ಸಾರಾಂಶ
ತಮ್ಮ ಬಹುವರ್ಷಗಳ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪೌರ ನೌಕರರ ಸಂಘ ರಾಜ್ಯ ಘಟಕದ ಆದೇಶದ ಮೇರೆಗೆ ತಾಲೂಕು ಘಟಕದ ವತಿಯಿಂದ ಮುಂಡರಗಿ ಪುರಸಭೆ ಪೌರ ನೌಕರರು ಏ.11ರಿಂದ ಕೈಗೆ ಕಪ್ಪುಬಟ್ಟೆ ಧರಿಸಿ ಕರ್ತವ್ಯ ನಿರ್ವಹಿಸುವ ಮೂಲಕ ಪ್ರತಿಭಟನೆ ಪ್ರಾರಂಭಿಸಿದ್ದಾರೆ.
ಮುಂಡರಗಿ: ತಮ್ಮ ಬಹುವರ್ಷಗಳ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪೌರ ನೌಕರರ ಸಂಘ ರಾಜ್ಯ ಘಟಕದ ಆದೇಶದ ಮೇರೆಗೆ ತಾಲೂಕು ಘಟಕದ ವತಿಯಿಂದ ಮುಂಡರಗಿ ಪುರಸಭೆ ಪೌರ ನೌಕರರು ಏ.11ರಿಂದ ಕೈಗೆ ಕಪ್ಪುಬಟ್ಟೆ ಧರಿಸಿ ಕರ್ತವ್ಯ ನಿರ್ವಹಿಸುವ ಮೂಲಕ ಪ್ರತಿಭಟನೆ ಪ್ರಾರಂಭಿಸಿದ್ದಾರೆ.
ಈ ಕುರಿತು ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಮೈಲಪ್ಪ ದೊಡ್ಡಮನಿ ಕನ್ನಡಪ್ರಭದೊಂದಿಗೆ ಮಾತನಾಡಿ, ಕಂಪ್ಯೂಟರ್ ಆಪರೇಟರ್, ಮಸೀನ್ ಆಪರೇಟರ್, ಟ್ರ್ಯಾಕ್ಟರ್ ಚಾಲಕರು, ಕ್ಲೀನರ್ಸ್, ಲೋಡರ್ಸ್, ವಾಟರ್ ಸಫ್ಲೈಯರ್ಸ್ ಸೇರಿದಂತೆ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಎಲ್ಲರನ್ನೂ ಸರ್ಕಾರ ಕಾಯಂ ಮಾಡಬೇಕು ಎನ್ನುವ ಕುರಿತು ಹಲವಾರು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.ನಮ್ಮದು ಪೌರ ಕಾರ್ಮಿಕರ ಕಾರ್ಯ ಎಂದರೆ ನಿತ್ಯವೂ ಚರಂಡಿ, ಕಸದ ಜತೆಗೆ ಕೆಲಸ ಮಾಡುವುದು. ಹೀಗಾಗಿ ಪದೇ ಪದೇ ಅನಾರೋಗ್ಯವಾಗುತ್ತಿದ್ದು, ಈಗಾಗಲೇ ಕಾಯಂ ಆದ ಕಾರ್ಮಿಕರೆಲ್ಲರೂ ಸೇರಿದಂತೆ ಎಲ್ಲ ಕಾರ್ಮಿಕರಿಗೂ ಯಶಸ್ವಿನಿ ಆರೋಗ್ಯ ಕಾರ್ಡುಗಳನ್ನು ವಿತರಿಸುವಂತೆ ಅನೇಕ ಬಾರಿ ಒತ್ತಾಯಿಸಿದ್ದೇವಾದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಾಗಲೇ ಅನಾರೋಗ್ಯದಿಂದಾಗಿ ಅನೇಕ ಕಾರ್ಮಿಕರು ಮರಣ ಹೊಂದಿದ್ದಾರೆ.
ಆದ್ದರಿಂದ ಸರ್ಕಾರ ತಕ್ಷಣವೇ ನಮ್ಮ ಎಲ್ಲ ಪೌರ ಕಾರ್ಮಿಕರಿಗೂ ಯಶಸ್ವಿನಿ ಆರೋಗ್ಯ ಕಾರ್ಡ್ ವಿತರಿಸುವುದರ ಜತೆಗೆ ನಮ್ಮೆಲ್ಲ ಬೇಡಿಕೆಗಳನ್ನು ಈಡೇರಿಸಬೇಕು. ದಿನಗೂಲಿ ನೌಕರರನ್ನು ಕಾಯಂಗೊಳಿಸಬೇಕು. ಇದೀಗ ನಾವು 45 ದಿನಗಳ ಕಾಲ ಎಲ್ಲರೂ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುತ್ತಿದ್ದು, ಒಂದು ವೇಳೆ ಸರ್ಕಾರ ಅಷ್ಟರಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಹಂತ ಹಂತವಾಗಿ ಹೋರಾಟದ ರೂಪುರೇಷೆ ಬದಲಾಗುತ್ತವೆ ಎಂದವರು ತಿಳಿಸಿದರು.