ಬೇಲೂರಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪುರಸಭೆ ಅಧ್ಯಕ್ಷರ ಆಗ್ರಹ

| Published : Feb 01 2025, 12:00 AM IST

ಬೇಲೂರಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪುರಸಭೆ ಅಧ್ಯಕ್ಷರ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದ ಜಾಗವನ್ನು ಗುರುತಿಸಿ ಅಭಿವೃದ್ಧಿಪಡಿಸಲು ಸಿದ್ಧ ಎಂದು ಪ್ರವಾಸೋದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿ ಸಲ್ಮಾ ಕೆ. ಪಾಹಿಮಾ ಹೇಳಿದರು. ಶುಕ್ರವಾರ ಬೇಲೂರು ದೇವಸ್ಥಾನಕ್ಕೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಇಲಾಖೆಗೆ ಸಂಬಂಧಿಸಿದ ಜಾಗಗಳನ್ನು ಗುರುತಿಸಿ ಬೇಲೂರು ದೇವಸ್ಥಾನ ವಿಶ್ವ ಪರಂಪರೆ ಪಟ್ಟಿಗೆ ಸೇರಿರುವುದರಿಂದ ಪ್ರವಾಸಿಗರು ಹೆಚ್ಚು ಬರುತ್ತಾರೆ. ಅವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು, ದೇವಸ್ಥಾನದ ಸುತ್ತಮುತ್ತ ಸ್ವಚ್ಛತೆಗೆ ಆದ್ಯತೆ ಕೊಡಬೇಕು ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು

ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದ ಜಾಗವನ್ನು ಗುರುತಿಸಿ ಅಭಿವೃದ್ಧಿಪಡಿಸಲು ಸಿದ್ಧ ಎಂದು ಪ್ರವಾಸೋದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿ ಸಲ್ಮಾ ಕೆ. ಪಾಹಿಮಾ ಹೇಳಿದರು.

ಶುಕ್ರವಾರ ಬೇಲೂರು ದೇವಸ್ಥಾನಕ್ಕೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಇಲಾಖೆಗೆ ಸಂಬಂಧಿಸಿದ ಜಾಗಗಳನ್ನು ಗುರುತಿಸಿ ಬೇಲೂರು ದೇವಸ್ಥಾನ ವಿಶ್ವ ಪರಂಪರೆ ಪಟ್ಟಿಗೆ ಸೇರಿರುವುದರಿಂದ ಪ್ರವಾಸಿಗರು ಹೆಚ್ಚು ಬರುತ್ತಾರೆ. ಅವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು, ದೇವಸ್ಥಾನದ ಸುತ್ತಮುತ್ತ ಸ್ವಚ್ಛತೆಗೆ ಆದ್ಯತೆ ಕೊಡಬೇಕು. ಬೇಲೂರಿನಲ್ಲಿ ಪ್ರವಾಸೋದ್ಯಮಕ್ಕೆ ಸೇರಿದ ಜಾಗಗಳನ್ನು ಗುರುತಿಸಿ ಅಲ್ಲಿ ಏನೇನೂ ಅಭಿವೃದ್ಧಿ ಮಾಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತದೆ. ಅದಕ್ಕೋಸ್ಕರ ದೇವಸ್ಥಾನದ ದಾಖಲಾತಿಗಳನ್ನು ಪರಿಶೀಲನೆ ಮಾಡಲಾಗುತ್ತದೆ. ದೇವಸ್ಥಾನದ ಮುಂಭಾಗದಲ್ಲಿ ವಾಹನ ಶುಲ್ಕ ವಸೂಲಿಯಲ್ಲಿ ಗೊಂದಲವಿದ್ದು ಈಗಾಗಲೇ ನ್ಯಾಯಾಲಯದಲ್ಲಿದ್ದು ಯಥಾಸ್ಥಿತಿ ಕಾಪಾಡಿಕೊಳ್ಳಲು ಸೂಚಿಸಿದೆ. ಅಲ್ಲದೆ ಶುಲ್ಕ ವಸೂಲಿ ಬಗ್ಗೆ ಕೋರ್ಟ್ ಸೂಚಿಸಿಲ್ಲ. ಕೋರ್ಟ್ ದಿನಾಂಕ ಬರುವ ತನಕ ಕಾಪಾಡಿಕೊಳ್ಳಲು ಸೂಚಿಸಲಾಗುತ್ತದೆ, ಯಾವುದೇ ಒತ್ತುವರಿಯಾಗಿದ್ದರೆ ತೆರವುಗೊಳಿಸಲಾಗುತ್ತದೆ ಎಂದರು.

ಪುರಸಭೆ ಅಧ್ಯಕ್ಷ ಎ ಆರ್‌ ಅಶೋಕ್ ಮಾತನಾಡಿ, ದೇವಸ್ಥಾನದ ಮುಂದೆ ಪ್ರತಿ ವರ್ಷ ಪಾರ್ಕಿಂಗ್ ವ್ಯವಸ್ಥೆಯನ್ನು ದೇವಸ್ಥಾನದ ವತಿಯಿಂದ ಟೆಂಡರ್‌ ಕರೆದು ದೇವಸ್ಥಾನಕ್ಕೆ ಸುಮಾರು 80 ಲಕ್ಷ ರುಪಾಯಿ ಆದಾಯ ಬರುವಂತೆ ನಡೆದುಕೊಳ್ಳಲಾಗುತ್ತಿದೆ. ಆದರೆ ಕೆಲವರು ರಾಜಕೀಯ ಪಿತೂರಿ ನಡೆಸಿ ವರ್ಷಕ್ಕೆ ಕೇವಲ ಎರಡು ಲಕ್ಷಕ್ಕೆ ಐದು ವರ್ಷಕ್ಕೆ ಹತ್ತು ಲಕ್ಷ ರುಪಾಯಿಗಳ ಮೊತ್ತಕ್ಕೆ ಮಾಡಿಕೊಂಡು ಬಂದಿದ್ದಾರೆ. ದೇವಸ್ಥಾನಕ್ಕೆ ಆದಾಯ ಬರುವುದನ್ನು ತಪ್ಪಿಸಿದ್ದಾರೆ. ದೇವಸ್ಥಾನಕ್ಕೆ ಆದಾಯ ಬಂದರೆ ದಾಸೋಹ, ಶೌಚಾಲಯ, ಕುಡಿಯುವ ನೀರು, ನೌಕರರ ಸಂಬಳ ಇತ್ಯಾದಿ ನಿರ್ವಹಿಸಲು ಸಾಧ್ಯ. ಆದರೆ ಸರ್ಕಾರದ ಹಣವನ್ನು ವಾಮಮಾರ್ಗದಲ್ಲಿ ನುಂಗುತ್ತಿದ್ದಾರೆ. ಕೂಡಲೇ ಟೆಂಡರನ್ನು ನಿಲ್ಲಿಸಿ ದೇವಸ್ಥಾನದಿಂದ ವಸೂಲಿ ಮಾಡಿಸಿ ದೇವಸ್ಥಾನದ ಅಭಿವೃದ್ಧಿಗಾಗಿ ಕೆಲಸ ಮಾಡಬೇಕೆಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರಲ್ಲದೆ ಪ್ರವಾಸೋದ್ಯಮ ಇಲಾಖೆ ಮತ್ತು ಮುಜರಾಯಿ ಇಲಾಖೆ ನಡುವೆ ಹೊಂದಾಣಿಕೆ ಇಲ್ಲದೇ ಯಾವುದೇ ಅಭಿವೃದ್ಧಿ ಕಂಡುಬರುತ್ತಿಲ್ಲ, ವಾಹನಗಳನ್ನು ನಿಲ್ಲಿಸಲು ಸರಿಯಾದ ಮಾರ್ಗವಿಲ್ಲ. ಅಧಿಕಾರಿಗಳು ಭೇಟಿ ನೀಡುತ್ತಾರೆ ಹೋಗುತ್ತಾರೆ, ಯಾವುದೇ ಕೆಲಸ ನಡೆಯುತ್ತಿಲ್ಲ. ದೇವಸ್ಥಾನದ ಪಕ್ಕದಲ್ಲಿರುವ ನವರಂಗ ಮಂಟಪ ದುಸ್ಥಿತಿಯಲ್ಲಿದ್ದು, ಯಾವಾಗ ಬೇಕಾದರೂ ಬೀಳಬಹುದು, ಅದನ್ನು ಸರಿಪಡಿಸಿ ಎಂದು ಹೇಳಿದರು.

ಸಭೆಗೂ ಮೊದಲು ಪುರಸಭೆ ಅಧ್ಯಕ್ಷರ ನೇತೃತ್ವದಲ್ಲಿ ದೇವಸ್ಥಾನದಿಂದ ವೇಲಾಪುರಿ ಪ್ರವಾಸಿ ಮಂದಿರದವರೆಗೆ ಪ್ರವಾಸೋದ್ಯಮ ಇಲಾಖೆ ವಿರುದ್ಧ ಘೋಷಣೆ ಕೂಗುತ್ತ ಮೆರವಣಿಗೆ ಬಂದರು.

ಈ ಸಂದರ್ಭದಲ್ಲಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಚಂದ್ರಶೇಖರ್‌, ಜಯ ಕರ್ನಾಟಕ ತಾಲೂಕು ಅಧ್ಯಕ್ಷ ರಾಜು, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು, ಪೊಲೀಸ್ ಇನ್ಸ್‌ಪೆಕ್ಟರ್‌ ಎಸ್ ಜಿ ಪಾಟೀಲ್, ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಯೋಗೇಶ್, ದೇವಸ್ಥಾನದ ಆಡಳಿತ ಮಂಡಳಿ ಮಾಜಿ ಅಧ್ಯಕ್ಷರು, ಸದಸ್ಯರು, ಪ್ರಗತಿಪರ ಸಂಘಟನೆ ಮುಖಂಡರು ದೇವಸ್ಥಾನದ ಸುಂಕ ವಸೂಲಿ ಗುತ್ತಿಗೆದಾರರಾದ ಧರ್ಮೇಗೌಡ, ಮಂಜುನಾಥ್, ಗಿರೀಶ್, ಮಂಜುನಾಥ್ ಆನಂದ್, ಹೋಟೆಲ್ ಮಯೂರವೇಲಾಪುರಿ ವ್ಯವಸ್ಥಾಪಕರಾದ ಶ್ರೇಯಸ್, ಪಾಪಣ್ಣ, ಪುರಸಭೆ ಸದಸ್ಯ ಜಗದೀಶ್ ಸತೀಶ್ ಇನ್ನು ಮುಂತಾದವರಿದ್ದರು.