ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಒತ್ತುವರಿ ತೆರವುಗೊಳಿಸುವಂತೆ ಸದಸ್ಯರು ಸೂಚಿಸಿದರೂ ಪುರಸಭೆ ಅಧಿಕಾರಿಗಳು ನಮ್ಮ ಮಾತಿಗೆ ಕಿಂಚಿತ್ತು ಗೌರವ ಕೊಡುತ್ತಿಲ್ಲ. ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ತೀರ್ಮಾನವಾದ ಈ ಹಿಂದಿನ ನಡಾವಳಿಗಳು ಅನುಷ್ಠಾನಗೊಳ್ಳುತ್ತಿಲ್ಲ ಎಂದು ಆರೋಪಿಸಿ ಪುರಸಭಾ ಸದಸ್ಯರಾದ ಪಾರ್ಥಸಾರಥಿ ಹಾಗೂ ಶಿವಕುಮಾರ ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿ ಹೊರನಡೆದರು.ಪಟ್ಟಣದ ಪುರಸಭೆ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಅಧ್ಯಕ್ಷೆ ಜ್ಯೋತಿಲಕ್ಷ್ಮೀ ಬಾಬು ಅಧ್ಯಕ್ಷತೆಯಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಶನಿವಾರ ನಡೆದ ಸಭೆಯಲ್ಲಿ ಸದಸ್ಯ ಪಾರ್ಥಸಾರಥಿ ವಿಷಯವಾರು ವಿಚಾರ ಪ್ರಸ್ತಾಪಿಸಿದರು.
ಪಟ್ಟಣದ ನಿವಾಸಿ ಜಿತೇಂದ್ರಕುಮಾರ ಮೆಹ್ತಾ ಎಂಬುವವರು ಪ್ರಮುಖ ರಸ್ತೆಯಲ್ಲಿ ಪುರಸಭೆಗೆ ಸೇರಿದ 6*19 ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇದನ್ನು ತೆರವುಗೊಳಿಸಲು ಕಳೆದ 2022ರ ನ.9 ರಂದು ವಿಷಯ 33/2ರಲ್ಲಿ ಚರ್ಚಿಸಿ ತೀರ್ಮಾನಿಸಲಾಗಿತ್ತು. ಆದರೂ, ಪುರಸಭೆ ಅಧಿಕಾರಿಗಳು ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ತೀರ್ಮಾನವಾದ ವಿಚಾರಗಳು ಕಾರ್ಯ ರೂಪಕ್ಕೆ ಬರಲಿಲ್ಲವೆಂದರೆ ನಾವು ಸಭೆಯಲ್ಲಿ ಏತಕ್ಕಾಗಿ ಮಾತನಾಡಬೇಕು ಎಂದು ಪ್ರಶ್ನೆ ಮಾಡಿದರು.ಇನ್ನೆರೆಡು ತಿಂಗಳಲ್ಲಿ ಪುರಸಭೆ ಆಡಳಿತ ಮಂಡಳಿ ಅವಧಿ ಮುಕ್ತಾಯಗೊಳ್ಳುತ್ತಿದೆ. ಇದು ನನ್ನ ವಿದಾಯ ಭಾಷಣ ಎಂದು ಭಾವಿಸಿದರೂ ಸರಿಯೇ. ಮುಂದೆ ಯಾರು ಗೆದ್ದು ಬರುತ್ತಾರೆ ಗೊತ್ತಿಲ್ಲ. ಅಧಿಕಾರಿಗಳ ನಡೆಯಿಂದ ನನಗೆ ಬೇಸರವಾಗಿದೆ ಎಂದು ಸಭೆಯಿಂದ ಹೊರನಡೆದರು. ಇವರ ಹಿಂದೆ ಮತ್ತೊಬ್ಬ ಸದಸ್ಯ ಶಿವಕುಮಾರ್ ಕೂಡ ಸಭೆ ಬಹಿಷ್ಕರಿಸಿದರು.
ಪುರಸಭೆ ಸದಸ್ಯ ಯಶವಂತಕುಮಾರ್ ಮಾತನಾಡಿ, ಪಟ್ಟಣದ ಪೌರ ಕಾರ್ಮಿಕರ ಕಾಲೋನಿಯಲ್ಲಿ ಪೌರ ಕಾರ್ಮಿಕರಿಗಾಗಿ ನಿರ್ಮಿಸುತ್ತಿರುವ 25*35 ಅಳತೆಯ ಆರು ವಸತಿ ಗೃಹಗಳಿಗೆ 1.60 ಕೋಟಿ ರು. ಅಂದಾಜಿಸಿ ನಕ್ಷೆ ತಯರಿಸಲಾಗಿದೆ. ಇದರಂತೆ ಒಂದು ಮನೆಗೆ 26 ಲಕ್ಷ ರು. ವಿನಿಯೋಗಿಸಲಾಗುತ್ತಿದೆ. 8.75 ಚದರ ಅಳತೆಯ ಒಂದು ಮನೆ ನಿರ್ಮಿಸಲು ಇಷ್ಟೊಂದು ದೊಡ್ಡ ಮೊತ್ತ ಬೇಕಾ ಎಂದು ಪ್ರಶ್ನಿಸಿದರು.ರಸ್ತೆ ಇಲ್ಲದೆ ಇರುವ 28 ನಿವೇಶನಗಳಿಗೆ ಒಂದೇ ಪಿಐಡಿ ನಂಬರ್ ಕೊಡಲಾಗಿದೆ. ಇಷ್ಟೊಂದು ಅಕ್ರಮ ನಡೆಸಿರುವ ಈ ಹಿಂದಿನ ಕಂದಾಯ ಅಧಿಕಾರಿ ಮಹದೇವಸ್ವಾಮಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಅವರಿಗೆ ನೋಟಿಸ್ ಜಾರಿ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದಕ್ಕುತ್ತರಿಸಿದ ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್, ಹಲವು ವಿಚಾರಗಳಲ್ಲಿ ಅಕ್ರಮ ಎಸಗಿರುವ ಮಹದೇವಸ್ವಾಮಿ ಅವರಿಗೆ ಈಗಾಗಲೇ ಎರಡು ಬಾರಿ ನೋಟಿಸ್ ಜಾರಿ ಮಾಡಲಾಗಿದೆ. ಅದಕ್ಕೆ ಅವರು ಉತ್ತರ ನೀಡಿಲ್ಲ. ಅವರು ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದರು.ನಾಲೆಗೆ ತಡೆಗೋಡೆ ನಿರ್ಮಿಸಿ:
ಸದಸ್ಯ ಚಂದ್ರು ಮಾತನಾಡಿ, ಪಟ್ಟಣದ ಮಧ್ಯ ಭಾಗದಲ್ಲಿ ಹಾದು ಹೋಗಿರುವ ವಿಸಿ ನಾಲೆ ಇಕ್ಕೆಲಗಳಲ್ಲಿ ತಡೆಗೋಡೆ ನಿರ್ಮಿಸುವಂತೆ ಹಿಂದಿನಿಂದಲೂ ಒತ್ತಾಯಿಸಲಾಗುತ್ತಿದೆ. ಆದರೆ, ಯಾವುದೇ ಅಗತ್ಯ ಕ್ರಮವಾಗಿಲ್ಲ. ಶಾಲಾ ಮಕ್ಕಳು ಸೇರಿದಂತೆ ನೂರಾರು ಜನ ಪ್ರತಿನಿತ್ಯ ನಾಲೆ ಏರಿ ಮೇಲೆ ಓಡಾಡುತ್ತಾರೆ. ಏನಾದರೂ ಅನಾಹುತ ಸಂಭವಿಸಿದದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.ಮಹಾತ್ಮಗಾಂಧಿ ಬಡಾವಣೆಯ ಎಬಿಸಿ ಬ್ಲಾಕ್‌ಗಳನ್ನು ಸರ್ವೇ ಮಾಡಿಸಿ ಅಲೆಮಾರಿ(ಹಂದಿ ಜೋಗಿ) ಜನಾಂಗದವರಿಗೆ ತಕ್ಷಣ ಹಕ್ಕು ಪತ್ರ ವಿತರಿಸಬೇಕು ಎಂದು ಒತ್ತಾಯಿಸಿದರು.
ಸದಸ್ಯ ಆರ್.ಸೋಮಶೇಖರ್ ಮಾತನಾಡಿ, ಪಟ್ಟಣದ ಪೌರ ಕಾರ್ಮಿಕರ ಕಾಲೋನಿಯ ಪುರಸಭೆಗೆ ಸೇರಿದ ಜಾಗದಲ್ಲಿ ವಸತಿ ಗೃಹ ನಿರ್ಮಿಸಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕು. ಪೌರ ಕಾರ್ಮಿಕರ ಮನವಿಯಂತೆ ಇಲ್ಲಿ ನಿವೇಶನ ಹಂಚಲು ಸಾಧ್ಯವಿಲ್ಲ ಎಂದರು.ಈ ಜಾಗದಲ್ಲಿ ವಸತಿ ಗೃಹ ನಿರ್ಮಿಸುವುದ್ದರಿಂದ ಈ ಜಾಗ ಪುರಸಭೆ ಆಸ್ತಿಯಾಗಿಯೇ ಉಳಿಯುತ್ತದೆ. ಮನೆ, ನಿವೇಶನ ಇರುವವರು ಕೂಡ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ನಿವೇಶನ ಹಂಚಿಕೆ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ನಾನು ಲಾಭಕ್ಕಾಗಿ ಕೆಲಸ ಮಾಡುತ್ತಿಲ್ಲ ಎಂದು ತಿಳಿಸಿದರು.
ಖಾಸಗಿಯರಿಗೆ ಅನುಕೂಲ ಮಾಡಿಕೊಡಲು 30 ಅಡಿ ರಸ್ತೆ ಬಿಟ್ಟು ವಸತಿ ಗೃಹ ನಿರ್ಮಾಣ ಮಾಡಲಾಗುತ್ತಿದೆ ಎಂದು ಪೌರ ಕಾರ್ಮಿಕರು ಆರೋಪಿಸಿದ್ದಾರೆ. ಇದು ಆಡಳಿತ ಮಂಡಳಿಗೆ ಮಾಡಿದ ಅಪಮಾನ. ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಪಟ್ಟಣದ ವಿವಿಧ ಬಡಾವಣೆಯ ರಸ್ತೆ ಡಾಂಬರೀಕರಣ ಕೆಲಸ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಕೆಲಸ ಪೂರ್ಣಗೊಳಿಸಿಲ್ಲ. ಈ ಬಗ್ಗೆ ಹಲವು ಸೂಚನೆ ನೀಡಿದರೂ ಇದಕ್ಕೆ ಸ್ಪಂಧಿಸಿಲ್ಲ. ಗುತ್ತಿಗೆದಾರರ ವರ್ತನೆ ಹೀಗೆ ಮುಂದುವರೆದರೆ ಕಪ್ಪು ಪಟ್ಟಿಗೆ ಸೇರಿಸಲು ಅಗತ್ಯ ಕ್ರಮ ವಹಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ಮಾಡುತ್ತಿರುವವರಿಗೆ ಸೂಕ್ತ ಸ್ಥಳ ಗುರುತಿಸಿ ಅಲ್ಲಿಗೆ ಸ್ಥಳಾಂತರಿಸಲು ಆಲೋಚಿಸಲಾಗುತ್ತಿದೆ. ಪಟ್ಟಣದ ಕೆಲವೆಡೆ ಸರ್ಕಾರಿ ಜಾಗ ಕಬಳಿಕೆಯಾಗಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಇದನ್ನು ಸರ್ಕಾರದ ಗಮನಕ್ಕೆ ತಂದು ತನಿಖೆ ನಡೆಸಲಾಗುವುದು ಎಂದರು.ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷ ಎಲ್.ಅಶೋಕ್, ಮುಖ್ಯಾಧಿಕಾರಿ ಸತೀಶ್ ಕುಮರ್, ಪುರಸಭೆ ಸದಸ್ಯರಾದ ಎಂ.ಗಿರೀಶ್, ಎ.ಅಣ್ಣಯ್ಯ, ಮುರುಳೀಧರ್, ಹಾರೋಹಳ್ಳಿ ರಮೇಶ್, ಉಮಾಶಂಕರ್, ಜಯಲಕ್ಷ್ಮಮ್ಮ, ಸುನೀತಾ, ಸರಸ್ವತಿ, ಗೀತಾ ಅರ್‍ಮುಗಂ, ಶಿವಣ್ಣ ಇತರರು ಇದ್ದರು.