ಸಾರಾಂಶ
ಲಕ್ಷ್ಮೇಶ್ವರ: ಪೌರ ಕಾರ್ಮಿಕರು ನಮ್ಮ ಪಟ್ಟಣದ ಸ್ವಚ್ಛತೆಯ ಹರಿಕಾರರು. ಹೊಸ ವರ್ಷ ಅವರ ಬಾಳಿನಲ್ಲಿ ಹೊಸತನ ತುಂಬಲಿ ಎನ್ನುವುದು ನಮ್ಮೆಲ್ಲರ ಆಶಯವಾಗಿದೆ ಎಂದು ಲಕ್ಷ್ಮೇಶ್ವರ ತಹಸೀಲ್ದಾರ್ ವಾಸುದೇವ ಸ್ವಾಮಿ ಪಟ್ಟಣದ ಪೌರ ಕಾರ್ಮಿಕರಿಗೆ ಹೊಸ ಬಟ್ಟೆ ಹಾಗೂ ಸಿಹಿ ಹಂಚಿ ಹೊಸ ವರ್ಷಾಚರಣೆ ಮಾಡಿ ಸಂಭ್ರಮಿಸಿದ್ದು ಕಂಡು ಬಂದಿತು.
ಬುಧವಾರ ಪಟ್ಟಣದ ಪುರಸಭೆಯ ಆವರಣದಲ್ಲಿ ತಹಸೀಲ್ದಾರ್ ವಾಸುದೇವ ಸ್ವಾಮಿ ಪೌರ ಕಾರ್ಮಿಕರಿಗೆ ಸಿಹಿ ಹಂಚಿ ಮಾತನಾಡಿದರು.ಪೌರ ಕಾರ್ಮಿಕರು ನಮ್ಮ ಪಟ್ಟಣದ ಆರೋಗ್ಯ ಕಾಪಾಡುವ ವೀರ ಯೋಧರು ಇದ್ದ ಹಾಗೆ.ಪೌರ ಕಾರ್ಮಿಕರ ಬಾಳಿನಲ್ಲಿ ಹೊಸ ವರ್ಷ ಸಿಹಿಯಿಂದ ಕೂಡಿರಲಿ ಎನ್ನುವ ಉದ್ದೇಶದಿಂದ ಅವರೊಂದಿಗೆ ಹೊಸ ವರ್ಷಾಚರಣೆ ಮಾಡುತ್ತಿದ್ದೇವೆ.ಪೌರ ಕಾರ್ಮಿಕರು ಪ್ರತಿನಿತ್ಯ ಸಾರ್ವಜನಿಕರು ಎತ್ತಿ ಬೀಸಾಡುವ ಕಸ ಸ್ವಚ್ಛಗೊಳಿಸಿ ಪಟ್ಟಣದ ಅಂದ ಮತ್ತು ಸಾರ್ವಜನಿಕರ ಆರೋಗ್ಯ ಕಾಪಾಡುವ ಗುರುತರ ಕಾರ್ಯ ಪೌರ ಕಾರ್ಮಿಕರು ಮಾಡುತ್ತಿರುವುದು ಸ್ತುತ್ಯಾರ್ಹ ಸಂಗತಿಯಾಗಿದೆ ಎಂದು ಹೇಳಿದರು.
ಈ ವೇಳೆ ಪುರಸಭೆಯ ಮುಖ್ಯಾಧಿಕಾರಿ ಮಹೇಶ ಹಡಪದ ಮಾತನಾಡಿ, ಪೌರ ಕಾರ್ಮಿಕರು ನಮ್ಮ ಸ್ವಚ್ಚತೆಯ ಸೇನಾನಿಗಳಾಗಿದ್ದಾರೆ. ಅವರ ಆರೋಗ್ಯ ನಮಗೆ ಅತಿ ಮುಖ್ಯವಾಗಿದೆ. ಪಟ್ಟಣದ ಸ್ವಚ್ಛತೆಗೆ ಶ್ರಮಿಸುವ ಮೂಲಕ ತಮ್ಮ ಆರೋಗ್ಯ ಲೆಕ್ಕಿಸದೆ ದುಡಿಯುತ್ತಿರುವ ಪೌರ ಕಾರ್ಮಿಕರ ಶ್ರಮಕ್ಕೆ ಬೆಲೆ ಕಟ್ಟಲಾಗದು ಎಂದು ಹೇಳಿದರು.ಈ ವೇಳೆ ಪುರಸಭೆಯ ಅಧ್ಯಕ್ಷೆ ಯಲ್ಲವ್ವ ದುರಗಣ್ಣವವರ, ರಾಜು ಕುಂಬಿ, ಬಸವರಾಜ ಓದುನವರ, ಬಸವಣ್ಣೆಪ್ಪ ನಂದೆಣ್ಣವರ, ತಾಪಂ ಇಓ ಕೃಷ್ಣಪ್ಪ ಧರ್ಮರ, ಪಿಎಸ್‌ಐ ನಾಗರಾಜ ಗಡದ, ಮಂಜುನಾಥ ಮುದಗಲ್ಲ ಇದ್ದರು.