಲಕ ತಮ್ಮ ಬೆಂಬಲಿಗರನ್ನು ಕರೆಸಿಕೊಂದು ಕ್ಷಣ-ಕ್ಷಣಕ್ಕೂ ಪರಿಸ್ಥಿತಿ ಬಿಗಡಾಯಿಸುತ್ತಾ ಹೋಯಿತು. ಪೊಲೀಸರು ಕೂಡ ಮುಂಜಾಗ್ರತೆಯಿಂದ ಗ್ರಾಮಾಂತರ ಪೊಲೀಸರನ್ನು ಕರೆಸಿಕೊಂಡು ಪರಿಸ್ಥತಿ ವಿಕೋಪಕ್ಕೆ ಹೋಗದಂತೆ ತಡೆಯುವಲ್ಲಿ ಯಶಸ್ವಿಯಾದರು.
ಜೆಡಿಎಸ್, ಬಿಜೆಪಿ ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯರಾದ ಸುಜಾತ ರಮೇಶ್, ಶ್ವೇತಾ ರಮೇಶ್, ಅಭಿರಾಮಿ, ಮುಖಂಡರಾದ ಶಿವನ್ ರಾಜ್,ಹರ್ಷವರ್ಧನ್, ಮಂಜುನಾಥ್ ಕೈಕು, ಪವನ್ ಸೇರಿದಂತೆ ಮತ್ತು ಇತರರು ಉಪಸ್ಥಿತರಿದ್ದರು. ಕಾಂಗ್ರೆಸ್ ಪ್ರತಿಭಟನೆಯಲ್ಲಿ ಜಿ.ಟಿ ಗಣೇಶ್ ಸೇರಿದಂತೆ ನಗರಸಭಾ ಸದಸ್ಯರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.