ಪುರಸಭೆ ಸಿಬ್ಬಂದಿ ಮೂಲಕ ಶಾಲೆಗೆ ಕಳುಹಿಸಿದರೂ ತೆಗೆದುಕೊಂಡಿಲ್ಲ. ನೋಟಿಸ್‌ನ್ನು ಶಾಲೆ ಮುಂಭಾಗ ಅಂಟಿಸಿದ್ದರೂ ರೋಟರಿ ವಿದ್ಯಾ ಸಂಸ್ಥೆ ಅವರು ಪುರಸಭೆ ಅಧಿಕಾರಿಗಳಿಗೆ ಸರಿಯಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ

ಮಳವಳ್ಳಿ: ಬಾಕಿ ತೆರಿಗೆ ಕಟ್ಟುವಂತೆ ಒತ್ತಾಯಿಸಿ ಪುರಸಭೆ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ ಸೇರಿದಂತೆ ಸಿಬ್ಬಂದಿ ಪಟ್ಟಣದ ರೋಟರಿ ವಿದ್ಯಾಸಂಸ್ಥೆ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಎಂ.ಸಿ ನಾಗರತ್ನ ಮಾತನಾಡಿ, ರೋಟರಿ ಶಾಲೆಯು ₹8 ಲಕ್ಷ ತೆರಿಗೆ ಕಟ್ಟಿದ್ದಾರೆ. 2012- 13, 2022- 23ರವರೆಗೆ ಇನ್ನೂ ₹55.99 ಲಕ್ಷ ಹಣ ಬಾಕಿ ಕಟ್ಟಬೇಕಾಗಿದೆ. ಈ ಬಗ್ಗೆ ರಿಜಿಸ್ಟರ್ ಪೋಸ್ಟ್ ಮೂಲಕ ನೋಟಿಸ್ ಕಳುಹಿಸಿದರೂ ಸ್ವೀಕರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪುರಸಭೆ ಸಿಬ್ಬಂದಿ ಮೂಲಕ ಶಾಲೆಗೆ ಕಳುಹಿಸಿದರೂ ತೆಗೆದುಕೊಂಡಿಲ್ಲ. ನೋಟಿಸ್‌ನ್ನು ಶಾಲೆ ಮುಂಭಾಗ ಅಂಟಿಸಿದ್ದರೂ ರೋಟರಿ ವಿದ್ಯಾ ಸಂಸ್ಥೆ ಅವರು ಪುರಸಭೆ ಅಧಿಕಾರಿಗಳಿಗೆ ಸರಿಯಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಪುರಸಭೆ ಸಿಬ್ಬಂದಿಗೆ ವೇತನ ನೀಡಲು ಹಣ ಇಲ್ಲ. ಹೀಗಾಗಿ ಪ್ರತಿಭಟನೆ ನಡೆಸಲಾಗುತ್ತಿದೆ. ರೋಟರಿ ಸಂಸ್ಥೆಯವರು ಸಮರ್ಪಕ ಉತ್ತರ ನೀಡುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಹೇಳಿದರು.

ಈ ವೇಳೆ ರೋಟರಿ ವಿದ್ಯಾಸಂಸ್ಥೆ ಅಧ್ಯಕ್ಷ ಹಬಿಉಲ್ಲಾಖಾನ್ ಮಾತನಾಡಿ, ಸಂಸ್ಥೆಗೆ ಯಾವುದೇ ನೋಟಿಸ್ ಬಂದಿಲ್ಲ. ಬಂದಿದ್ದರೆ ಆಡಳಿತ ಮಂಡಳಿ ಜೊತೆಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಿದ್ದೆವು ಎಂದು ಸ್ವಷ್ಟಪಡಿಸಿದರು.

ಪ್ರತಿಭಟನೆಯಲ್ಲಿ ಪುರಸಭೆ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಇದ್ದರು.