ಸಾರಾಂಶ
ಕನ್ನಡಪ್ರಭ ವಾರ್ತೆ, ತರೀಕೆರೆ
ವಿವಿಧ ಸುರಕ್ಷತಾ ಪರಿಕರಗಳನ್ನು ಪೌರಕಾರ್ಮಿಕರು ಬಳಸಬೇಕೆಂದು ಪುರಸಭೆ ಅಧ್ಯಕ್ಷ ಪರಮೇಶ್ ಹೇಳಿದ್ದಾರೆ.ಶುಕ್ರವಾರ ಪುರಸಭಾ ಕಾರ್ಯಾಲಯದಿಂದ ಕನಕ ಕಲಾ ಭವನದಲ್ಲಿ ಏರ್ಪಡಿಸಿದ್ದ ಪೌರಕಾರ್ಮಿಕರಿಗೆ ಸುರಕ್ಷತಾ ಪರಿಕರಗಳ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ವಚ್ಛತಾ ಕಾರ್ಯ ನಿರ್ವಹಿಸುವಾಗ ವಿವಿಧ ರೀತಿ ತ್ಯಾಜ್ಯ ವಸ್ತುಗಳು ಬರುತ್ತವೆ. ಅಪಾಯಕಾರಿ ತ್ಯಾಜ್ಯ ವಸ್ತುಗಳು ಇರುತ್ತವೆ, ಆದುದರಿಂದ ಪೌರಕಾರ್ಮಿಕರು
ಕೈಗಳಿಗೆ ಸುರಕ್ಷಿತವಾದ ಹ್ಯಾಂಡ್ ಗ್ಲೌಸ್ ಹಾಕಿ, ಗಮ್ ಬೂಟ್ಸ್, ಹೆಲ್ಮಟ್ ಧರಿಸಬೇಕು ಎಂದು ಹೇಳಿದರು.ಪುರಸಭೆ ಸದಸ್ಯ ಟಿ.ದಾದಾಪೀರ್ ಮಾತನಾಡಿ ಪೌರಕಾರ್ಮಿಕರಿಗೆ ಸುರಕ್ಷತಾ ಪರಿಕರ ವಿತರಿಸುವುದು ಬಹಳ ಒಳ್ಳೆಯ ಕಾರ್ಯಕ್ರಮ. ಪೌರಕಾರ್ಮಿಕರ ಸೇವೆ ದೇಶಸೇವೆ ಮತ್ತು ದೇವರ ಸೇವೆ. ಪಟ್ಟಣವನ್ನು ಆರೋಗ್ಯವಾಗಿಡುವಂತಹ ಪೌರಕಾರ್ಮಿಕರ ಬದುಕು ಕೂಡ ಆರೋಗ್ಯಕರವಾಗಿರಬೇಕು. ದೆಹಲಿಯಲ್ಲಿ ನಡೆದ ಜಿ.ಶೃಂಗ ಸಭೆಯಲ್ಲಿ 2030ಕ್ಕೆ ದೇಶದಲ್ಲಿ ತ್ಯಾಜ್ಯ ಉತ್ಪಾದನೆ ಕೊನೆಗಾಣಿಸಬೇಕು ಎಂದು ನಿರ್ಣಯ ಮಾಡಲಾಗಿದ್ದು, ನಾಗರಿಕರೆಲ್ಲರೂ ಇದಕ್ಕೆ ಬದ್ಧರಾಗಿರಬೇಕು. ಸುರಕ್ಷತಾ ಪರಿಕರಗಳನ್ನು ಬಳಸದಿದ್ದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.
ಪುರಸಭೆ ಸದಸ್ಯ ಟಿ.ಜಿ.ಅಶೋಕ್ ಕುಮಾರ್ ಮಾತನಾಡಿ ತರೀಕೆರೆ ಪುರಸಭೆ ಸ್ವಚ್ಛತೆಯಲ್ಲಿ ಅಗ್ರಸ್ಥಾನ ಗಳಿಸಿರುವುದಕ್ಕೆ ಪೌರಕಾರ್ಮಿಕರೇ ಕಾರಣ. ಎಲ್ಲರ ಆರೋಗ್ಯ ಕಾಪಾಡುವ ಪೌರಕಾರ್ಮಿಕರು ಆರೋಗ್ಯವಾಗಿರಬೇಕು ಎಂದರು.ಪುರಸಭೆ ಸದಸ್ಯ ಟಿ.ಎಂ.ಬೋಜರಾಜ್ ಮಾತನಾಡಿ ಹೆಮ್ಮೆ ಪಡುವಂತಹ ಕಾರ್ಯವನ್ನು ಪೌರಕಾರ್ಮಿಕರು ನಿರ್ವಹಿಸುತ್ತಾರೆ. ಸ್ವಚ್ಛ ನಗರವನ್ನಾಗಿಸಲು ಪೌರಕಾರ್ಮಿಕರೇ ಕಾರಣ. ಪಟ್ಟಣದಲ್ಲಿ ಸ್ವಚ್ಛತೆ, ಪೌರಕಾರ್ಮಿಕರ ಆರೋಗ್ಯ ಕಾಪಾಡುವ ಜವಾಬ್ದಾರಿ ಪುರಸಭೆಯದ್ದಾಗಿದೆ. ಪೌರಕಾರ್ಮಿಕರು ಸುರಕ್ಷತಾ ಪರಿಕರಗಳನ್ನು ಉಪಯೋಗಿಸಿ ಕೊಳ್ಳಬೇಕು, ಕಸದಿಂದ ಗೊಬ್ಬರ ತಯಾರಿಸಿದರೆ ಪುರಸಭೆಗೂ ಲಾಭ ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮಾತನಾಡಿ ತರೀಕೆರೆ ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡುವುದರಲ್ಲಿ ಪೌರ ಕಾರ್ಮಿಕರ ಕಾರ್ಯಕ್ಷಮತೆ ಶ್ಲಾಘನೀಯ. ತರೀಕೆರೆ ಪುರಸಭೆ ಸ್ವಚ್ಛತೆ ಕಾಪಾಡುವುದರಲ್ಲಿ ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದೆ. ನಿತ್ಯ ಕಸ ನಿರ್ವಹಿಸುವಂತಹ ಕಾರ್ಯ ನಿರಂತರ. ತ್ಯಾಜ್ಯ ನಿರ್ವಹಣೆ ಕಾರ್ಯ ವೈಜ್ಞಾನಿಕವಾಗಿ ವಿಲೇವಾರಿ ಆಗಬೇಕು, ತ್ಯಾಜ್ಯ ಪದಾರ್ಥಗಳಿಂದ ಗೊಬ್ಬರ ತಯಾರಿಸಬೇಕು, ಒಣ ಕಸ, ಹಸಿ ಕಸ ವಿಂಗಡಣೆ ಕಾರ್ಯ ನಿಜಕ್ಕೂ ಸವಾಲಿನ ಕೆಲಸ, ಬಿ.ಎಸ್.ಎಫ್ ಲಾರ್ವ ಬಳಕೆಯಿಂದ ತ್ಯಾಜ್ಯದಿಂದ ಗೊಬ್ಬರ ತಯಾರಿಸಲಾಗುತ್ತಿದ್ದು, ಲಾರ್ವಗಳ ಉತ್ಪತ್ತಿಯಲ್ಲಿ ತರೀಕೆರೆ ಪುರಸಭೆ ಮಹತ್ತರ ದಾಪುಗಾಲು ಹಾಕುತ್ತಿದೆ. ಲಾರ್ವಗಳ ಉತ್ಪತ್ತಿ ರಾಜ್ಯದಲ್ಲೇ ವಿನೂತವಾದ ಪ್ರಯತ್ನವಾಗಿದೆ ಎಂದು ತಿಳಿಸಿದರು.ಘನತ್ಯಾಜ್ಯ ವಸ್ತು ನಿರ್ವಹಣೆ ರಾಜ್ಯ ಮಟ್ಟದ ಸಲಹೆ ಸಮಿತಿ ಸದಸ್ಯೆ, ಪುರಸಭೆ ಪರಿಸರ ಅಭಿಯಂತರರಾದ ತಾಹೇರಾ ತಸ್ನಿಂ ಮಾತನಾಡಿ ಸ್ವಚ್ಛತಾ ಕಾರ್ಯದಲ್ಲಿ ವಿವಿಧ ರೀತಿಯ ತ್ಯಾಜ್ಯ ಪದಾರ್ಥಗಳು ಬರುತ್ತವೆ, ಅಪಾಯಕಾರಿ ವಸ್ತುಗಳು ಬರುತ್ತವೆ, ಆದುದರಿಂದ ಪೌರಕಾರ್ಮಿಕರು ಹ್ಯಾಂಡ್ ಗ್ಲೌಸ್ ಇತ್ಯಾದಿ ಸುರಕ್ಷತಾ ಪರಿಕರ ಬಳಸಬೇಕು. ಪೌರಕಾರ್ಮಿಕರ ಕುಟುಂಬದ ಸುರಕ್ಷತೆ ದೃಷ್ಠಿಯಿಂದಲೂ ಸುರಕ್ಷತಾ ಪರಿಕರಗಳನ್ನು ಪೌರಕಾರ್ಮಿಕರು ಬಳಸಬೇಕು ಎಂದು ಮನವಿ ಮಾಡಿದರು.
ಶ್ರೀ ರೇವಣ ಸಿದ್ದೇಶ್ವರ ವ್ಯವಸಾಯ ಪತ್ತಿನ ಸಹಕಾರ ಸಂಘದ ನಿರ್ದೇಶಕ ಗಿರಿರಾಜ್, ಸಸೇರಾ ಕಂಪನಿಯ ಅಭಿಷೇಕ್, ಹಿರಿಯ ಆರೋಗ್ಯ ನಿರೀಕ್ಷಕರಾದ ಮಹೇಶ್ವರಪ್ಪ ಇತರರಿದ್ದರು.12ಕೆಟಿಆರ್.ಕೆ.1ಃತರೀಕೆರೆಯಲ್ಲಿ ಪುರಸಭಾ ಕಾರ್ಯಾಲಯದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಪರಮೇಶ್ ಪೌರಕಾರ್ಮಿಕರಿಗೆ ಸುರಕ್ಷತಾ ಪರಿಕರಗಳನ್ನು ವಿತರಿಸಿದರು. ಪುರಸಭೆ ಸದಸ್ಯರಾದ ಟಿ.ದಾದಾಪೀರ್, ಟಿ.ಜಿ.ಅಶೋಕ್ ಕುಮಾರ್, ಟಿ.ಎಂ.ಭೋಜರಾಜ್, ಶ್ರೀ ರೇವಣ ಸಿದ್ದೇಶ್ವರ ವ್ಯವಸಾಯ ಪತ್ತಿನ ಸಹಕಾರ ಸಂಘದ ನಿರ್ದೇಶಕ ಗಿರಿರಾಜ್, ಮುಖ್ಯಾಧಿಕಾರಿ ಎಚ್.ಪ್ರಶಾಂತ್, ಪರಿಸರ ಅಭಿಯಂತರರಾದ ತಾಹೇರ ತಸ್ನಿಂ, ಹಿರಿಯ ಆರೋಗ್ಯಾಧಿಕಾರಿ ಮಹೇಶ್ನರಪ್ಪ ಮತ್ತಿತರರು ಇದ್ದರು.