ಸಾರಾಂಶ
ಅಜೀಜಅಹ್ಮದ ಬಳಗಾನೂರ ಹುಬ್ಬಳ್ಳಿ
ಸುಮಾರು 48 ವರ್ಷಗಳ ಇತಿಹಾಸ ಹೊಂದಿರುವ ಇಲ್ಲಿನ ಬಸವವನದ ಬಳಿ ಇರುವ ಹು-ಧಾ ಮಹಾನಗರ ಪಾಲಿಕೆಯ ಈಜುಗೊಳ ಶೀಘ್ರದಲ್ಲಿಯೇ ಖಾಸಗಿ ತೆಕ್ಕೆಗೆ ಹೋಗಲಿದೆಯೇ? ಇಂತಹದೊಂದು ಚರ್ಚೆ ಕಳೆದ ಹಲವು ದಿನಗಳಿಂದ ನಗರದೆಲ್ಲೆಡೆ ಕೇಳಿಬರುತ್ತಿದೆ.ಈಜುಗೊಳದ ನಿರ್ವಹಣೆ ವೆಚ್ಚ ಹೆಚ್ಚಳ, ಸ್ವಚ್ಛತೆ, ನೀರಿನ ಗುಣಮಟ್ಟ ಕಾಪಾಡುವುದು, ಕೆಲಸ ನಿರ್ವಹಿಸುತ್ತಿರುವ 12 ಸಿಬ್ಬಂದಿಗೆ ಸಂಬಳ ನೀಡುವುದು, ಇತರ ಮೂಲಸೌಕರ್ಯ ಒದಗಿಸುವುದು ಹೆಚ್ಚು ಖರ್ಚುದಾಯಕವಾಗಿದೆ. ಇದನ್ನು ಸರಿದೂಗಿಸಲು ಪಾಲಿಕೆಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಹೀಗಾಗಿ, ನಿರ್ವಹಣೆ ಸರಿದೂಗಿಸಲು ಪಾಲಿಕೆ ವ್ಯಾಪ್ತಿಯಲ್ಲಿರುವ ಈಜುಗೊಳವನ್ನು ಖಾಸಗಿಯವರಿಗೆ ನೀಡುವ ಯೋಚನೆ ಪಾಲಿಕೆಯದ್ದಾಗಿದೆ. ಈಗಾಗಲೇ ಇದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಸೋಮವಾರ ನಡೆಯುವ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ವಿಷಯ ಚರ್ಚೆಗೆ ತಂದು ಜಾರಿಗೊಳಿಸುವ ಚಿಂತನೆ ನಡೆಸಿದೆ.
1977ರಲ್ಲಿ ನಿರ್ಮಾಣ: 26 ಜೂನ್ 1977ರಲ್ಲಿ 6 ಲಕ್ಷ ಗ್ಯಾಲನ್ ಸಾಮರ್ಥ್ಯದ ಅಂತಾರಾಷ್ಟ್ರೀಯ ಗುಣಮಟ್ಟದ ಈಜುಗೊಳವನ್ನು ರಾಜ್ಯದ ಪೌರಾಡಳಿತ ಸಚಿವರಾಗಿದ್ದ ಡಿ.ಕೆ. ನಾಯ್ಕರ್ ಅಧ್ಯಕ್ಷತೆಯಲ್ಲಿ ಅಂದಿನ ಮುಖ್ಯಮಂತ್ರಿ ಡಿ. ದೇವರಾಜ ಅರಸು ಉದ್ಘಾಟಿಸಿದ್ದರು.ನಿರ್ವಹಣೆಗೆ ನೂರಾರು ಮಳಿಗೆಗಳು: ಈಜುಗೊಳ ನಿರ್ವಹಣೆಗೆ ಬರುವ ಖರ್ಚು, ವೆಚ್ಚ ಸರಿದೂಗಿಸುವುದಕ್ಕಾಗಿ ಈಜುಗೊಳದ ಸುತ್ತಲೂ ನೂರಾರು ವ್ಯಾಪಾರಿ ಮಳಿಗೆಗಳನ್ನು ನಿರ್ಮಿಸಲಾಗಿದೆ. ಈ ಮಳಿಗೆಗಳಿಂದಲೇ ಪಾಲಿಕೆಗೆ ಪ್ರತಿತಿಂಗಳು ಲಕ್ಷಾಂತರ ರುಪಾಯಿ ಆದಾಯ ಬರುತ್ತಿದೆ. ಆದರೆ, ಈಗ ಈಜುಗೊಳ ನಿರ್ವಹಣೆಗೆ ಅನುದಾನ ಸಾಕಾಗುತ್ತಿಲ್ಲ ಎಂಬ ನೆಪವೊಡ್ಡಿ ಖಾಸಗಿಯವರಿಗೆ ಗುತ್ತಿಗೆ ನೀಡಲು ಉದ್ದೇಶಿಸಿರುವುದು ಈಜುಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.
ಸಿಬ್ಬಂದಿ ಕೊರತೆ: 1977ರಲ್ಲಿ ಉದ್ಘಾಟನೆಯಾಗಿದ್ದ ಈಜುಗೊಳ ನಿರ್ವಹಣೆಗಾಗಿ ಒಟ್ಟು 24 ಸಿಬ್ಬಂದಿ ನೇಮಕ ಮಾಡಲಾಗಿತ್ತು. ಅದರಲ್ಲಿ 7 ಕಾಯಂ ನೌಕರರು, 7 ಲೈಫ್‌ಗಾರ್ಡ್, 7 ಮಂದಿ ಸ್ವಚ್ಛತಾಕರ್ಮಿಗಳನ್ನು ನೇಮಿಸಲಾಗಿತ್ತು. ಆದರೀಗ, ಓರ್ವ ಮೇಲ್ವಿಚಾರಕ, ನಾಲ್ವರು ಲೈಫ್‌ಗಾರ್ಡ್, ಮೂವರು ಸ್ವಚ್ಛತಾಕರ್ಮಿಗಳು ಸೇರಿ ಕೇವಲ 8 ಜನ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.4 ತಿಂಗಳಿನಿಂದ ವೇತನವಿಲ್ಲ: ಇರುವ 8 ಸಿಬ್ಬಂದಿಗೆ ಕಳೆದ ಡಿಸೆಂಬರ್ ತಿಂಗಳಿನಿಂದ ಪಾಲಿಕೆ ವೇತನ ನೀಡದಿರುವುದರಿಂದ ಸಂಕಷ್ಟದ ಜೀವನ ಕಳೆಯುವಂತಾಗಿದೆ. ಸಿಬ್ಬಂದಿ ಪಾಲಿಕೆ ಆಯುಕ್ತರು, ಮೇಯರ್ ಭೇಟಿಯಾಗಿ ಮನವಿ ಮಾಡಿದರೂ ಈ ವರೆಗೂ ವೇತನವಿಲ್ಲದೇ ದಿನದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ದಿಢೀರ್ ಶುಲ್ಕ ಏರಿಕೆ:ಈಜುಗೊಳಕ್ಕೆ ಆಗಮಿಸುವ ಪ್ರತಿಯೊಬ್ಬರಿಗೆ ಈ ಹಿಂದೆ ಗಂಟೆಗೆ ₹50 ನಿಗದಿಗೊಳಿಸಲಾಗಿತ್ತು. ಕಳೆದ ಏಪ್ರಿಲ್ 4ರಿಂದ ಬರೋಬ್ಬರಿ ₹100 ನಿಗದಿಗೊಳಿಸಲಾಗಿದೆ. ಇದರಿಂದಾಗಿ ಈಜುಗೊಳಕ್ಕೆ ಆಗಮಿಸುವವರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಶುಲ್ಕ ಏರಿಕೆ ಪೂರ್ವದಲ್ಲಿ ಪ್ರತಿನಿತ್ಯ 500ಕ್ಕೂ ಅಧಿಕ ಜನರು ಈಜುಗೊಳಕ್ಕೆ ಆಗಮಿಸುತ್ತಿದ್ದರು. ರಜಾ ದಿನಗಳಲ್ಲಿ 600-700ಕ್ಕೂ ಅಧಿಕ ಜನರು ಆಗಮಿಸುತ್ತಿದ್ದರು. ಆದರೀಗ ನಿತ್ಯ 150-200 ಜನ ಆಗಮಿಸುತ್ತಿಲ್ಲ.
ಖಾಸಗಿಗೆ ನೀಡಲು ಶುಲ್ಕ ಏರಿಕೆ:ಬೆಂಗಳೂರು ಸೇರಿದಂತೆ ಬೇರೆ ನಗರಗಳಲ್ಲಿರುವ ಪಾಲಿಕೆ ವ್ಯಾಪ್ತಿಯ ಈಜುಗೊಳಗಳಿಗೆ ₹40-₹50 ಶುಲ್ಕವಿದ್ದರೆ ಹು-ಧಾ ಮಹಾನಗರದ ಈಜುಗೊಳದ ಶುಲ್ಕ ದುಪ್ಪಟ್ಟು ಅಂದರೆ ₹100 ಮಾಡಲಾಗಿದೆ. ಇದನ್ನು ಯಾವ ಮಾನದಂಡದ ಆಧಾರದ ಮೇಲೆ ಹೆಚ್ಚಿಸಿದ್ದಾರೆ ಎಂಬ ಮಾಹಿತಿ ಅಧಿಕಾರಿಗಳ ಬಳಿ ಇಲ್ಲ. ಖಾಸಗಿ ತೆಕ್ಕೆಗೆ ನೀಡುವ ಉದ್ದೇಶದಿಂದಲೇ ಈಜುಗೊಳದ ಶುಲ್ಕ ಏರಿಸಿದ್ದಾರೆ ಎಂದು ನಗರದ ದೀಪಕ್ ಕಟಾವಕರ್ "ಕನ್ನಡಪ್ರಭ "ದ ಜತೆ ಅಭಿಪ್ರಾಯ ಹಂಚಿಕೊಂಡರು.
ನಿರ್ವಹಣೆಯ ಕೊರತೆಯ ನೆಪದಲ್ಲಿ ಪಾಲಿಕೆಯ ಒಡೆತನದಲ್ಲಿರುವ ಈಜುಗೊಳವನ್ನು ಖಾಸಗಿಗೆ ನೀಡಲು ನಮ್ಮ ವಿರೋಧವಿದೆ. ಖಾಸಗಿಗೆ ನೀಡಲು ಮುಂದಾದರೆ ನಾವು ಅನಿವಾರ್ಯವಾಗಿ ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ಪಾಲಿಕೆ ಸದಸ್ಯೆ ಹಾಗೂ ಪ್ರತಿಪಕ್ಷದ ಮಾಜಿ ನಾಯಕಿ ಸುವರ್ಣಾ ಕಲ್ಲಕುಂಟ್ಲಾ ತಿಳಿಸಿದರು.ಈಜುಗೊಳದ ನಿರ್ವಹಣೆ, ಆವರಣ ಸ್ವಚ್ಛತೆಗೆ ಆದ್ಯತೆ ನೀಡುವ ಉದ್ದೇಶದಿಂದ ಕೆಲವು ದಿನಗಳ ಹಿಂದೆ ಶುಲ್ಕ ಹೆಚ್ಚಿಸಲಾಗಿದೆ. ಖರ್ಚು ಸರಿದೂಗದೇ ಇದ್ದರೆ ಮುಂದೆ ಖಾಸಗಿಯವರಿಗೆ ಗುತ್ತಿಗೆ ನೀಡುವ ಯೋಚನೆಯಿದೆ ಎಂದು ಪಾಲಿಕೆ ಮೇಯರ್ ರಾಮಪ್ಪ ಬಡಿಗೇರ ತಿಳಿಸಿದರು.