ಸಾರಾಂಶ
ಬೀದಿ ಬದಿ ವ್ಯಾಪಾರಸ್ಥರ ಕಾಯ್ದೆಯ ಪ್ರಕಾರ ಒಂದು ವ್ಯಾಪಾರಸ್ಥರ ಸಮಿತಿ ಹಾಗೂ ಕುಂದು ಕೊರತೆಗಳ ಸಮಿತಿ ರಚನೆ ಮಾಡಬೇಕಿತ್ತು
ಗಜೇಂದ್ರಗಡ: ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರನ್ನು ಪುರಸಭೆ ಒಡೆದಾಳುವ ನೀತಿ ಅನುಸರಿಸುತ್ತಿದ್ದು, ತಳ್ಳುವ ಗಾಡಿ ಹಾಗೂ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮ ಬಹಿಷ್ಕರಿಸಿದ್ದೇವೆ ಎಂದು ಆರೋಪಿಸಿ ಇಲ್ಲಿನ ಕೆಲ ಬೀದಿ ಬದಿ ವ್ಯಾಪಾರಸ್ಥರು ದುರ್ಗಾ ವೃತ್ತದ ಬಳಿಯ ಈಶ್ವರ ದೇವಸ್ಥಾನದಲ್ಲಿ ಶನಿವಾರ ಸಭೆ ನಡೆಸಿದರು.
ಪಟ್ಟಣದಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ತಳ್ಳುವ ಗಾಡಿ ಹಾಗೂ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮವು ಬೀದಿ ಬದಿ ವ್ಯಾಪಾರಸ್ಥರಿಗೆ ತಿಳಿಸದೆ ಹಮ್ಮಿಕೊಂಡಿರುವುದು ಬೀದಿ ಬದಿ ವ್ಯಾಪಾರಸ್ಥರ ಕಾಯ್ದೆಯ ಉಲ್ಲಂಘನೆಯಾಗಿದೆ. ಬೀದಿ ಬದಿ ವ್ಯಾಪಾರಸ್ಥರ ಕಾಯ್ದೆಯ ಪ್ರಕಾರ ಒಂದು ವ್ಯಾಪಾರಸ್ಥರ ಸಮಿತಿ ಹಾಗೂ ಕುಂದು ಕೊರತೆಗಳ ಸಮಿತಿ ರಚನೆ ಮಾಡಬೇಕಿತ್ತು. ಆದರೆ ಕಳೆದ ೩ ತಿಂಗಳಿಂದ ಅವರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದು ಹೋರಾಟಕ್ಕೆ ಪುರಸಭೆ ಮುಖ್ಯಾಧಿಕಾರಿ, ತಹಸೀಲ್ದಾರರು ಹಾಗೂ ಪೋಲಿಸ್ ಅಧಿಕಾರಿಗಳು ಸೇರಿ ಹೋರಾಟಗಾರರ ಜತೆಗೆ ಜಂಟಿ ಸಭೆ ಮಾಡಿ ಜ.೩೧ ರೊಳಗೆ ಸಭೆ ನಡೆಸಿ ಬೇಡಿಕೆ ಈಡೇರಿಸುವ ಲಿಖಿತ ಭರವಸೆ ನೀಡಿ ಹೋರಾಟ ಹಿಂಪಡೆಯಲು ತಿಳಿಸಿದ್ದರಿಂದ ನಾವು ಹೋರಾಟ ಹಿಂಪಡೆದಿದ್ದೇವು. ಆದರೆ ಪುರಸಭೆ ಆಡಳಿತ ಹಾಗೂ ಶಾಸಕರು ಕೂಡಿಕೊಂಡು ಕೆಲವೇ ಕೆಲವು ಬೀದಿ ಬದಿ ವ್ಯಾಪಾರಸ್ಥರಿಗೆ ತಳ್ಳುಗಾಡಿ ಹಾಗೂ ಗುರುತಿನ ಚೀಟಿ ವಿತರಿಸಲು ಮುಂದಾಗುವ ಮೂಲಕ ಬೀದಿ ಬದಿ ವ್ಯಾಪಾರಸ್ಥರಲ್ಲಿ ಒಡಕು ಉಂಟುಮಾಡುತ್ತಿರುವುದು ಖಂಡನಾರ್ಹ ಎಂದು ಅಸಮಾಧಾನ ವ್ಯಕ್ತ ಪಡಿಸಿದ ಬೀದಿ ಬದಿ ವ್ಯಾಪಾರಸ್ಥರು, ಪಟ್ಟಣದಲ್ಲಿನ ಬೀದಿ ಬದಿ ವ್ಯಾಪಾರಸ್ಥರ ಬೇಡಿಕೆಗಳು ಪಟ್ಟಣದ ಜನರ ಬೇಡಿಕೆಯಾಗಿವೆ. ಆದರೆ ಶಾಸಕರು ಕೇವಲ ಮುಂದಾಳುಗಳ ಮಾತು ಕೇಳಿ ಜನವಿರೋಧಿ ಆಡಳಿತ ನಡೆಸುವುದು ಸಮಂಜಸವಲ್ಲ. ಹೀಗಾಗಿ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಯಲು ಮೀನಮೇಷ ಮಾಡಿದರೆ ಸುಪ್ರೀಂ ಕೋರ್ಟ್ ಆದೇಶ ಹಾಗೂ ಬೀದಿ ಬದಿ ವ್ಯಾಪಾರಸ್ಥರ ಕಾಯ್ದೆ ಅಡಿಯಲ್ಲಿ ನಾವು ಕಾನೂನು ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಸಿದರು.ಈ ವೇಳೆ ಪೀರು ರಾಠೋಡ, ಶಾಮೀದ್ ದಿಂಡವಾಡ, ಬಾಲು ರಾಠೋಡ, ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಮರೇಶ ಚವ್ಹಾಣ, ಮುತ್ತು ರಾಠೋಡ, ಮಂಜುಳಾ ಪವಾರ, ಚೌಡಮ್ಮ ಯಲ್ಪೊ, ರೇಣವ್ವ ರಾಠೋಡ, ಅನ್ವರ್ ಹೀರೆಕೊಪ್ಪ, ವಿಷ್ಣು ಚಂದನಕರ, ಕಳಕೇಶ ಮಾಳೋತ್ತರ, ದಾನಪ್ಪ ರಾಠೋಡ, ಬಾಷಾಸಾಬ್ ಮಾಲಾದ್ದಾರ್ ಇತರರು ಇದ್ದರು.